ಕಣಿವೆ, ಮಾ. ೨೭: ಈ ಬಾರಿಯ ಬೇಸಿಗೆ ಈ ಹಿಂದಿನ ವರ್ಷಗಳಲ್ಲಿನ ಬೇಸಗೆಯಂತಲ್ಲ. ಕಳೆದು ಹೋದ ಈ ಬಾರಿಯ ಮಳೆಗಾಲ ಅಗತ್ಯಕ್ಕಿಂತ ಹೆಚ್ಚು ಮಳೆ ಸುರಿಸಿ ಜನರನ್ನು ಹೈರಾಣಾಗಿಸಿತೋ ಹಾಗೆಯೇ ಚಳಿಗಾಲವೂ ತನ್ನ ಸರದಿಯನ್ನು ಭೀಕರವಾಗಿಯೇ ಮುಗಿಸಿ ತೆರಳಿತು.

ಇದೀಗ ಬೇಸಿಗೆಯ ಸರದಿ, ಈ ಬಾರಿ ಆರಂಭದಲ್ಲಿಯೇ ಭಯ ಮೂಡಿಸುತ್ತಿದೆ. ಭೂಮಿಯ ಮೇಲೆ ಸೂರ್ಯನ ಧಾಳಿ ನಿರೀಕ್ಷೆಗೂ ಮೀರಿದ್ದಾಗಿದೆ.

ಈ ಬಾರಿಯ ಬೇಸಿಗೆಯ ಧಗೆಗೆ ಜಲಮೂಲಗಳು ಹೆದರಿ ಪತರಗುಟ್ಟುತ್ತಿವೆ. ಕೆರೆ, ಹಳ್ಳ - ಕೊಳ್ಳಗಳಲ್ಲಿನ ನೀರು ಇಂಗುತ್ತಿದೆ. ಕಾಡಿನೊಳಗೆ ಕಾಡಾನೆಗಳು ಸೇರಿದಂತೆ ಇತರ ವನ್ಯ ಪ್ರಾಣಿಗಳ ಕುಡಿವ ನೀರಿನ ಮೂಲವಾಗಿದ್ದ ಕೆರೆ-ಕೊಳ್ಳಗಳಲ್ಲಿನ ನೀರು ಬಿಸಿಲ ಆರ್ಭಟಕ್ಕೆ ಬರಿದಾಗುತ್ತಿದೆ.

ಕಾಡಾನೆಗಳು ಊರಿಗೆ

ಕಾಡಿನಲ್ಲಿ ಕುಡಿವ ನೀರು ಇಲ್ಲದ ಕಾರಣ ಕಾಡಾನೆಗಳು ಹಸಿವು ಹಾಗೂ ದಾಹ ನೀಗಿಸಲು ಹಗಲು, ರಾತ್ರಿ ಎನ್ನದೇ ದಿನವಿಡೀ ನಾಡಿನತ್ತ ಮುಖ ಮಾಡುತ್ತಿವೆ. ತೋಟಗಳ ಬೆಳೆಗಾರರು ತಮ್ಮ ಮನೆಗಳ ಅಂಗಳಗಳಲ್ಲಿ ಪ್ಲಾಸ್ಟಿಕ್ ಡ್ರಮ್ಮುಗಳಲ್ಲಿ, ಟ್ಯಾಂಕುಗಳಲ್ಲಿ ತುಂಬಿಸಿಟ್ಟ ನೀರನ್ನು ಹುಡುಕಿ ಮನೆಯಂಗಳಕ್ಕೆ ಧಾವಿಸುತ್ತಿವೆ.

ಇತ್ತೀಚಿಗೆ ಬಾಳುಗೋಡು, ತೊಂಡೂರು, ಏಳನೇ ಹೊಸಕೋಟೆ, ನಂಜರಾಯಪಟ್ಟಣ, ರಂಗಸಮುದ್ರ ಭಾಗದ ಬೆಳೆಗಾರರ ಮನೆಯಂಗಳಕ್ಕೆ ಧಾವಿಸಿ ಬಂದ ಕಾಡಾನೆಗಳ ಹಿಂಡು ನೀರಿನ ತೊಟ್ಟಿಗಳನ್ನು ಹಾನಿ ಮಾಡಿದ್ದವು. ನೀರಿನ ಜೆಟ್‌ಗಳನ್ನು ಕಿತ್ತೆಸೆದು ತಮ್ಮ ಆಕ್ರೋಶ ಹೊರಹಾಕಿದ್ದವು.

ಇತ್ತೀಚೆಗೆ ನಂಜರಾಯಪಟ್ಟಣ ವ್ಯಾಪ್ತಿಯ ಬಾಳೆಗುಂಡಿ ಹಾಡಿಯಲ್ಲಿ ಹಾಡಹಗಲೇ ದಾಂಧಲೆಗೈದ ಸಲಗ ಆದಿವಾಸಿ ಮಹಿಳೆಯನ್ನು ಬಲಿ ಪಡೆದಿತ್ತು. ಗುಹ್ಯ ಗ್ರಾಮದಲ್ಲಿ ಬೆಳೆಗಾರರೊಬ್ಬರನ್ನೂ ಬಲಿ ಪಡೆದಿತ್ತು.

ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಮಾತ್ರವಲ್ಲ ಅರಣ್ಯ ಇಲಾಖೆಯ ಕಾವಲು ಸಿಬ್ಬಂದಿಗಳಿಗೆ ಸವಾಲು ಎಸೆದಂತಿದೆ.

ಕಾಡೆಲ್ಲಾ ಬೋಳು....ಎಲ್ಲಿದೆ ಹುಲ್ಲು...?

ಅರಣ್ಯದೊಳಗೆ ಕಾಡಾನೆಗಳಿಗೆ ಬಾಯಿಯ ರುಚಿಯೊಂದಿಗೆ ಹೊಟ್ಟೆಗೆ ಆಹಾರವಾಗಿದ್ದ ಹಲಸು, ಆಲ, ಅರಳಿ, ಸಾಗುವಾನಿ ಮೊದಲಾದ ಮರಗಳ ತೊಗಟೆಗಳು ಇದೀಗ ಇಲ್ಲವೇ ಇಲ್ಲ. ಇನ್ನು ಸೂರ್ಯನ ಪ್ರತಾಪಕ್ಕೆ ಹಸಿರು ಹುಲ್ಲು, ಸೊಪ್ಪುಗಳು ಇಲ್ಲದೇ ಎಲ್ಲೆಲ್ಲೂ ಅರಣ್ಯ ಪರಿಸರ ಒಣಗಿ ನಿಂತAತೆ ಭಾಸವಾಗುತ್ತಿದೆ. ಯುಗಾದಿಯನ್ನು ಬರಮಾಡಿಕೊಳ್ಳಲು ಹೊಂಗೆಯ ಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರಿನೊಂದಿಗೆ ನಳ ನಳಿಸುತ್ತಿವೆ. ಆದರೆ ಈ ಹೊಂಗೆಯ ಸೊಪ್ಪು ಕಾಡಾನೆಗಳಿಗೆ ಅಪ್ರಿಯ.

ಏಳನೇ ಹೊಸಕೋಟೆ, ತೊಂಡೂರು, ಬಾಳುಗೋಡು, ಅತ್ತೂರು, ಹೊಸಪಟ್ಟಣ, ನಂಜರಾಯಪಟ್ಟಣ ಮೊದಲಾದ ಪ್ರದೇಶಗಳ ಅರಣ್ಯದ ಅಂಚಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಅಳವಡಿಸಿದ್ದ ರೈಲ್ವೆ ಕಂಬಿಗಳ ತಡೆಗೋಡೆ ಕಾಡಾನೆಗಳ ತಡೆಗೆ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ರೈಲ್ವೆ ಕಂಬಿಗಳ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿರುವ ಕಾರಣ ಕೆಲವು ಕಡೆಗಳಲ್ಲಿ ಕಂಬಿಯ ಒಳಗೆ ನುಸುಳಿ ನಾಡಿನತ್ತ ಧಾವಿಸುವ ಕಾಡಾನೆಗಳು ಕಾಡಿಗೆ ಮರಳಲು ಹರಸಾಹಸಪಡುತ್ತಿವೆ.

ಹಾಗಾಗಿ ಜನ ಹಾಗೂ ವಾಹನಗಳ ಶಬ್ಧಕ್ಕೆ ಹೆದರಿ ಊರುಗಳತ್ತ ಇರುವ ಗಿಡ ಗಂಟಿಗಳ ಪೊದೆ, ಮರಗಿಡಗಳ ಮರೆಯಲ್ಲಿ ಹಗಲು ವೇಳೆ ವಿರಮಿಸುತ್ತಿವೆ.

ಇಂತಹ ಹೊತ್ತಿನಲ್ಲಿ ಅಮಾಯಕ ಗ್ರಾಮಸ್ಥರು ಅತ್ತ ಧಾವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ಘಟಿಸುತ್ತಿರುವ ಪ್ರಕರಣಗಳು ಇಂತಹವೇ ಎಂದು ಹೊಸಪಟ್ಟಣದ ಕಾಫಿ ಬೆಳೆಗಾರ ನವೀನ್ ಹೇಳುತ್ತಾರೆ.

ಆದಿವಾಸಿಗಳು ಎಚ್ಚರ ವಹಿಸಲು ಕರೆ

ಕಾಡಂಚಿನ ಆದಿವಾಸಿಗಳು ಕಾಡಾನೆಗಳ ಹಾವಳಿ ಇರುವ ಕಡೆಗಳಲ್ಲಿ ಹಗಲು ಹಾಗೂ ರಾತ್ರಿ ವೇಳೆ ಎಚ್ಚರ ವಹಿಸಬೇಕು. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಕಾಡಿನೊಳಗೆ ತೆರಳುವ ಆದಿವಾಸಿಗಳು ಜಾಗೃತಿ ವಹಿಸುವಂತೆ ಆದಿವಾಸಿಗಳ ಮುಖಂಡ ರಂಗಸಮುದ್ರದ ಆರ್.ಕೆ.ಚಂದ್ರು ಮನವಿ ಮಾಡಿದ್ದಾರೆ.

ಒಟ್ಟಾರೆ, ಬೇಸಗೆಯ ಬಿಸಿಲು ಸೃಷ್ಟಿಸುತ್ತಿರುವ ಅವಾಂತರಗಳಿಗೆ ಕಾಡಂಚಿನ ಮಂದಿ ಜಾಗೃತಿ ವಹಿಸುವುದು ಸೂಕ್ತ. ಜೊತೆಗೆ ಅರಣ್ಯ ಅಧಿಕಾರಿಗಳು ಕಾಡಾನೆಗಳ ಚಲನ-ವಲನ ಹೆಚ್ಚಾಗಿ ಇರುವ ಕಡೆಗಳಲ್ಲಿ ಕಾಡಂಚಿನಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ತಾತ್ಕಾಲಿಕವಾದ ನೀರು ಸಂಗ್ರಹ ಗುಂಡಿಗಳನ್ನು ನಿರ್ಮಿಸುವತ್ತ ಮುಂದಾಗಬೇಕಿದೆ.

- ಕೆ.ಎಸ್. ಮೂರ್ತಿ