ಸೋಮವಾರಪೇಟೆ,ಮಾ.೨೭: ಪಟ್ಟಣದಲ್ಲಿ ಆಯೋಜನೆಗೊಂಡಿದ್ದ ಶ್ರೀ ರಾಮನವಮಿ ಉತ್ಸವವು ಅದ್ದೂರಿಯಾಗಿ ನಡೆಯಿತು. ಪಟ್ಟಣದ ವೃತ್ತಗಳನ್ನು ಕೇಸರಿ ಬಂಟಿAಗ್ಸ್, ಬಾವುಟಗಳಿಂದ ಅಲಂಕರಿಸಲಾಗಿತ್ತು. ಸಂಜೆ ಸಾವಿರಾರು ಮಂದಿ ರಾಮ-ಹನುಮ ಭಕ್ತರು ಕೇಸರಿ ಶಲ್ಯ ಧರಿಸಿ ಪಟ್ಟಣದಲ್ಲಿ ಶೋಭಾಯಾತ್ರೆ ನಡೆಸುವ ಮೂಲಕ ಕೇಸರಿ ಸಾಗರ ನಿರ್ಮಿಸಿದ್ದರು.
ಪಟ್ಟಣದ ಆಂಜನೇಯ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಬೆಳಗ್ಗಿನಿಂದಲೇ ಪಟ್ಟಣದ ದೇವಾಲಯಗಳಲ್ಲಿ ವಿವಿಧ ವಿಶೇಷ ಪೂಜೆಗಳು ನಡೆದವು. ಆಂಜನೇಯ ದೇವಾಲಯದಲ್ಲಿ ದೇವಾಲಯ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ದೇವಾಲಯದ ಪ್ರಧಾನ ಅರ್ಚಕರಾದ ನಂಜುAಡೇಶ್ವರ ಅವರ ಪುರೋಹಿತ್ವದಲ್ಲಿ ಅಭಿಷೇಕ, ಅರ್ಚನೆ ಮಹಾಮಂಗಳಾರತಿ ನಡೆಯಿತು.
ದೇವಾಲಯಕ್ಕೆ ಆಗಮಿಸಿದ ನೂರಾರು ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು. ಮತ್ತೊಂದೆಡೆ ರಾಮನವಮಿ ಆಚರಣಾ ಸಮಿತಿ ವತಿಯಿಂದ ಶ್ರೀ ರಾಮದೇವರಿಗೆ ವಿಶೇಷ ಪೂಜೆಯೊಂದಿಗೆ ನೆರೆದಿದ್ದ ಭಕ್ತರಿಗೆ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ರಾಮನವಮಿ ಅಂಗವಾಗಿ ಸಂಜೆ ವಿವಿಧ ಗ್ರಾಮೀಣ ಭಾಗಗಳ ೧೨ ಸ್ತಬ್ಧಚಿತ್ರಗಳು ಹಾಗೂ ಜನಪದ ಕಲಾತಂಡಗಳಾದ ಡೊಳ್ಳು, ನಂದಿ, ವೀರಗಾಸೆ, ಚಂಡೆ, ಸುಗ್ಗಿ ಕುಣಿತದೊಂದಿಗೆ ಶ್ರೀರಾಮ ದೇವರ ಬೃಹತ್ ಶೋಭಾಯಾತ್ರೆ ನಡೆಯಿತು.
ನಮ್ಮಲ್ಲಿರುವ ಜನಪದ ಕಲೆಗಳು ಉಳಿಯಬೇಕು. ಆದ್ದರಿಂದ ನಾವು ಕಳೆದ ಹನ್ನೊಂದು ವರ್ಷಗಳಿಂದ ರಾಮನವಮಿಯಲ್ಲಿ ಜನಪದ ಕಲೆಗಳಿಗೆ ಅವಕಾಶ ನೀಡುತ್ತಿದ್ದೇವೆ ಎಂದು ರಾಮನವಮಿ ಆಚರಣಾ ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ಅಭಿಪ್ರಾಯಿಸಿದರು.
ದೇವಾಲಯದಲ್ಲಿ ನಡೆದ ಪೂಜೋತ್ಸವದಲ್ಲಿ ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ. ಪಿ. ಗೋಪಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎಲ್. ಸೀತಾರಾಮ್, ಕಾರ್ಯದರ್ಶಿ ನಂದಕುಮಾರ್, ಪದಾಧಿಕಾರಿಗಳಾದ ರಾಘವ, ಸಿ.ಸಿ. ನಂದ, ದರ್ಶನ್, ಗಣೇಶ, ರಮೇಶ್, ಹಾಲಪ್ಪ, ಮಣಿ ಕುಶಾಲಪ್ಪ, ಹಿಂದೂಪರ ಸಂಘಟನೆಯ ಮುಖಂಡ ಎಂ.ಬಿ. ಉಮೇಶ್ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಹಾಜರಿದ್ದರು.
ಪಟ್ಟಣದ ಗಣಪತಿ ದೇವಾಲಯ, ರಾಮ ಮಂದಿರದಲ್ಲೂ ವಿಶೇಷ ಪೂಜೆ ನಡೆಯಿತು. ಪಟ್ಟಣದ ಪ್ರಮುಖ ಜಂಕ್ಷನ್ಗಳಲ್ಲಿ ವಿವಿಧ ಸಂಘ ಸಂಸ್ಥೆಗಳಿAದಲೂ, ಹಿಂದೂಪರ ಸಂಘಟನೆಗಳಿAದ ಮಜ್ಜಿಗೆ, ಕೋಸಂಬರಿ ಮತ್ತು ಪಾನಕ ವಿತರಣೆ ನಡೆಯಿತು.
ಸಂಜೆ ಪಟ್ಟಣದಲ್ಲಿ ಸ್ತಬ್ಧಚಿತ್ರಗಳ ಸಹಿತ ಅದ್ದೂರಿ ಮೆರವಣಿಗೆ ನಡೆಯಿತು. ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ ಸ್ತಬ್ಧಚಿತ್ರಗಳು ದೇವಾಲಯದಿಂದ ಶೋಭಾಯಾತ್ರೆ ತೆರಳಿ, ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದವು. ಗೊಂಬೆಕುಣಿತ, ಪಟ ಕುಣಿತ, ಚಂಡೆ, ವಾದ್ಯಗೋಷ್ಠಿಗಳು ಗಮನ ಸೆಳೆದವು. ಶೋಭಾಯಾತ್ರೆಯಲ್ಲಿ ಶ್ರೀರಾಮನ ಭಜನೆ ನಡೆಯಿತು. ಶ್ರೀರಾಮ, ಹನುಮಂತನಿಗೆ ಜೈಕಾರಗಳು ಮೊಳಗಿದವು. ಸಾವಿರಾರು ಮಂದಿ ಸಾರ್ವಜನಿಕರು ಶೋಭಾಯಾತ್ರೆಗೆ ಸಾಕ್ಷಿಯಾದರು.
ಆಂಜನೇಯ ದೇವಾಲಯ ಸಮಿತಿ, ಹಾನಗಲ್ಲು, ಹಾನಗಲ್ಲು ಶೆಟ್ಟಳ್ಳಿ, ಗೌಡ ಸಮಾಜ ರಸ್ತೆ, ಆಲೇಕಟ್ಟೆ ರಸ್ತೆ, ಗೌಡಳ್ಳಿ, ಯಡೂರು, ಸೋಮವಾರಪೇಟೆ ಪಟ್ಟಣ, ಮಹದೇಶ್ವರ ಬ್ಲಾಕ್, ಕ್ಲಬ್ ರಸ್ತೆ, ಮಸಗೋಡು, ಕಲ್ಕಂದೂರು ಗ್ರಾಮಗಳಿಂದ ಸ್ತಬ್ಧಚಿತ್ರಗಳು ಆಗಮಿಸಿ, ಶೋಭಾಯಾತ್ರೆಗೆ ಮೆರುಗು ನೀಡಿದವು.
ರಾಮನವಮಿ ಅಂಗವಾಗಿ ಬೆಳಗ್ಗಿನಿಂದಲೇ ಮದ್ಯ, ಮಾಂಸದAಗಡಿಗಳನ್ನು ಬಂದ್ ಮಾಡಲಾಗಿತ್ತು. ಸಂಜೆ ೫ ಗಂಟೆಯಿAದ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ವಾಹನ ಸಂಚಾರದ ದಟ್ಟಣೆಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.
೨ ಕೆಎಸ್ಆರ್ಪಿ ತುಕಡಿ, ೨ ಜಿಲ್ಲಾ ಪೊಲೀಸ್ ಮೀಸಲು ಪಡೆಯ ತುಕಡಿ, ೧ ಡಿವೈಎಸ್ಪಿ, ೫ ಪೊಲೀಸ್ ಇನ್ಸ್ಪೆಕ್ಟರ್ಗಳು ಸೇರಿದಂತೆ ೨೦೦ಕ್ಕೂ ಅಧಿಕ ಮಂದಿ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದರು.