ನಾಪೋಕ್ಲು, ಏ. ೨: ನಾಪೋಕ್ಲುವಿನಲ್ಲಿ ಆಯೋಜಿಸಲಾಗಿರುವ ೨೬ನೇ ವರ್ಷದ ಹಾಕಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಚೇನಂಡ ಕುಟುಂಬಸ್ಥರು ತೋರುತ್ತಿರುವ ಉತ್ಸಾಹ, ಆಸಕ್ತಿ ಸ್ಮರಣೀಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.
ಕೊಕೇರಿ ಗ್ರಾಮದ ಚೇನಂಡ ಕುಟುಂಬಸ್ಥರ ಐನ್‌ಮನೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗಿನಲ್ಲಿ ಪ್ರತಿ ವರ್ಷವೂ ಹಾಕಿ ನಮ್ಮೆಯನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಪ್ರಸಕ್ತ ವರ್ಷ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿರುವ ಚೇನಂಡ ಕಪ್ ಹಾಕಿ ಟೂರ್ನಿಯು ಈ ಹಿಂದೆ ಜರುಗಿದ ಹಾಕಿ ಉತ್ಸವಕ್ಕಿಂತಲೂ ಹೆಚ್ಚಿನ ಯಶಸ್ವಿಯನ್ನು ಕಾಣಲಿ. ಜನಪ್ರತಿನಿಧಿಯಾಗಿ ತಾನು ಕೊಡವ ಹಾಕಿ ನಮ್ಮೆಯ ಯಶಸ್ಸಿಗೆ ಸರ್ವ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಹಾಕಿ ನಮ್ಮೆಯ ಪೂರ್ವಸಿದ್ಧತೆಯ ಬಗ್ಗೆ ಸಮಾಲೋಚಿಸಿ ಶುಭ ಹಾರೈಸಿದರು.
ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಕಂಬನಿ ಕರುಂಬಯ್ಯ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಚೇನಂಡ ಕುಟುಂಬದ ಅಧ್ಯಕ್ಷ ಚಿಟ್ಟಿ ಅಪ್ಪಯ್ಯ, ಕ್ರಿಕೆಟ್ ನಮ್ಮೆ ಅಧ್ಯಕ್ಷ ಸಿ.ಕೆ ಅಯ್ಯಪ್ಪ, ಕ್ರೀಡಾ ಅಕಾಡೆಮಿ ಕಾರ್ಯದರ್ಶಿ ಮಧು ಮಾದಯ್ಯ, ಒಲಂಪಿಯನ್ ಚೆಪ್ಪುಡಿರ ಪೂಣಚ್ಚ, ಕುಂಡ್ಯೋಳAಡ ವಿಶು ಪೂವಯ್ಯ, ಅಪ್ಪಚೆಟ್ಟೋಳಂಡ ರವಿ, ಚೇನಂಡ ಜಪ್ಪು ದೇವಯ್ಯ, ಅಕಾಡೆಮಿ ನಿರ್ದೇಶಕ ಕುಲ್ಲೇಟಿರ ಅರುಣ್ ಬೇಬಾ, ಖಜಾಂಚಿ ದೀಪಕ್ ಚಂಗಪ್ಪ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ತಳಿಂಟ್ಟತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್‌ನೊಂದಿಗೆ ಶಾಸಕರನ್ನು ಗೌರವಯುತವಾಗಿ ಬರಮಾಡಿಕೊಂಡು ಕೈಮಡ ಹಾಗೂ ಐನ್‌ಮನೆಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಕರುಂಬಯ್ಯ ಸ್ವಾಗತಿಸಿದರು, ಮನಸ್ವಿ ಪ್ರಾರ್ಥಿಸಿ ಚೇನಂಡ ಕ್ರೀಡಾಕೂಟದ ವಕ್ತಾರ ಸುರೇಶ್ ನಾಣಯ್ಯ ವಂದಿಸಿದರು.