ಮಡಿಕೇರಿ, ಮಾ. ೩೧: ವಿಶ್ವಕಂಡ ವೀರ ಸೇನಾನಿ, ಕೊಡಗಿನ ಹೆಮ್ಮೆಯ ಪುತ್ರ, ಭಾರತೀಯ ಸೇನಾ ಇತಿಹಾಸದಲ್ಲಿ ವಿಶೇಷ ಛಾಪು ಮೂಡಿಸಿರುವ ಪದ್ಮಭೂಷಣ ಖ್ಯಾತಿಯ ವೀರಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೨೦ನೇ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಇಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜರುಗಿತು.

ಜಿಲ್ಲಾಡಳಿತ ವತಿಯಿಂದ ತಿಮ್ಮಯ್ಯ ಅವರ ಜನ್ಮಸ್ಥಳವಾದ ‘ಸನ್ನಿಸೈಡ್’ನ ತಿಮ್ಮಯ್ಯ ಮ್ಯೂಸಿಯಂನ ಸಭಾಂಗಣದಲ್ಲಿ ಗೌರವ ಸೂಚನೆ ಜರುಗಿತು. ಇದರೊಂದಿಗೆ ಮಡಿಕೇರಿ ಕೊಡವ ಸಮಾಜ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಿಂದ ಕೊಡವ ಸಮಾಜ, ತಿಮ್ಮಯ್ಯ ಶಾಲೆಯಲ್ಲಿ ಸೇರಿದಂತೆ ಫೀ.ಮಾ. ಕಾರ್ಯಪ್ಪ, ಜ. ತಿಮ್ಮಯ್ಯ ಫೌಂಡೇಷನ್ ವತಿಯಿಂದ ಮಡಿಕೇರಿಯಲ್ಲಿರುವ ತನಲ್ ಸೇವಾಶ್ರಮದಲ್ಲೂ ಪ್ರತ್ಯೇಕವಾದ ಕಾರ್ಯಕ್ರಮಗಳೊಂದಿಗೆ ವೀರ ಸೇನಾನಿಯ ಸಂಸ್ಮರಣೆ ನಡೆಯಿತು. ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಮಾಜಿ ಸಚಿವರಾದ ಯಂ.ಸಿ. ನಾಣಯ್ಯ, ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಸೇರಿದಂತೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.

ತಿಮ್ಮಯ್ಯ ಸ್ಮಾರಕ ಭವನ

ಮಡಿಕೇರಿಯಲ್ಲಿರುವ ಜ. ತಿಮ್ಮಯ್ಯ ಸ್ಮಾರಕ ಭವನದಲ್ಲಿ (ಸನ್ನಿಸೈಡ್) ಜ. ತಿಮ್ಮಯ್ಯ ಹುಟ್ಟುಹಬ್ಬವನ್ನು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು, ಸಣ್ಣ ಪ್ರಾಯದಲ್ಲಿಯೇ ಸೇನೆಗೆ ಸೇರಿ ಸುದೀರ್ಘ ಸೇವೆ ಸಲ್ಲಿಸಿದ್ದ ತಿಮ್ಮಯ್ಯ ಅವರು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಶಿಸ್ತು, ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡು ಜೀವನ ನಡೆಸಿದ್ದಾರೆ. ಅವರದ್ದು ಎಂದಿಗೂ ಮರೆಯದ ವ್ಯಕ್ತಿತ್ವ. ಅವರ ಬದುಕು ನಮಗೆ ಆದರ್ಶವಾಗಿದೆ. ಅದನ್ನು ನಾವೆಲ್ಲ ಮೈಗೂಡಿಸಿಕೊಂಡರೆ ಸಮಾಜಕ್ಕೂ ಪೂರಕವಾಗುತ್ತದೆ. ತಿಮ್ಮಯ್ಯ ಅವರಂತಹ ಮಹಾನ್ ಸೇನಾನಿಗಳ ಸ್ಮರಣೆ ಒಂದು ದಿನಕ್ಕೆ ಸೀಮಿತವಾಗದೆ ದಿನನಿತ್ಯ ಅವರನ್ನು ನೆನೆಸಿಕೊಳ್ಳುವಂತಾಗಬೇಕು. ದೇಶದ ಗಡಿ ಭದ್ರತೆಯಲ್ಲಿ ಅವರ ಪಾತ್ರ ಮಹತ್ತರವಾಗಿದೆ. ಶತ್ರು ರಾಷ್ಟçಗಳೊಂದಿಗೆ ಸೆಣಸಾಡಿ ಭಾರತವನ್ನು ಕಾಪಾಡಿದ ಹೆಮ್ಮೆಯ ಪುತ್ರ ತಿಮ್ಮಯ್ಯ ಅವರು ಎಂದು ಬಣ್ಣಿಸಿದರು.

ನಿವೃತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮಾತನಾಡಿ, ತಿಮ್ಮಯ್ಯ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಅವರು ಅಪಾರ ದೇಶಾಭಿಮಾನ ಹೊಂದಿದ್ದರು. ಅವರ ಜೀವನ ಚರಿತ್ರೆ ಮಡಿಕೇರಿಯ ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ. ಯುವಪೀಳಿಗೆ ಇದನ್ನು ತಿಳಿದುಕೊಂಡು ಆದರ್ಶ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಕಾಶ್ಮೀರ ಭಾರತದ ಕೈತಪ್ಪುವ ಹಂತದ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಯುದ್ಧ ಪರಿಕರಗಳನ್ನು ತಿಮ್ಮಯ್ಯ ಅವರ ನೇತೃತ್ವದ ತಂಡ ಕೊಂಡೊಯ್ದು ಸೆಣಸಾಡಿ ಕಾಶ್ಮೀರ ಉಳಿಸಿಕೊಂಡರು. ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಾಗಿಟ್ಟಿದ್ದರು. ದೇಶ ಮೊದಲು ಎಂಬ ದೃಢತೆಯನ್ನು ಹೊಂದಿದ್ದರು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, ನಾಡು ಕಂಡ ಮೇರು ಶಿಖರದ ವ್ಯಕ್ತಿತ್ವ ಜ. ತಿಮ್ಮಯ್ಯ ಅವರದ್ದಾಗಿದೆ. ಯುದ್ಧದಲ್ಲಿ ಅವರು ದೇಶದ ಉಳಿವಿಗಾಗಿ ಮಾಡಿದ ಕೆಲಸ ಸ್ಮರಣೀಯ. ಜ. ತಿಮ್ಮಯ್ಯ ಈ ಮಣ್ಣಿನಲ್ಲಿ ಮತ್ತೇ ಹುಟ್ಟಿಬರಬೇಕು ಎಂದ ಅವರು, ದೇಶನಿಷ್ಠೆ, ಮೌಲ್ಯವನ್ನು ಮರೆಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಜ. ತಿಮ್ಮಯ್ಯ ಅವರು ಸಮಾಜಕ್ಕೆ ಉತ್ತಮ ಮೌಲ್ಯ ನೀಡಿದ್ದಾರೆ. ಪೊಲೀಸರಿಗೂ ಅವರ ಆದರ್ಶ ಸ್ಫೂರ್ತಿದಾಯಕವಾಗಿದೆ. ಈ ರೀತಿ ಆಚರಣೆಗಳಿಂದ ಅವರ ಸೇವೆ, ತ್ಯಾಗ ಸ್ಮರಿಸಿ ಮುಂದಿನ ಪೀಳಿಗೆಗೆ ತಿಳಿಸಬಹುದಾಗಿದೆ ಎಂದು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ತಿಮ್ಮಯ್ಯ ಅವರಂತಹ ಮಹಾನ್ ವ್ಯಕ್ತಿತ್ವ ಹೊಂದಿರುವವರ ಮೌಲ್ಯಯುತ ಬದುಕನ್ನು ಅಳವಡಿಸಿಕೊಳ್ಳಬೇಕು. ತಿಮ್ಮಯ್ಯ ಅವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಸಾಮಾಜಿಕ ಜವಾಬ್ದಾರಿಯಿಂದ ನಾವೆಲ್ಲ ಮುಂದುವರೆಯಬೇಕು ಎಂದರು. ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಶ್ರೀಧರ್, ನಗರಸಭಾ ಸದಸ್ಯರುಗಳಾದ ನೆರವಂಡ ಅನಿತಾ ಪೂವಯ್ಯ, ಸಬಿತಾ, ಪ್ರಮುಖರಾದ ತಮ್ಮು ಪೂವಯ್ಯ, ಸಂಜು ಕಾವೇರಪ್ಪ, ಚೆಯ್ಯಂಡ ಸತ್ಯ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪೌಂಡೇಶನ್‌ನ ಗೌರವ ಸಂಚಾಲಕ ತಮ್ಮು ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ರೆಡ್‌ಕ್ರಾಸ್ ನಿರ್ದೇಶಕ ಪಿ.ಆರ್.ರಾಜೇಶ್, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮಿಳಾ ಶೆಟ್ಟಿ, ನಿರ್ದೇಶಕರಾದ ಸ್ಮಿತಾ ಚಂಗಪ್ಪ, ಧನಂಜಯ ಶಾಸ್ತಿç, ಸೇರಿದಂತೆ ಇನ್ನಿತರರು ಹಾಜರಿದ್ದರು.

ರಮ್ಯ ಪ್ರಾರ್ಥಿಸಿ, ಮಣಜೂರು ಮಂಜುನಾಥ್ ನಿರೂಪಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕುಮಾರ್ ಸ್ವಾಗತಿಸಿ, ಎಚ್.ಟಿ. ಅನಿಲ್ ವಂದಿಸಿದರು. ವಿದ್ಯಾರ್ಥಿನಿಯರಾದ ಎ.ಎಸ್.ರಿಷಿತಾ ಮುತ್ತಮ್ಮ, ಯಶ್ಮಿತಾ ಎ.ಎಚ್., ಎ.ಆರ್.ದೇಚಮ್ಮ, ಚಿನ್ಮಯಿ ಎ.ಆರ್. ದೇಶಭಕ್ತಿಗೀತೆ ಹಾಡಿದರು.