ಸೋಮವಾರಪೇಟೆ, ಏ. ೨: ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಸೂರ್ಲಬ್ಬಿ ಬೂತ್ ಕಾಂಗ್ರೆಸ್ ಸಮಿತಿ ಸಭೆ ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಬಿ.ಬಿ. ಸತೀಶ್, ಅತೀ ಹೆಚ್ಚು ಮಳೆ ಬೀಳುವ ಸೂರ್ಲಬ್ಬಿ ನಾಡಿನ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರು ಗ್ರಾಮಕ್ಕೆ ಆಗಬೇಕಿರುವ ಹೆಚ್ಚುವರಿ ಕಾಮಗಾರಿಗಳ ಪಟ್ಟಿಯನ್ನು ಶಾಸಕರಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡ ಹಾಗು ಹಿಂದುಳಿದ ವರ್ಗಗಳಿಗೆ ಸಾಕಷ್ಟು ನೆರವಾಗುತ್ತಿವೆ. ಅಂತಹ ಯೋಜನೆಗಳನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಗ್ರಾಮೀಣ ಭಾಗದ ಜನರಿಗೂ ಗ್ಯಾರಂಟಿ ಯೋಜನೆಗಳು ಅತ್ಯವಶ್ಯಕವಾಗಿದೆ ಎಂಬುದು ರಾಜ್ಯ ಸರ್ಕಾರಕ್ಕೆ ತಿಳಿದಿದೆ ಎಂದು ಹೇಳಿದರು.

ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ, ಕುಡಿಯುವ ನೀರು, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಅನುಕೂಲವಾಗುವಂತೆ ಕೈಗೊಳ್ಳಲಾಗುತ್ತಿದ್ದು, ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಶಾಸಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

೯೪ಸಿ ಮತ್ತು ೯೪ಸಿಸಿ ಅರ್ಜಿಗಳ ಸ್ವೀಕಾರದ ವಿಷಯದಲ್ಲಿ ಶಾಸಕರು ವಿಧಾನ ಸಭೆಯಲ್ಲಿ ಸಮಗ್ರ ವಾದ ಮಂಡಿಸಿ, ಕ್ಷೇತ್ರದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ಕಾರ್ಯಕರ್ತರು ಇನ್ನಷ್ಟು ಸಂಘಟಿತರಾಗಿ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಜನರ ಸಂಪರ್ಕವನ್ನು ವಿಸ್ತರಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಗರ್ವಾಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಓಂಕಾರಪ್ಪ, ಪಕ್ಷದ ಪ್ರಮುಖರಾದ ನಟೇಶ್, ಸೀತಮ್ಮ, ಗಣೇಶ್, ನಾಣಿಯಪ್ಪ, ರಫೀಕ್ ಸೇರಿದಂತೆ ಕಾರ್ಯಕರ್ತರು ಇದ್ದರು.