ಮಡಿಕೇರಿ,ಮಾ.೨೭: ಮಡಿಕೇರಿ ನಗರದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಅಮೃತ್-೨ ಕುಡಿಯುವ ನೀರಿನ ಯೋಜನೆ ಹಾಗೂ ಬೀದಿ ನಾಯಿಗಳಿಗೆ ಆಶ್ರಯತಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ನಗರಸಭಾ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಗರಸಭಾಧ್ಯಕ್ಷೆ ಪಿ. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಅಮೀನ್ ಮೊಹಿಸಿನ್ ವಿಷಯ ಪ್ರಸ್ತಾಪಿಸಿ ಅಮೃತ್-೨ ಯೋಜನೆಯ ಕಾಮಗಾರಿಗಾಗಿ ನಗರದ ಮುಖ್ಯ ರಸ್ತೆಗಳನ್ನೆಲ್ಲ ಅಗೆದು ಗುಂಡಿ ಮಾಡಿ ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ಕಾಂಕ್ರಿಟ್, ಇಂಟರ್ಲಾಕ್ಗಳನ್ನು ಅಗೆದು ಹಾಕಿದ್ದಾರೆ. ಇನ್ನೂ ಕೂಡ ಸರಿಯಾಗಿ ಅಳವಡಿಸಿಲ್ಲ. ಮಳೆಗಾಲ ಆರಂಭವಾಗಲಿದ್ದು, ಸಮಸ್ಯೆ ಎದುರಾಗಲಿದೆ. ಯೋಜನೆಗಾಗಿ ನಗರಸಭೆಯಿಂದ ರೂ.೧.೨೦ ಕೋಟಿ ನೀಡಲಾಗಿದೆ. ಆದರೂ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ದನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ಶೆಟ್ಟಿ; ಒಳಚರಂಡಿ ಮಂಡಳಿಯವರಲ್ಲಿ ಸರಿಯಾದ ಪ್ಲಂಬರ್ಗಳಿಲ್ಲ, ಅವರುಗಳು ತುಂಡರಿಸುವ ನೀರಿನ ಪೈಪ್ಗಳನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು. ಸದಸ್ಯ ರಮೇಶ್ ಮಾತನಾಡಿ; ಮನೆ ಮನೆಗಳಿಗೆ ಸರಿಯಾಗಿ ಸಂಪರ್ಕ ನೀಡುತ್ತಿಲ್ಲ, ಮೀಟರ್ಗಳನ್ನು ಬೇಕಾಬಿಟ್ಟಿಯಾಗಿ ಮನೆಯ ಬಾಗಿಲುಗಳಲ್ಲಿ ಅಳವಡಿಸುತ್ತಿರುವದಾಗಿ ಹೇಳಿದರು.
ಪೌರಾಯುಕ್ತ ರಮೇಶ್ ಮಾತನಾಡಿ; ಒಳಚರಂಡಿ ಮಂಡಳಿ ಉಪನಿರ್ದೇಶಕ ಪ್ರಸನ್ನ ಅವರು ಮಾರ್ಚ್ ತಿಂಗಳ ಒಳಗಡೆ ಕಾಮಗಾರಿ ಪೂರ್ಣಗೊಳಿಸುವದಾಗಿ ಹೇಳಿದ್ದರು. ಆದರೆ; ಇನ್ನೂ ಆಗಿಲ್ಲ, ಸಂಪರ್ಕ ಕಲ್ಪಿಸುವಾಗ ನಗರಸಭೆಯಿಂದ ನೀರಿನ ಸಂಪರ್ಕ ಪಡೆದುಕೊಂಡಿರುವವರ ಬಗ್ಗೆ ಮಾಹಿತಿ ಪಡೆದುಕೊಂಡು ನೀಡಬೇಕು. ಇಲ್ಲವಾದಲ್ಲಿ ಹೊಸದಾಗಿ ಸಂಪರ್ಕ ಕಲ್ಪಿಸಿಕೊಂಡವರಿಗೆ ನೀಡಬೇಕು. ಅನಧಿಕೃತವಾಗಿ ಯಾರಿಗೂ ಸಂಪರ್ಕ ನೀಡಬಾರದು. ಗುಂಡಿಗಳನ್ನು ಸರಿಯಾಗಿ ಮುಚ್ಚಬೇಕು. ಸುಮ್ಮನೆ ೧.೨೦ ಕೋಟಿ ಕೊಟ್ಟಿರುವದಲ್ಲವೆಂದು ಮಂಡಳಿ ಅಧಿಕಾರಿ ವಿಪಿನ್ ಅವರಿಗೆ ಸೂಚಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಣ್ಣ ಮಾತನಾಡಿ; ಎಲ್ಲರಿಗೂ ಸಂಪರ್ಕ ನೀಡಿ ನಿಗದಿತ ದರ ವಿಧಿಸುವಂತಾಗಬೇಕು, ಹೊಸ ಸಂಪರ್ಕಕ್ಕೆ ಗುತ್ತಿಗೆದಾರರಿಗೆ ವಹಿಸಿದರೆ ದುಪ್ಪಟ್ಟು ಹಣ ಪಡೆಯುತ್ತಾರೆ, ಈ ಬಗ್ಗೆ ಗಮನಹರಿಸಬೇಕೆಂದು ಸಲಹೆ ಮಾಡಿದರು. ಉಪಾಧ್ಯಕ್ಷ ಮಹೇಶ್ ಜೈನಿ ಪ್ರತಿಕ್ರಿಯಿಸಿ ಇದೀಗ ಮನೆ ಆವರಣದವರೆಗೂ ಪೈಪ್ಲೈನ್ ಹಾಕಲಾಗುತ್ತಿದೆ, ಹೆಚ್ಚಿನ ಹಣ ನೀಡಬೇಕಿಲ್ಲ, ನಗರಸಭೆ ವಿಧಿಸುವ ನೀರಿನ ಕರ ನೀಡಿದರೆ ಸಾಕೆಂದು ಹೇಳಿದರು. ಇದೀಗ ಕಾರ್ಮಿಕರು ರಜೆಯಲ್ಲಿ ತೆರಳಿದ್ದು, ಸೋಮವಾರದಿಂದ ಕೆಲಸ ಆರಂಭಿಸಿ, ಶೀಘ್ರವಾಗಿ ಪೂರ್ಣಗೊಳಿಸುವದಾಗಿ ಹೇಳಿದರು.
ಬೀದಿನಾಯಿಗಳ ಆಶ್ರಯತಾಣ
ಸಭೆಯಲ್ಲಿ ಸದಸ್ಯ ಮನ್ಸೂರ್ ಮಾತನಾಡಿ; ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ, ಈ ಬಗ್ಗೆ ಪ್ರತಿ ಸಭೆಗಳಲ್ಲಿಯೂ ಚರ್ಚೆಯಾಗುತ್ತಿದೆ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನಾಯಿಗಳಿಗೆ ಆಶ್ರಯತಾಣ ಕಲ್ಪಿಸುವ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಕಾರ್ಯಪಾಲಕ ಅಭಿಯಂತರ ಸತ್ಯನಾರಾಯಣ ಅವರು; ಈಗಾಗಲೇ ಟೆಂಡರ್ ಆಗಿದ್ದು, ಜಾಗ ಗುರುತಿಸಿ ಕೆಲಸ ಪ್ರಾರಂಭಿಸಲಾಗಿದೆ. ನಾಯಿಗಳನ್ನು ಹಿಡಿದು ಆಶ್ರಯತಾಣದಲ್ಲಿ ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ, ಆರೈಕೆ ಮಾಡಿ ಬಿಡಲಾಗುವದು. ಕಚ್ಚುವ ನಾಯಿಗಳನ್ನು ಮಾತ್ರ ಆಶ್ರಯತಾಣದಲ್ಲಿರಿಸಿಕೊಳ್ಳಲಾಗುವದೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಅಮೀನ್, ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಯಾಕೆ ಪಾಲನೆ ಮಾಡುತ್ತಿಲ್ಲ, ಆದೇಶದಲ್ಲಿ ನಾಯಿಗಳಿಗೆ ಆಶ್ರÀ್ರಯ ಒದಗಿಸಿ ಆಹಾರ ಒದಗಿಸಬೇಕಿದೆ. ಈ ಹಿಂದೆ ನಾವುಗಳು ನೀಡಿದ್ದ ಸಲಹೆಯನ್ನೇ ಇದೀಗ ನ್ಯಾಯಾಲಯ ಹೇಳಿದೆ, ಆದಷ್ಟು ಶೀಘ್ರ ಪೂರ್ಣಗೊಳಿಸಿ ಎಂದರು.
ಪ್ರತಿಕ್ರಿಯಿಸಿದ ಪೌರಾಯುಕ್ತ ರಮೇಶ್ ಆವರು; ಈಗಾಗಲೇ ಜಾಗ ಗುರುತಿಸಿ ರೂ.೭ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಲು ಟೆಂಡರ್ ಆಗಿದೆ. ಏಜೆನ್ಸಿ ಅಂತಿಮಗೊಳಿಸಿ ಕಾರ್ಯಾದೇಶ ನೀಡಬೇಕಿದೆ. ನಾಯಿಗಳಿಗೆ ಶಸ್ತç ಚಿಕಿತ್ಸೆ ಮಾಡಿ ಬಿಡಲಾಗುವದು. ಪ್ರಮುಖವಾಗಿ ವೈದ್ಯರುಗಳಿಗೆ ವಸತಿ ವ್ಯವಸ್ಥೆ, ಸಿಬ್ಬಂದಿ ನೇಮಕ ಸೇರಿದಂತೆ ಇತರ ವ್ಯವಸ್ಥೆ ಆಗಬೇಕಾಗಿದೆ. ರೋಷವುಳ್ಳ ನಾಯಿಗಳನ್ನು ತಾಣದಲ್ಲಿಯೇ ಕೂಡಿ ಹಾಕಲಾಗುವದೆಂದು ಹೇಳಿದರು. ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ; ಎಲ್ಲಾ ನಾಯಿಗಳು ಕಚ್ಚುತ್ತವೆ, ಎಲ್ಲಾ ನಾಯಿಗಳಿಗೂ ವ್ಯವಸ್ಥೆ ಮಾಡಿ, ನಾಯಿಗಳದ್ದು ದೊಡ್ಡ ಸಮಸ್ಯೆಯಾಗಿದೆ. ಕನಿಷ್ಟ ೨ ಸಾವಿರ ನಾಯಿಗಳಿಗಾದರೂ ವ್ಯವಸ್ಥೆ ಮಾಡಿ ಎಂದು ಸಲಹೆ ಮಾಡಿದರು.
ಅಮೀನ್ ಮಾತನಾಡಿ ನಾಯಿ ಹಿಡಿದ ಮೇಲೆ ಆಹಾರ ಒದಗಿಸಬೇಕು, ಸ್ವಚ್ಛತೆ, ಇನ್ನಿತರ ಕೆಲಸಗಳಿಗೆ ಸಿಬ್ಬಂದಿ ಬೇಕು, ನಾಯಿಗಳನ್ನು ನೋಡಿಕೊಳ್ಳಲು ತರಬೇತಿ ಹೊಂದಿದವರು ಇರಬೇಕಾಗುತ್ತದೆ, ಈ ಬಗ್ಗೆ ಸದಸ್ಯ ರಮೇಶ್ ಆವರು ಈ ಹಿಂದೆಯೇ ಹೇಳಿದ್ದಾರೆ. ನಾಯಿಗಳನ್ನು ಹಿಡಿದು ಬಿಟ್ಟರೆ ಮತ್ತೆ ಸಮಸ್ಯೆಯಾಗಲಿದೆ ಎಂದು ಹೇಳಿದರು. ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ; ಬೀದಿನಾಯಿ ವಿಚಾರ ಮುಂದಿನ ಸಭೆಯಲ್ಲಿ ಬರಬಾರದು, ಕೂಡಲೇ ವ್ಯವಸ್ಥೆ ಮಾಡಬೇಕು, ಸಭೆಯಲ್ಲಿ ಚರ್ಚಿಸಲು ಬೇರೆ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ, ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸದಸ್ಯ ರಮೇಶ್ ಮಾತನಾಡಿ; ನಾಯಿ ಹಿಡಿಯುವವರು ಇಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪಿರಿಯಾಪಟ್ಟಣ ಕಡೆಯಲ್ಲಿ ಇದ್ದಾರೆ. ಎಲ್ಲದಕ್ಕೂ ಕಾನೂನು ನೋಡಿಕೊಂಡು ಕುಳಿತರೆ ಆಗುವದಿಲ್ಲ. ಶೆಡ್ ಮಾಡಿ ಹಿಡಿಯುವವರನ್ನು ಕರೆಸಿ ವ್ಯವಸ್ಥೆ ಮಾಡಿ ಎಂದು ಸಲಹೆಯಿತ್ತರು.
ಅಭಿಯಂತರ ಹೇಮಕುಮಾರ್ ಮಾತನಾಡಿ; ನಾಯಿಗಳನ್ನು ಕೂಡಿ ಹಾಕುವ ಹಾಗಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ಒಂದು ನಾಯಿಯನ್ನು ಹಿಡಿದು ಚಿಕಿತ್ಸೆ ಮಾಡಲು ರೂ.೧೬೫೦ ನಿಗದಿಪಡಿಸಲಾಗಿದೆ. ಆದರೆ ಟೆಂಡರುದಾರರು ೨ಸಾವಿರಕ್ಕೂ ಅಧಿಕ ಮೊತ್ತಕ್ಕೆ ಹಾಕಿದ್ದರು. ಮೂರು ಬಾರಿ ಟೆಂಡರ್ ಕರೆದು ಕೊನೆಗೆ ೧೭೩೨ಕ್ಕೆ ಬಂದ ಟೆಂಡರ್ದಾರರೊAದಿಗೆ ಚರ್ಚಿಸಿ ರೂ.೧೬೫೦ಕ್ಕೆ ನಿಗದಿಪಡಿಸಲಾಗಿದೆ. ಇದರಲ್ಲಿ ಚಿಕಿತ್ಸೆ ಮಾಡಿ ನಾಲ್ಕು ದಿನಗಳ ಕಾಲ ಆರೈಕೆ ಮಾಡಿ ಬಿಡಲಾಗುವದು ಎಂದು ಮಾಹಿತಿ ನೀಡಿದರು.
ಅಮೀನ್ ಮಾತನಾಡಿ, ನಾಯಿಗಳನ್ನು ಕೂಡಿ ಹಾಕುವದು ಬೇಡ, ವಿಶಾಲವಾದ ಜಾಗವಿದೆ, ಎಲ್ಲಾ ನಾಯಿಗಳನ್ನು ಸ್ವಚ್ಛಂದವಾಗಿರಲು ಆಶ್ರಯತಾಣದಲ್ಲಿ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು. ಅಂತಿಮವಾಗಿ ಸದ್ಯ ಗುರುತಿಸಲಾಗಿರುವ ಸ್ಟೋನ್ ಹಿಲ್ ಬಳಿಯ ಕಸ ಸಂಗ್ರಹಣಾ ಜಾಗದ ಬಳಿಯಲ್ಲಿ ಶೆಡ್ ನಿರ್ಮಿಸಿ ನಾಯಿಗಳನ್ನು ಅಲ್ಲಿಗೆ ಸ್ಥಳಾಂತರಿಸುವAತೆ ತೀರ್ಮಾನಿಸಲಾಯಿತು.
ನಿವೇಶನ ವಿತರಣೆ
ಸದಸ್ಯ ಅಮೀನ್ ಮಾತನಾಡಿ; ಈ ಹಿಂದಿನ ಸಭೆಯಲ್ಲಿ ಚರ್ಚಿಸಿದಂತೆ ನಿವೇಶನರಹಿತರಿಗೆ ನಿವೇಶನ ಒದಗಿಸುವ ವಿಚಾರ ಏನಾಯ್ತು ಎಂದು ಪ್ರಶ್ನಿಸಿದರು. ಸರಕಾರಿ ಜಾಗವಿಲ್ಲದಿದ್ದರೂ ಖಾಸಗಿ ಜಾಗ ಖರೀದಿಸಿ ನಿವೇಶನ ಒದಗಿಸಲು ಸರಕಾರದ ನಿಯಮದಡಿ ಅವಕಾಶವಿದೆ ಎಂದು ಗಮನಕ್ಕೆ ತಂದರು.
ಈ ಸಂದರ್ಭ ಮಾತನಾಡಿದ ಮಾಜಿ ಅಧ್ಯಕ್ಷೆ, ಸದಸ್ಯೆ ಅನಿತಾ ಪೂವಯ್ಯ, ತಮ್ಮ ಅವಧಿಯಲ್ಲಿ ಜಾಗ ಗುರುತಿಸಿ ಪರಿಶಿಷ್ಟ ವಿಭಾಗದ ಅನುದಾನ ಬಳಸಿಕೊಂಡು ಜಾಗ ಖರೀದಿಸಿ ನಿವೇಶನ ಒದಗಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ ಸಂದರ್ಭ ಆ ಅನುದಾನ ಬಳಸುವಂತಿಲ್ಲವೆAದು ಜಿಲ್ಲಾಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿತು. ಸಮೀಪದ ಪಂಚಾಯ್ತಿಗಳಲ್ಲಿ ವಿಚಾರಿಸಿದ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಗೊಂಡಿತು ಎಂದು ಹೇಳಿದರು.
ಪೌರಾಯುಕ್ತ ರಮೇಶ್ ಮಾತನಾಡಿ; ನಗರಸಭೆ ವ್ಯಾಪ್ತಿಯ ಆಸು ಪಾಸಿನಲ್ಲಿ ಜಾಗ ಲಭ್ಯವಿದ್ದಲ್ಲಿ ಆ ಜಾಗದ ಸರಕಾರಿ ಮೌಲ್ಯಕ್ಕೆ ನಾಲ್ಕು ಪಟ್ಟು ಹಣ ನೀಡಿ ಖರೀದಿ ಮಾಡಿ ನಿವೇಶನ ಒದಗಿಸಲು ಅವಕಾಶವಿದೆ ಎಂದು ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲಿಯೂ ಜಾಗ ಸಿಗುತ್ತಿಲ್ಲ ಎಂದು ಮಾಹಿತಿ ನೀಡಿದರು. ಅಮೀನ್ ಮಾತನಾಡಿ; ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿ ನಿವೇಶನ ಖರೀದಿಗೆ ಮುಂದಾಗಿ, ನಮ್ಮ ಅವಧಿಯಲ್ಲಿ ಕನಿಷ್ಟ ಬಡವರಿಗೆ ನಿವೇಶನ ಒದಗಿಸುವ ವ್ಯವಸ್ಥೆಗೆ ಅಡಿಪಾಯ ಹಾಕೋಣವೆಂದು ಸಲಹೆ ಮಾಡಿದರು.