ಮಡಿಕೇರಿ, ಏ. ೨: ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ಸುರಕ್ಷಿತ ಉತ್ಪನ್ನಗಳು ಆತ್ಮವಿಶ್ವಾಸದ ಗ್ರಾಹಕರು ಎಂಬ ವಿಷಯದಡಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ನಡೆಯಿತು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಯಾವುದೇ ವಸ್ತು-ಪದಾರ್ಥ ಕೊಳ್ಳುವಾಗ ಎಚ್ಚರವಹಿಸಬೇಕೆಂದರು.

ಹಿರಿಯ ವಕೀಲ ಎಂ.ಎ. ನಿರಂಜನ್ ಮಾತನಾಡಿ, ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಪ್ರಜ್ಞಾವಂತರಾಗಬೇಕು. ಗ್ರಾಹಕರು ಮೋಸ ಅಥವಾ ವಂಚನೆಗೆ ಒಳಗಾಗಬಾರದು. ಗ್ರಾಹಕರ ಹಕ್ಕುಗಳ ಬಗ್ಗೆ ಚ್ಯುತಿ ಬಂದಾಗ ಗ್ರಾಹಕರ ಆಯೋಗಕ್ಕೆ ಮನವಿ ಮಾಡುವಂತಾಗಬೇಕು ಎಂದು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣ್ಣಿ ಮಾತನಾಡಿ, ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಜೊತೆಗೆ ಕರ್ತವ್ಯವನ್ನು ಪಾಲಿಸಬೇಕು.

ಪದಾರ್ಥಗಳನ್ನು ಕೊಳ್ಳುವಾಗ ತೂಕ ಮತ್ತು ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು. ಯಾವುದೇ ಒಂದು ವಸ್ತು ಕೊಳ್ಳುವಾಗ ರಶೀದಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರಲ್ಲದೆ, ಜಿಲ್ಲಾ ಗ್ರಾಹಕ ಆಯೋಗವು ಸಲ್ಲಿಕೆಯಾಗುವ ದೂರು ಸಂಬAಧ ಶೀಘ್ರ ವಿಚಾರಣೆ ನಡೆಸಿ ಪರಿಹಾರ ಒದಗಿಸಲಿದೆ ಎಂದು ಹೇಳಿದರು.

ಕುಶಾಲನಗರದ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಎ.ಎ. ಚಂಗಪ್ಪ ಮಾತನಾಡಿ, ಜಿಲ್ಲೆಯ ೫೨ ಪ್ರೌಢಶಾಲೆಗಳಲ್ಲಿ ಗ್ರಾಹಕರ ಕ್ಲಬ್‌ಗಳನ್ನು ರಚಿಸಿ, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಇಂದಿನ ವೇಗದ ಬದುಕಿನಲ್ಲಿ ಡಿಜಿಟಲ್ ಮಾರುಕಟ್ಟೆಗಳು ಸಹ ಪ್ರಬಲವಾಗಿದ್ದು, ಗ್ರಾಹಕರು ಈ ಬಗ್ಗೆ ಸಹ ಎಚ್ಚರವಹಿಸಬೇಕು ಎಂದರು. ಆಹಾರ ಇಲಾಖೆ ಉಪ ನಿರ್ದೇಶಕ ಎಂ. ಭೀಮರಾಯ ಮಾತನಾಡಿ, ಗ್ರಾಹಕರ ಸಮಗ್ರ ಹಿತರಕ್ಷಣೆಯೇ ಅತೀ ಮುಖ್ಯವಾಗಿದ್ದು, ಗ್ರಾಹಕರು ವಂಚನೆಗೆ ಒಳಗಾಗುವುದನ್ನು ತಡೆಯಲು ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಾನೂನು ಮಾಪನ ಶಾಸ್ತç ಇಲಾಖೆಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್ ಪ್ರಸನ್ನ, ಆಹಾರ ಇಲಾಖೆ ಸಹಾಯಕ ನಿರ್ದೇಶಕಿ ರಮಾ, ಪ್ರಾಧ್ಯಾಪಕ ನವೀನ್ ಕುಮಾರ್, ಆಹಾರ ನಿರೀಕ್ಷಕರಾದ ವೀಣಾ, ಯಶಸ್ವಿನಿ, ನಿಶಾ, ಸ್ವಾತಿ, ಸೀನಾ ಕುಮಾರಿ, ಕಿರಣ್, ನಾಗೇಂದ್ರ, ಪ್ರಮೋದ್ ಕುಮಾರ್, ಗಿರೀಶ್, ಕುಸುಮ ಇತರರು ಇದ್ದರು.