ವೀರಾಜಪೇಟೆ, ಏ. ೨: ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡ ಕೂಲಿ ಕಾರ್ಮಿಕ ಕುಟುಂಬಗಳ ಪಡಿತರ ಚೀಟಿಯನ್ನು ರದ್ದು ಮಾಡುತ್ತಿರುವುದರಿಂದ ಬಡ ಕುಟುಂಬಗಳಿಗೆ ಸರಕಾರದ ಪಡಿತರ ಸೌಲಭ್ಯಗಳು ದೊರಕುತ್ತಿಲ್ಲ, ಆದ್ದರಿಂದ ಕೂಡಲೇ ಸರಕಾರ ಸ್ಪಂದಿಸಿ ಅರ್ಹ ಪಲನುಭವಿಗಳಿಗೆ ಪಡಿತರ ಚೀಟಿ ಒದಗಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ನಗರ ಸಮಿತಿ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು. ತಹಶೀಲ್ದಾರ್ ಪ್ರವೀಣ್ ಕುಮಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಸಂದರ್ಭ ಸಿ.ಪಿ.ಐ.ಎಂ. ಪಕ್ಷದ ಜಿಲ್ಲಾ ಸಮಿತಿಯ ಎ.ಸಿ. ಸಾಬು ಮಾತನಾಡಿ, ರದ್ದು ಮಾಡಿರುವ ಪಡಿತರ ಚೀಟಿಯನ್ನು ಕೂಡಲೇ ವಿತರಿಸಬೇಕು ಎಂದು ಆಗ್ರಹಿಸಿದರು.
ಸಿ.ಪಿ.ಐ. ಮುಖಂಡ ವಕೀಲ ಕೆ.ವಿ. ಸುನೀಲ್ ಮಾತನಾಡಿ, ಸರಕಾರ ಪಡಿತರ ಚೀಟಿ ರದ್ದು ಮಾಡಿರುವ ನೀತಿಯನ್ನು ನಾವು ವಿರೋಧಿಸುತ್ತೇವೆ ಎಂದರು. ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ನಗರ ಸಮಿತಿಯ ಕೆ.ಎಸ್.ರಮೇಶ್ ಶಾಜಿ, ಪದ್ಮಿನಿ ಶ್ರೀಧರ್, ದಲಿತ ಸಮಿತಿಯ ಸತೀಶ್ ಕುಮಾರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಎ. ಹಮೀದ್, ಕೆ.ಎಸ್. ರತೀಶ್, ಹರಿದಾಸ್, ಖಾಸಿಂ, ಬಾಪುಟ್ಟಿ, ಸಾಧಿಕ್, ದಲಿತ ಸಮಿತಿಯ ಕುಮಾರ, ಮಹಿಳಾ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.