ಸೋಮವಾರಪೇಟೆ, ಏ. ೨: ಸಿಎಂಸಿಎ ಸಂಸ್ಥೆ ಬೆಂಗಳೂರು ಮತ್ತು ನಾವು ಪ್ರತಿಷ್ಠಾನ ಕೊಡಗು ಆಶ್ರಯದಲ್ಲಿ, ಐಡಿಬಿಐ ಬ್ಯಾಂಕ್‌ನ ಸಿಎಸ್‌ಆರ್ ಸಹಾಯದೊಂದಿಗೆ ಸಿವಿಕ್ ಕ್ಲಬ್ ಹಾಗೂ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮದಡಿ ಜಿಲ್ಲೆಯ ಮೂರು ಸರ್ಕಾರಿ ವಸತಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಮತ್ತು ಪರಿಕರಗಳನ್ನು ವಿತರಿಸಲಾಯಿತು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಸೋಮವಾರಪೇಟೆ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಲೂರು ಸಿದ್ದಾಪುರ, ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗು ತಿತಿಮತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಇಂಟರಾಕ್ಟೀವ್ ಸ್ಮಾರ್ಟ್ ಬೋರ್ಡ್, ಲಘು ಯುಪಿಎಸ್ ಹಾಗೂ ಒಂದು ವರ್ಷದ ಇಂಟರ್ನೆಟ್ ರೀಚಾರ್ಜ್ ಸಹಿತ ವೈ-ಫೈ ರೂಟರ್‌ಗಳನ್ನು ವಿತರಿಸಲಾಯಿತು. ಆಲೂರು ಸಿದ್ದಾಪುರ ಶಾಲೆಯಲ್ಲಿ ಪರಿಕರ ವಿತರಿಸಿದ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಡಿಜಿಟಲ್ ಉಪಕರಣಗಳ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳು ಹೊಸ ಕೌಶಲ್ಯಗಳನ್ನು ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ಸಿಎಂಸಿಎ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನ ಮ್ಯಾಥ್ಯೂ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಾನತೆ, ಲಿಂಗ ಸಮಾನತೆ, ಅನುಭೂತಿ ಹಾಗೂ ನಾಗರಿಕ ಮೌಲ್ಯಗಳನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು. ಈ ಸಂದರ್ಭ ಶಿಕ್ಷಕಿಯರಾದ ಪೂರ್ಣಿಮ, ಲೋಲಾಕ್ಷಿ, ನಂದಿನಿ ಇದ್ದರು.