ಶನಿವಾರಸಂತೆ:. ಏ.೨ ಸಮೀಪದ ತಪೋಕ್ಷೇತ್ರ ಮನೆಹಳ್ಳಿಮಠದ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಮಠದ ಆವರಣದಲ್ಲಿ ಬೆಳಿಗ್ಗೆ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಕ್ಷೇತ್ರದ ಆರಾಧ್ಯ ದೇವರುಗಳಾದ ವೀರಭದ್ರೇಶ್ವರ, ಭದ್ರಕಾಳಿ, ಶ್ರೀಗುರುಸಿದ್ಧವೀರೇಶ್ವರ ಹಾಗೂ ತಪೋವನೇಶ್ವರಿ ದೇವಿಯವರಿಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ನೆರವೇರಿಸಿದರು. ನಂತರ ಕಲ್ಯಾಣಿ ಸಮೀಪ ಶಟಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ೩ ದಿನಗಳ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಳ್ಳುತ್ತಾರೆ. ತಾ. ೪ ರಂದು ಮಧ್ಯಾಹ್ನ ೩ ಗಂಟೆಗೆ ಧಾರ್ಮಿಕ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ. ಸಂಜೆ ೭ ಗಂಟೆಗೆ ಧಾರ್ಮಿಕ ವಿಧಿವಿಧಾನಗಳ ಜತೆ ಮಹಾರಥೋತ್ಸವ ನಡೆಯಲಿದೆ ಎಂದರು.