ಮಡಿಕೇರಿ, ಏ. ೨: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ದ್ವಜ ದಿನ ಹಾಗೂ ಫೀ.ಮಾ. ಕಾರ್ಯಪ್ಪ ಟ್ರೋಫಿ ಪ್ರದಾನ ಕಾರ್ಯಕ್ರಮ ನಡೆಯಿತು.
ಆರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ಉಪನಿರೀಕ್ಷಕಿ ಕೆ.ಬಿ. ಅಚ್ಚಮ್ಮ ಅವರು ಪಥಸಂಚಲನ ಪರಿವೀಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.
ಉತ್ತಮ ಕಾರ್ಯನಿರ್ವಹಣೆಗೆ ನೀಡುವ ಫೀ.ಮಾ. ಕಾರ್ಯಪ್ಪ ಟ್ರೋಫಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಎಸ್. ತಿಮ್ಮಯ್ಯ ಅವರಿಗೆ ಪ್ರದಾನ ಮಾಡಲಾಯಿತು. ಇದರೊಂದಿಗೆ ವಿಶೇಷ ಘಟಕಗಳ ವಿಭಾಗದ ಉತ್ತಮ ಪೊಲೀಸ್ ಟ್ರೋಫಿಯನ್ನು ಜಿಲ್ಲಾ ಸಶಸ್ತç ಪೊಲೀಸ್ ಪಡೆ ವಿಭಾಗದ ಸಿಬ್ಬಂದಿ ಹೆಚ್.ಎಸ್. ಸುಧೀರ್ ಅವರಿಗೆ ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ಉಪನಿರೀಕ್ಷಕಿ ಕೆ.ಬಿ. ಅಚ್ಚಮ್ಮ ಮಾತನಾಡಿ, ಪೊಲೀಸರು ಅತ್ಯಂತ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಸೇವೆಯ ಪ್ರೇರಣೆಯಾಗಿ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರವಾಗಿದೆ. ವೃತ್ತಿ ಒತ್ತಡದಿಂದ ಪೊಲೀಸರು ಆರೋಗ್ಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಧ್ವಜ ದಿನಾಚರಣೆಯಲ್ಲಿ ಕ್ರೋಢೀಕರಣವಾಗುವ ಹಣವನ್ನು ಪೊಲೀಸರ ಕಲ್ಯಾಣ ನಿಧಿಗೆ ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪೊಲೀಸ್ ಇಲಾಖೆಯಿಂದ ನಿವೃತ್ತರಾದ ನಂತರ ಸಮಸ್ಯೆ ಎದುರಾಗುತ್ತದೆ. ಈ ಸಂದರ್ಭ ಇಲಾಖೆ ಸಹಕಾರ ಬೇಕಾಗುತ್ತದೆ. ಈ ರೀತಿ ಚಟುವಟಿಕೆಯಿಂದ ಸಿಬ್ಬಂದಿಗಳಿಗೆ ಸ್ಥೆöÊರ್ಯ ಮೂಡುತ್ತದೆ ಎಂದರು.
ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದ ಕಾರ್ಯಪ್ಪ ಮಾತನಾಡಿ, ಫೀ.ಮಾ. ಕಾರ್ಯಪ್ಪ ಅವರ ಹೆಸರಿನಲ್ಲಿ ಟ್ರೋಫಿ ಸ್ಥಾಪನೆ ಮಾಡಿರುವುದು ಖುಷಿಯ ವಿಚಾರವಾಗಿದೆ. ಪೊಲೀಸರು ಕೂಡ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ದೇಶಕ್ಕಾಗಿ ದುಡಿಯುತ್ತಿದ್ದಾರೆ. ಪೊಲೀಸರು ಸಮಾಜದಲ್ಲಿ ಸಮಗ್ರತೆ, ಸಾಮರಸ್ಯ, ಭ್ರಾತೃತ್ವದಿಂದ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ನಿಷ್ಠೆ, ಪ್ರಾಮಾಣಿಕತೆ, ದೇಶಾಭಿಮಾನ ಪೊಲೀಸರು ಹೊಂದಬೇಕು. ವಿವಿಧ ಮಾಧ್ಯಮಗಳ ಮೂಲಕ ಬರುವ ಮಾಹಿತಿಗಳನ್ನು ಪೊಲೀಸರು ಪರಾಮರ್ಶಿಸಿ ಕ್ರಮಕ್ಕೂ ಮೊದಲು ವಿಚಾರಣೆ ನಡೆಸಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು. ಪೊಲೀಸರು ಪ್ರತೀ ನಿತ್ಯ ಒಂದಲ್ಲ ಒಂದು ರೀತಿ ಸವಾಲು ಮತ್ತು ಕಠಿಣ ಪರಿಸ್ಥಿತಿಯಲ್ಲಿಯೂ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿ ಪಡಿಸುವಂತೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಲಾಖೆಯಲ್ಲಿ ಮಹತ್ತರ ಬದಲಾವಣೆಯಾಗಿರುವುದು ಗಮನಾರ್ಹ ವಿಷಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಇಲಾಖೆಯ ನಿವೃತ್ತಿ ಸಿಬ್ಬಂದಿ ವರ್ಗದವರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಧ್ವಜ ದಿನದಂದು ಆರ್ಥಿಕ ಕ್ರೋಢೀಕರಣ ಮಾಡಿ ಅದರಲ್ಲಿ ಬರುವ ಹಣವನ್ನು ನಿವೃತ್ತರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು. ಪೊಲೀಸ್ ಪಡೆಯ ಸೇವೆಗಳನ್ನು ಗುರುತಿಸುವುದು, ಕಾಯ್ದೆಯ ಜಾರಿಯನ್ನು ಸ್ಮರಿಸುವುದು ಮತ್ತು ಸಾರ್ವಜನಿಕ-ಪೊಲೀಸ್ ಬಾಂಧವ್ಯವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಪೊಲೀಸರು ಹಾಗೂ ನಿವೃತ್ತ ಪೊಲೀಸರಿಗಾಗಿ ಆರೋಗ್ಯ ಭಾಗ್ಯ, ಪೊಲೀಸ್ ಕ್ಯಾಂಟೀನ್ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಪೊಲೀಸರು ಆರೋಗ್ಯ ಭಾಗ್ಯ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಕಲಾವತಿ,, ಡಿವೈಎಸ್ಪಿಗಳಾದ ಪಿ.ಎ. ಸೂರಜ್ (ಮಡಿಕೇರಿ), ಮಹೇಶ್ ಕುಮಾರ್ (ವೀರಾಜಪೇಟೆ), ಚಂದ್ರಶೇಖರ (ಸೋಮವಾರಪೇಟೆ), ಸೈಬರ್ ಅಪರಾಧ ವಿಭಾಗದ ಡಿವೈಎಸ್ಪಿ ಲಕ್ಷಿö್ಮಕಾಂತ ತಳವಾರ, ಹಿರಿಯ ಪೊಲೀಸ್ ಅಧಿಕಾರಿ ಐ.ಪಿ. ಮೇದಪ್ಪ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು. ಎಸ್ಪಿ ಬಿಂದುಮಣಿ ಸ್ವಾಗತಿಸಿ, ಫಾರೂಕ್, ಲೋಕೇಶ್ ನಿರೂಪಿಸಿ, ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ವಂದಿಸಿದರು.