ಮಡಿಕೇರಿ, ಮಾ. ೨೭: ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಇಬ್ಬರು ಎಸ್.ಎಸ್.ಎಲ್ ಸಿ ವಿಧ್ಯಾರ್ಥಿಗಳ ಭವಿಷ್ಯವನ್ನು ಹೊಸಕಿ ಹಾಕಿದ್ದು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ನವರ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿದೆ ಎಂದು ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಆಗಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಹೇಳಿಕೆ ನೀಡಿದ್ದಾರೆ.
ದಿನಾಂಕ ೨೦-೬-೨೦೨೫ ರಂದು ಇಲಾಖಾ ನಿಯಮಾನುಸಾರ ಉದಯ ವಿದ್ಯಾಸಂಸ್ಥೆ ಕನ್ನಡ ಮಾಧ್ಯಮದ ಮಾನ್ಯತೆ ರದ್ದಾಗಿರುತ್ತದೆ. ಆಂಗ್ಲ ಮಾಧ್ಯಮ ಶಾಲೆಗೆ ೮ನೇ ತರಗತಿವರೆಗೆ ಮಾತ್ರ ಅನುಮತಿ ಇದ್ದು ಸಂಸ್ಥೆಯ ಅಧ್ಯಕ್ಷರಾದ ತಳೂರು ಕಿಶೋರ್ ಕುಮಾರ್ ನೇತೃತ್ವದ ಆಡಳಿತ ಮಂಡಳಿ ಹಾಗೂ ಬೋಧಕ ಸಿಬ್ಬಂದಿ ವರ್ಗದವರು ಮಕ್ಕಳ ಪೋಷಕರನ್ನು ವಂಚಿಸಿ, ೧೭ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದು ಈಗ ಇಬ್ಬರು ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆ ಬರೆಯದೆ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಂಡಿದ್ದಾರೆ. ಪರೀಕ್ಷೆಯ ದಿನದವರೆಗೂ ಶಾಲೆಯ ಆಡಳಿತ ಮಂಡಳಿ ಈ ವಿಚಾರವನ್ನು ಗೌಪ್ಯವಾಗಿ ಇಟ್ಟು ವಂಚನೆ ಮಾಡಿದ್ದಾರೆ. ನಂತರ ಮೊದಲ ಪರೀಕ್ಷೆಯ ದಿನದಂದು ಈ ವಿಚಾರ ಬಹಿರಂಗವಾದ ಕೂಡಲೇ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಮಕ್ಕಳ ಭವಿಷ್ಯದ ಬಗ್ಗೆ ಮುತುವರ್ಜಿ ವಹಿಸಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್, ಎಸ್.ಎಸ್.ಎಲ್.ಸಿ ಬೋರ್ಡ್ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಎಲ್ಲಾ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಇಬ್ಬರು ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದ ಸಮಾಧಾನಗೊಂಡ ಪೋಷಕರು ತಮ್ಮ ಮಕ್ಕಳೊಂದಿಗೆ ಸರ್ಕಾರಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಹಾಲ್ ಟಿಕೆಟ್ ಸಿಗದೆ ರಾಜ್ಯಾದ್ಯಂತ ಚರ್ಚೆ ಆಗುತ್ತಿದ್ದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದ ವಿದ್ಯಾಸಂಸ್ಥೆ ಅಧ್ಯಕ್ಷರಾದ ತಳೂರು ಕಿಶೋರ್ ಕುಮಾರ್ ಯಾವಾಗ ಹಾಲ್ ಟಿಕೆಟ್ ಸಿಕ್ಕಿದೆ ಎಂದು ಪ್ರಚಾರವಾಯಿತೋ ಅಲ್ಲಿಂದ ಮಾಧ್ಯಮ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಉದಯ ವಿದ್ಯಾ ಸಂಸ್ಥೆಯ ಪರವಾಗಿ ಪೊನ್ನಣ್ಣ ಅವರಿಗೆ ಅಭಿನಂದನೆ ಸಲ್ಲಿಸುವ ಬದಲಿಗೆ ಶಾಸಕ ಪೊನ್ನಣ್ಣನವರ ಬಗ್ಗೆ ಆಕ್ಷೇಪಣೆ ಮಾಡುವ ಮೂಲಕ ರಾಜಕಾರಣ ಮಾಡಲು ಹೊರಟಿದ್ದಾರೆ. ಇದು ನಾಚಿಕೆಗೇಡಿನ ವಿಚಾರ ಎಂದು ಮೈನಾ ತಾ. ೧೦-೦೧-೨೦೨೫ ರಂದು ಕೊಡಗಿನ ಶಕ್ತಿ ದಿನಪತ್ರಿಕೆ ಸೇರಿದಂತೆ ಎಲ್ಲಾ ಮುದ್ರಣ ಮಾಧ್ಯಮಗಳಲ್ಲಿ ಉದಯ ವಿದ್ಯಾಸಂಸ್ಥೆ ಯಲ್ಲಿ ೯ನೇ ತರಗತಿ ಮತ್ತು ೧೦ ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಿಸುವುದು ಅನಧಿಕೃತವಾಗಿದ್ದು, ಪೋಷಕರು ದಾಖಲೆ ಮಾಡಿದಲ್ಲಿ ಮುಂದಾಗುವ ಆಗುಹೋಗುಗಳಿಗೆ ಇಲಾಖೆ ಜವಾಬ್ದಾರರಲ್ಲ ಎಂದು ಇಲಾಖೆ ಪ್ರಕಟಣೆ ಹೊರಡಿಸಿತ್ತು.
ಇದನ್ನು ಕಡೆಗಣಿಸಿ ಸಂಸ್ಥೆ ವಿದ್ಯಾರ್ಥಿಗಳನ್ನು ೯ ಮತ್ತು ೧೦ನೇ ತರಗತಿಗೆ ದಾಖಲಿಸುವ ಮೂಲಕ ಅಪರಾಧ ಎಸಗಿದೆ ಎಂದು ಅವರು ಆರೋಪಿಸಿದ್ದಾರೆ.