ಮಡಿಕೇರಿ, ಏ. 4: ಕೊಡವ ಕುಟುಂಬಗಳ ನಡುವಿನ 26ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವ ತಾ. 5 ರಿಂದ (ಇಂದಿನಿಂದ) ಪ್ರಾರಂಭಗೊಳ್ಳಲಿದೆ. ಈ ಬಾರಿಯ ಚೇನಂಡ ಕಪ್ ಹಾಕಿ ಉತ್ಸವಕ್ಕೆ ನಾಪೋಕ್ಲು ಸಜ್ಜಾಗಿದ್ದು, ಹಾಕಿ ಕಲರವ ಆರಂಭಗೊಂಡಿದೆ. ಬೆಳಿಗ್ಗೆ ನಾಪೋಕ್ಲುವಿನ ಪೊನ್ನಾಡ್ ಬಳಿಯಿಂದ ಚೇನಂಡ ಕುಟುಂಬಸ್ಥರು, ತವರುಮನೆ ಸಂಬಂಧಿಕರು, ಕೊಡವ ಹಾಕಿ ಅಕಾಡೆಮಿ, ಈ ಹಿಂದಿನ ಆಯೋಜಕರು ಸೇರಿದಂತೆ ನಾಲ್ಕುನಾಡಿನ ಜನತೆಯನ್ನೊಳಗೊಂಡ ಸಾಂಸ್ಕøತಿಕ ಮೆರವಣಿಗೆ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಸಾಗಿಬರಲಿದೆ. ಬಳಿಕ ಸಭಾ ಕಾರ್ಯಕ್ರಮ, ಪ್ರದರ್ಶನ ಪಂದ್ಯದೊಂದಿಗೆ ಹಾಕಿ ಉತ್ಸವ ಶುಭಾರಂಭಗೊಳ್ಳಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಪ್ರಮುಖರು, ಪ್ರಾಯೋಜಕರು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.