ಮಡಿಕೇರಿ, ಮಾ. ೨೭: ರಾಮನವಮಿ ಪ್ರಯುಕ್ತ ಕೊಡಗು ಜಿಲ್ಲೆಯಾದ್ಯಂತ ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ಭಕ್ತಾದಿಗಳು ಇಂದು ಆರಾಧಿಸಿದರು. ಜಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ಶ್ರೀರಾಮನನ್ನು ಸ್ತುತಿಸಿ ಪೂಜೆಯಲ್ಲಿ ಭಾಗಿಯಾದರು. ಪ್ರಮುಖ ದೇವಾಲಯಗಳಲ್ಲಿ ವಿಜೃಂಭಣೆಯ ಅಲಂಕಾರ ನಡೆದು ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆಯೂ ನೆರವೇರಿತು.

ಜಿಲ್ಲಾ ಕೇಂದ್ರ ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ನಿನ್ನೆ ಬೃಹತ್ ಮೆರವಣಿಗೆ ನಗರದ ಜನರ ಗಮನ ಸೆಳೆದಿತ್ತು. ಇಂದು ದೇವಾಲಯದ ಆವರಣದಲ್ಲಿ ಪೂಜಾ ವಿಧಿ-ವಿಧಾನಗಳು ನೆರವೇರಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು. ಸೋಮವಾರಪೇಟೆಯಲ್ಲೂ ಸಂಜೆ ಅದ್ದೂರಿ ಮೆರವಣಿಗೆ ಜರುಗಿ ಜನಸ್ತೋಮವನ್ನು ಆಕರ್ಷಿಸಿತು. ಐತಿಹಾಸಿಕ ಹಿನ್ನೆಲೆಯುಳ್ಳ ಕಣಿವೆಯ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ ಶ್ರದ್ಧಾಭಕ್ತಿಯಿಂದ ಶುಕ್ರವಾರ ಮಧ್ಯಾಹ್ನ ನೆರವೇರಿತು. ಸುಂಟಿಕೊಪ್ಪದ ಕೋದಂಡರಾಮ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಗೌರಿ ಗಣೇಶ ಸಮಿತಿ ವತಿಯಿಂದ ರಾಮನವಮಿ ಆಚರಣೆ ಜರುಗಿತು. ಮಡಿಕೇರಿಯ ಪೇಟೆ ಶ್ರೀರಾಮಮಂದಿರದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಕುಶಾಲನಗರ ರಥಬೀದಿಯ ಆಂಜನೇಯ ಸೇವಾ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಪಾನಕ ವಿತರಣೆ ಜರುಗಿತು.

ವೈಭವದ ರಾಮಲಿಂಗೇಶ್ವರ ರಥೋತ್ಸವ

ಕಣಿವೆ: ಐತಿಹಾಸಿಕ ಹಿನ್ನೆಲೆಯುಳ್ಳ ಕಣಿವೆಯ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ ಶುಕ್ರವಾರ ಮಧ್ಯಾಹ್ನ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕೊಡಗು ಜಿಲ್ಲೆಯ ಭಕ್ತರು ಸೇರಿದಂತೆ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಅಪಾರ ಭಕ್ತಗಣ ರಥೋತ್ಸವಕ್ಕೆ ಸಾಕ್ಷಿಯಾಯಿತು.

ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭಗೊAಡ ದೇವಾಲಯದ ವಿವಿಧ ಧಾರ್ಮಿಕ ವಿದಿವಿಧಾನಗಳು ಮಧ್ಯಾಹ್ನ ೧-೩೦ ರವರೆಗೂ ಜರುಗಿದವು.

ಈ ನಡುವೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಕಾಶಿಯ ವಿಶ್ವೇಶ್ವರನ ಸನ್ನಿಧಿಯಿಂದ ಅಂಚೆಯಲ್ಲಿ ತರಿಸಿದ ಗಂಗಾ ತೀರ್ಥವನ್ನು ಮೆರವಣಿಗೆಯಲ್ಲಿ ರಾಮಲಿಂಗೇಶ್ವರ ಸನ್ನಿಧಿಗೆ ತಂದ ಬಳಿಕ ರಾಮಲಿಂಗೇಶ್ವರನ ಪವಿತ್ರ ಶಿವಲಿಂಗ ಹಾಗೂ ದೇವತಾ ಉತ್ಸವ ಮೂರ್ತಿಗೆ ಪ್ರೋಕ್ಷಣೆಗೈದ ನಂತರ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬೆಂಗಳೂರಿನ ನರಹರಿಶರ್ಮಾ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಮಧ್ಯಾಹ್ನ ರಥಕ್ಕೆ ವಿಶೇಷ ಪೂಜೆ ಹಾಗೂ ರಥಬಲಿ ಜರುಗಿದ ನಂತರ ಭಕ್ತರ ಓಂಕಾರದ ಝೇಂಕಾರಗಳೊAದಿಗೆ ರಥಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ವಿವಿಧ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತ ಭಕ್ತರು ರಥದ ಉತ್ಸವ ಮೂರ್ತಿಯ ಮೇಲೆ ಬಾಳೆ ಹಣ್ಣು ಹಾಗು ಜವುನಗಳನ್ನು ಎಸೆಯುವ ಮೂಲಕ ಪುನೀತರಾದರೆ, ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಇನ್ನೂ ಕೆಲವರು ರಥೋತ್ಸವ ಚಲಿಸುವ ಹೆದ್ದಾರಿ ಬದಿಯಲ್ಲಿ ಮಜ್ಜಿಗೆ, ಪಾನಕಗಳನ್ನು ವಿತರಿಸುವ ಮೂಲಕ ಭಕ್ತಿ ಭಾವ ಮೆರೆದರು.

ಮಧ್ಯಾಹ್ನ ದೇವಾಲಯದಿಂದ ಹೊರಟ ರಥ ಕಣಿವೆ ಗ್ರಾಮದ ಅರಳಿಮರದ ಕಟ್ಟೆಯವರೆಗೂ ತೆರಳಿ ಸಂಜೆ ಸ್ವಸ್ಥಾನಕ್ಕೆ ಮರಳಿತು.

ಮಧ್ಯಾಹ್ನ ದೇವಾಲಯದ ಆವರಣದಲ್ಲಿ ನೆರೆದ ಸಹಸ್ರ ಸಂಖ್ಯೆಯ ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನಪ್ರಸಾದ ನೆರವೇರಿಸಲಾಯಿತು.

ಮೂರು ದಿನಗಳ ಜಾತ್ರೆ

ರಥೋತ್ಸವದ ಅಂಗವಾಗಿ ಕಣಿವೆ ಗ್ರಾಮದ ಮುಖ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ಜಾತ್ರೆ ಏರ್ಪಟ್ಟಿದ್ದು ಮೂರು ದಿನಗಳ ಕಾಲ ನಡೆಯಲಿದೆ.

ಜಾತ್ರೆಯಲ್ಲಿ ಕಡ್ಲೆಪುರಿ ಮಳಿಗೆಗಳು, ಹೆಣ್ಣು ಮಕ್ಕಳನ್ನು ಆಕರ್ಷಿಸುವ ಬಳೆಗಳ ಮಳಿಗೆಗಳು ಸೇರಿದಂತೆ ವೈವಿಧ್ಯಮಯ ಮಳಿಗೆಗಳು ಭಕ್ತರ ಆಕರ್ಷಣೆಯಾಗಿದ್ದವು. ರಥೋತ್ಸವಕ್ಕೆ ಬಂದ ಬಹಳಷ್ಟು ಭಕ್ತರು ದೇವಾಲಯದ ಮುಂಬದಿಯ ಶಿಥಿಲಗೊಂಡ ಕಾವೇರಿ ನದಿಯ ತೂಗುಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆಸಿಕೊಂಡರು.

ಪುರಾತನ ಕಾಲದಿಂದ ನಡೆದು ಬಂದ ಪದ್ದತಿಯಂತೆ ಹೆಬ್ಬಾಲೆಯ ಮಡಿವಾಳ ಸಮಾಜದ ಮಲ್ಲೇಶ, ಪ್ರಕಾಶ, ಮಂಜಶೆಟ್ಟಿ, ಪುಟ್ಟಣ್ಣ, ಯೋಗೇಶ ಮೊದಲಾದವರು ರಥವನ್ನು ವಸ್ತ್ರಗಳು ಹಾಗೂ ತಳಿರು ತೋರಣಗಳಿಂದ ಅಲಂಕಾರ ಮಾಡಿದರು.

ನೆರೆಯ ಹೆಬ್ಬಾಲೆ ಗ್ರಾಮಸ್ಥರು ತಂದ ಕಾಶಿ ತೀರ್ಥವನ್ನು ಸಂಪ್ರದಾಯದAತೆ ಕಣಿವೆ ದೇವಾಲಯ ಸಮಿತಿಯಿಂದ ಊರಿನ ಹೆಬ್ಬಾಗಿಲು ಹಕ್ಕೆ ಬಳಿಯ ಮುಖ್ಯರಸ್ತೆಯಲ್ಲಿ ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭ ಗುಂಡ್ಲುಪೇಟೆಯ ದಕ್ಷಿಣ ಮೂರ್ತಿ, ಬಸವರಾಜು ಹಾಗೂ ಸುರೇಶ್ ತಂಡದ ವೀರಗಾಸೆ, ಕೇರಳದ ಚಂಡೆವಾದ್ಯ, ಮಂಗಳೂರಿನ ಗೊಂಬೆ ಕುಣಿತದೊಂದಿಗೆ ಕಾಶಿ ತೀರ್ಥವನ್ನು ಮೆರವಣಿಗೆಯಲ್ಲಿ ದೇವಾಲಯದ ಸನ್ನಿಧಿಗೆ ತರಲಾಯಿತು.

ಬಿಸಿಲ ಬೇಗೆಯ ನಡುವೆ ನಡೆದ ರಥೋತ್ಸವದ ಸಂದರ್ಭ ಹೆದ್ದಾರಿಯಲ್ಲಿ ಬಸ್ಸು ಕಾರುಗಳಲ್ಲಿ ಸಾಗುತ್ತಿದ್ದ ಮಂದಿಗೆಲ್ಲಾ ತಂಪು ಪಾನಕ ಮಜ್ಜಿಗೆ ನೀಡಲಾಯಿತು.

ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರ, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ತಂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.

ಚಿನ್ನಾಭರಣ ನಗದು ಜಾಗೃತಿ

ರಥೋತ್ಸವದಲ್ಲಿ ಭಾಗಿಯಾಗಿದ್ದ ಮಹಿಳೆಯರು ಚಿನ್ನಾಭರಣಗಳ ಬಗ್ಗೆ ಎಚ್ಚರ ವಹಿಸುವಂತೆ ಹಾಗೂ ಪುರುಷರ ಪರ್ಸ್ಗಳು, ಮೊಬೈಲ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ದೇವಾಲಯ ಸಮಿತಿಯಿಂದ ಸಾರ್ವಜನಿಕರಿಗೆ ಮೈಕ್‌ಗಳ ಮೂಲಕ ಅರಿವು ಮೂಡಿಸಲಾಯಿತು.

ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಶರ್ಮಾ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ, ಕಾರ್ಯದರ್ಶಿ ಕೆ.ಎಸ್.ಮಾಧವ, ಪದಾಧಿಕಾರಿಗಳಾದ ಮಂಜುನಾಥ ಸ್ವಾಮಿ, ಇ.ಕೆ.ಗಣೇಶ, ನವೀನ್, ಮಧು, ಮೋಹನ್ ಮೊದಲಾದವರಿದ್ದರು.