ಸೋಮವಾರಪೇಟೆ, ಮಾ. ೨೯: ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಗಣಗೂರು, ಯರಪಾರೆ, ಬಾಣಾವರ, ಗೋಣಿಮರೂರು ಗ್ರಾಮಗಳ ಕೃಷಿ ಭೂಮಿಗೆ ಪ್ರತಿನಿತ್ಯ ಕಾಡಾನೆಗಳು ಧಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗೋಣಿಮರೂರು-ಯರಪಾರೆ ಗ್ರಾಮದ ಗಣೇಶ್ ಎಂಬವರ ಜೋಳದ ಫಸಲನ್ನು ಹಾನಿಪಡಿಸಿವೆ. ರಮೇಶ್ ಎಂಬವರ ತೆಂಗಿನ ಗಿಡಗಳನ್ನು ಮುರಿದು ತಿಂದು ನಾಶ ಪಡಿಸಿವೆ.

ಕಾಡಾನೆ ಹಾವಳಿಯಿಂದ ಕೃಷಿ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗೆ ಯಾವುದೇ ಪರಿಹಾರ ಬೇಡ. ಒಂದೆರಡು ಸಾವಿರ ಪರಿಹಾರದಿಂದ ಕುಟುಂಬ ಸಾಕಲು ಸಾಧ್ಯವಿಲ್ಲ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಯರಪಾರೆಯಲ್ಲಿ ಒಂದೆರಡು ಕಿ.ಮೀ.ನಷ್ಟು ಸೋಲಾರ್ ತಂತಿಬೇಲಿ ಅಳವಡಿಸಿಕೊಡಬೇಕು ಎಂದು ರೈತರಾದ ರೇವಣ್ಣ, ಹರೀಶ್ ಆಗ್ರಹಿಸಿದ್ದಾರೆ. ಕಂದಕಗಳನ್ನು ದುರಸ್ತಿ ಪಡಿಸಬೇಕು. ಸೋಲಾರ್ ತಂತಿಬೇಲಿಯ ನಿರ್ವಹಣೆ ಮಾಡಬೇಕು. ಸಿಬ್ಬಂದಿಗಳು ಪಟಾಕಿ ಸಿಡಿಸಿ ತೆರಳಿದರೆ, ಕಾಡಾನೆ ಹಾವಳಿ ನಿಯಂತ್ರಣ ಅಸಾಧ್ಯದ ಮಾತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.