ಮಡಿಕೇರಿ, ಏ. ೨: ಚೇರಂಬಾಣೆಯ ಶ್ರೀ ಸುಬ್ರಹ್ಮಣ್ಯ ದೇವಾಲಯ ಪುನರ್ ಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ ತಾ. ೮, ೯ ಹಾಗೂ ೧೦ ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಟ್ಟಮಾಡ ಡಿ. ಪೊನ್ನಪ್ಪ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೩೫೦ ವರ್ಷಗಳ ಹಿಂದೆ ಈಗಿನ ಸಣ್ಣಪುಲಿಕೋಟು ಗ್ರಾಮದಲ್ಲಿ ಪಟ್ಟಮಾಡ ಕುಟುಂಬಸ್ಥರು ವಾಸಿಸುತ್ತಿದ್ದರು. ಟಿಪ್ಪು ಭಾಗಮಂಡಕ್ಕೆ ದಂಡೆತ್ತಿ ಬಂದ ಸಂದರ್ಭ ಅಲ್ಲಿನ ಬ್ರಾಹ್ಮಣರು ಗ್ರಾಮವನ್ನು ತೊರೆದಿದ್ದರು. ಪರಿಣಾಮ ತಲಕಾವೇರಿಯಲ್ಲಿ ನಿತ್ಯಪೂಜೆ ನಿಂತು ಹೋಗುವ ಸಾಧ್ಯತೆ ಇತ್ತು. ಆ ಸಂದರ್ಭ ಪಟ್ಟಮಾಡ ಕುಟುಂಬದ ಉತ್ತಯ್ಯ ಅವರು ಬ್ರಾಹ್ಮಣ ವಟುವಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ ದುರ್ಗಮವಾದ ಕಾಡುಹಾದಿಯಲ್ಲಿ ತನ್ನ ಹೆಗಲ ಮೇಲೆ ಆತನನ್ನು ಕೂರಿಸಿಕೊಂಡು ತಲಕಾವೇರಿಗೆ ತೆರಳಿ ನಿತ್ಯಪೂಜೆಯನ್ನು ನೆರವೇರಿಸುತ್ತಿದ್ದರು. ಟಿಪ್ಪು ಸೇನೆ ಕೊಡಗಿನ ಗಡಿ ದಾಟಿ ಹೋಗುವ ತನಕವೂ ನಿತ್ಯಪೂಜೆ ತಪ್ಪದಂತೆ ಉತ್ತಯ್ಯ ಅವರು ನೋಡಿಕೊಂಡಿದ್ದರು. ಅಲ್ಲದೆ ಕಾವೇರಿ ಮಾತೆಯ ನಿತ್ಯ ನೈವೇದ್ಯಕ್ಕಾಗಿ ಗದ್ದೆಯನ್ನು ಮೀಸಲಿಟ್ಟು ಅಕ್ಕಿಯನ್ನು ನೀಡಿದ್ದರು. ಈ ವಿಚಾರ ಪಟ್ಟೋಳೆ ಪಳಮೆಯಲ್ಲೂ ದಾಖಲಾಗಿದೆ. ನಮ್ಮ ಕುಟುಂಬದ ಶೌರ್ಯವನ್ನು ಮೆಚ್ಚಿ ಅಂದಿನ ರಾಜರು ನಮ್ಮ ಕುಟುಂಬಕ್ಕೆ ಬೇಂಗ್ನಾಡ್ ಗ್ರಾಮದಲ್ಲಿ ಜಮ್ಮಾ ಹಾಗೂ ಉಂಬಳಿ ಜಾಗವನ್ನು ಕೊಡುಗೆಯಾಗಿ ನೀಡಿದ್ದರು. ಆ ಜಾಗದಲ್ಲಿ ಜೈನಕೋಟೆ ಎಂಬ ಜಾಗವಿದ್ದು, ಅಲ್ಲಿ ಸುಬ್ರಹ್ಮಣ ದೇವರು ಹುತ್ತದ ರೂಪದಲ್ಲಿ ನೆಲೆಸಿದ್ದರು ಎಂಬ ಪ್ರತೀತಿಯೂ ಇತ್ತು. ನಂತರ ದಿನಗಳಲ್ಲಿ ನಮ್ಮ ಕುಟುಂಬದ ಪೂರ್ವಜರು ಅಲ್ಲಿ ದೇವಾಲಯವನ್ನು ನಿರ್ಮಿಸಿ ಸುಬ್ರಹ್ಮಣ್ಯ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು ಸ್ಮರಿಸಿಕೊಂಡರು.
ತಲಕಾವೇರಿ ಜೀರ್ಣೋದ್ಧಾರ ಸಂದರ್ಭ ಅಷ್ಟಮಂಗಲ ಪ್ರಶ್ನೆಯನ್ನು ನಡೆಸಿದಾಗ ತಲಕಾವೇರಿ ಕ್ಷೇತ್ರಕ್ಕೆ ಪಟ್ಟಮಾಡ ಕುಟುಂಬ ಅಪಾರ ಸೇವೆ ಮಾಡಿದೆ. ಇದೀಗ ಸೇವೆಯ ಪ್ರಮಾಣ ಕಡಿಮೆಯಾಗಿದೆ. ಕುಟುಂಬಕ್ಕೆ ದೋಷವೂ ಇದೆ ಎಂದು ತಿಳಿದು ಬಂದಿತ್ತು. ಬಳಿಕ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಜೊತೆ ಚರ್ಚಿಸಿ ಅಷ್ಟಮಂಗಲ ಪ್ರಶ್ನೆ ನಡೆಸಿದ ಸಂದರ್ಭ ಅದರಲ್ಲಿ ತಲಕಾವೇರಿಗೆ ನಿತ್ಯನೈವೇದ್ಯಕ್ಕಿರುವ ಅಕ್ಕಿಯನ್ನು ಪ್ರತಿ ತಿಂಗಳು ಕಳುಹಿಸಬೇಕು. ಅಲ್ಲದೆ ಸುಬ್ರಹ್ಮಣ್ಯ ದೇವಾಲಯದ ನಿರ್ಮಾಣವೂ ಅವೈಜ್ಞಾನಿಕವಾಗಿದ್ದು, ದೇವಾಲಯವನ್ನು ವಾಸ್ತು ಪ್ರಕಾರವಾಗಿ ನಿರ್ಮಿಸಿ ದೇವರ ಬಿಂಬವನ್ನು ಪುನರ್ ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವ ಆಯೋಜಿಸಬೇಕೆಂಬ ಸೂಚನೆ ಬಂದ ಹಿನ್ನೆಲೆ ನೂತನ ದೇವಾಲಯವನ್ನು ರೂ. ೬೫ ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಧಾರ್ಮಿಕ ಕಾರ್ಯಗಳು
ತಾ. ೮ ರಂದು ಸಂಜೆ ೭ ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಬಿಂಬ ಪರಿಗ್ರಹ, ಬಿಂಬ ಜಲಾಧಿವಾಸ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತುರಕ್ಷೆÆÃಘ್ನ ಹೋಮ ಮತ್ತು ವಾಸ್ತುಬಲಿ ನಡೆಯಲಿದೆ ಎಂದು ಪಿ.ಡಿ. ಪೊನ್ನಪ್ಪ ತಿಳಿಸಿದರು.
ತಾ. ೯ ರಂದು ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶಪೂಜೆ, ಸ್ಕಂದ ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಪ್ರೋಕ್ತ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವ ಹೋಮ, ಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ ಶಯ್ಯಾಗಮನ ಶಯನ, ಬಿಂಬ ಶುದ್ಧಿ, ಸಂಜೆ ೬ ರಿಂದ ಅಧಿವಾಸ ಹೋಮ, ಧ್ಯಾನಧಿವಾಸ ಕುಂಬೇಶ ಕರ್ಕರಿ ಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ, ಪ್ರಸಾದ ಅಧಿವಾಸ ಕಾರ್ಯಕ್ರಮ ನೆರವೇರಲಿದೆ. ತಾ. ೧೦ ರಂದು ಬೆಳಿಗ್ಗೆ ೭ ಗಂಟೆಯಿAದ ಗಣಪತಿ ಹೋಮ, ತತ್ವಕಲಶ ಪೂಜೆ, ತತ್ವ ಹೋಮ, ೧೧.೪೧ರ ಮಿಥುನ ಲಗ್ನದಲ್ಲಿ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ, ಹೋಮಕಲಶಾಭಿಷೇಕ, ತತ್ವ ಕಲಶಾಭಿಶೇಕ, ೧೨.೩೦ಕ್ಕೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ೧.೩೦ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಪಿ.ಟಿ. ಬೋಪಣ್ಣ, ಸದಸ್ಯರುಗಳಾದ ಸತೀಶ್ ಸುಬ್ಬಯ್ಯ, ದೀನಾ ಬೆಳ್ಯಪ್ಪ, ಮಧು ಬಿದ್ದಪ್ಪ ಹಾಜರಿದ್ದರು.