ಮಡಿಕೇರಿ, ಮಾ. ೨೬: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗವು ಬಹುಭಾಷೆ ಮತ್ತು ಬಹುಸಂಸ್ಕೃತಿ ಒಳಗೊಂಡಿರುವ ಪ್ರದೇಶವಾಗಿದೆ. ಆ ದಿಸೆಯಲ್ಲಿ ನಾಡಿನ ಭಾಷೆ ಜೊತೆಗೆ ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಇವರ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಬಹುಭಾಷೆ ಮತ್ತು ಬಹುಸಂಸ್ಕೃತಿ ಇರುವುದನ್ನು ಕಾಣಬಹುದಾಗಿದೆ. ನಾಡಿನ ಭಾಷೆಯ ಜೊತೆಗೆ ಹಲವು ಸ್ಥಳೀಯ ಭಾಷೆಗಳಿವೆ.
ಬಹುದೊಡ್ಡ ಭಾಷೆಯಾದ ಕನ್ನಡ ಭಾಷೆಯ ಜೊತೆಗೆ ಸಣ್ಣ ಸಣ್ಣ ಸ್ಥಳೀಯ ಭಾಷೆಗಳನ್ನು ಸಹ ಉಳಿಸಬೇಕು. ಅರೆಭಾಷೆಗೆ ತನ್ನದೇ ಆದ ವೈವಿಧ್ಯಮಯ ಭಾಷಾ ಶ್ರೀಮಂತಿಕೆ ಇದ್ದು, ಅದನ್ನು ಉಳಿಸುವಂತಾಗಬೇಕು ಎಂದು ಕರೆ ನೀಡಿದರು.
ಅರೆಭಾಷೆ ಬಗ್ಗೆ ಅಭಿಮಾನ ಇರಬೇಕು. ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಜಾನಪದ ಇವುಗಳ ಅಧ್ಯಯನ, ಸಂಶೋಧನೆ ಇನ್ನಷ್ಟು ಹೆಚ್ಚು ನಡೆದು ಅರೆಭಾಷೆಯನ್ನು ಮತ್ತಷ್ಟು ಮುಂಚೂಣಿಗೆ ತರುವಂತಾಗಬೇಕು ಎಂದು ಅವರು ಸಲಹೆ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಅರೆಭಾಷೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಂಬAಧ ‘ಅರೆಭಾಷೆ ಸಂಘ’ಗಳನ್ನು ರಚಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸಹ ಕಾಲೇಜುಗಳಲ್ಲಿ ಅರೆಭಾಷೆ ಸಂಘಗಳ ರಚನೆಗೆ ಸಹಕರಿಸುವಂತೆ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಯವರನ್ನು ಮನವಿ ಮಾಡಿದರು.
ಸುಳ್ಯ ತಾಲೂಕಿನಲ್ಲಿ ಪ್ರತಿಯೊಬ್ಬರೂ ಅರೆಭಾಷೆ ಮಾತನಾಡುತ್ತಿದ್ದು, ಜಾತಿ, ಧರ್ಮ ಮೀರಿ ಬೆಳೆದಿದೆ ಎಂದು ಅಧ್ಯಕ್ಷರು ನುಡಿದರು.
ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಸಮಾಜ ಸೇವಕರಾದ ಚಂಡೀರ ಕೆ. ಬಸಪ್ಪ ಮಾತನಾಡಿ, ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಜಾನಪದ ಕಲೆಗಳನ್ನು ಉಳಿಸಬೇಕು. ಅರೆಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನಿಸಬೇಕು ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೆ. ರಾಘವ ಬಿ. ಮಾತನಾಡಿ, ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರಗಳು ಉಳಿಯಬೇಕು. ಅರೆಭಾಷೆಯ ಉತ್ತಮ ಪುಸ್ತಕಗಳು ಇತರ ಭಾಷೆಗಳಿಗೆ ಅನುವಾದ ಆಗಬೇಕು. ಇದರಿಂದ ಭಾಷಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ನುಡಿದರು.
ಬರಹಗಾರರಾದ ಸುಶೀಲಾ ಕುಶಾಲಪ್ಪ ಅಂಬೆಕಲ್ಲು ಮಾತನಾಡಿ, ಅರೆಭಾಷೆ ಮಾತನಾಡುವ ನೆಲ, ಸಂಸ್ಕೃತಿ ಮತ್ತು ಗುರುತನ್ನು ಕಾಪಾಡಿಕೊಂಡು ಹೋಗಬೇಕು. ಭಾಷೆಯು ಕೇವಲ ಮಾತನಾಡಲು ಇರುವ ಒಂದು ಸಾಧನ ಮಾತ್ರವಲ್ಲ, ಇದು ಒಂದು ರೀತಿ ಜೀವನ ಪರಂಪರಾ ಶೈಲಿ ಇದ್ದಂತೆ ಎಂದರು.
ಮೈಸೂರು ಯುವರಾಜ ಕಾಲೇಜು ಮತ್ತು ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಚೆರಿಯಮನೆ ಬೆಳ್ಯಪ್ಪ ರಾಮಚಂದ್ರ ಅವರು ಅರೆಭಾಷಿಕರ ಹಬ್ಬ ಮತ್ತು ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿ, ಅರೆಭಾಷಿಕರಲ್ಲಿ ಹರಿಸೇವೆಯು ಮೂಲ ಸಂಸ್ಕೃತಿಯ ಹಬ್ಬವಾಗಿದೆ ಎಂದರು.
ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಲಾವಣ್ಯ ಸಿ.ಪಿ. ಅರೆಭಾಷೆ ನೆಲೆ ಮತ್ತು ಅದರ ಬೆಳವಣಿಗೆ ಸಾಧ್ಯತೆ ಕುರಿತು ಮಾತನಾಡಿ, ಅರೆಭಾಷೆ ಪದ್ಧತಿ, ಜಂಬರ, ಸೋಬಾನೆ ಪದ್ಯ, ಜಾನಪದ ಹಾಡು ಹೀಗೆ ಆಚಾರ-ವಿಚಾರಗಳು, ಆರಾಧನೆ, ನಂಬಿಕೆಗಳು ಅರೆಭಾಷೆಗೆ ಒಂದು ರೀತಿ ಬೆನ್ನೆಲುಬು ಇದ್ದಂತೆ ಎಂದರು.
ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಗೋಪಾಲ್ ಪೆರಾಜೆ ಮಾತನಾಡಿ, ಅರೆಭಾಷೆಯ ಐತಿಹಾಸಿಕ ಹಿನ್ನೆಲೆ, ಭಾಷೆ ಉಳಿಸಿ ಬೆಳೆಸುವಲ್ಲಿ ಪದಗಳ ರಚನೆ, ಸಂರಕ್ಷಣೆ, ಜೊತೆಗೆ ಅರೆಭಾಷೆ ಮಾತನಾಡುವ ಎಲ್ಲಾ ಜನರನ್ನು ಒಟ್ಟುಗೂಡಿಸಿ, ಭಾಷೆ ಅಭಿವೃದ್ಧಿಗೆ ಅಕಾಡೆಮಿ ಶ್ರಮಿಸುತ್ತಿದೆ ಎಂದರು. ಪದಕಟ್ಟು ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಸಂಜೀವ ಕುದ್ಪಾಜೆ, ಸಾಹಿತಿ ಹಾಗೂ ಕವಯತ್ರಿ ಲೀಲಾವತಿ ದಾಮೋದರ ಕುಂದಲ್ಪಾಡಿ ಪಾಲ್ಗೊಂಡಿದ್ದರು.
ಅಕಾಡೆಮಿ ಸದಸ್ಯರಾದ ಸೂದನ ಎಸ್. ಈರಪ್ಪ, ಲತಾ ಪ್ರಸಾದ್ ಕುದ್ಪಾಜೆ, ಕುದ್ಪಾಜೆ ಕೆ. ಪ್ರಕಾಶ್, ವಿನೋದ್ ಮೂಡಗದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ರಿಜಿಸ್ಟಾçರ್ ಚಿನ್ನಸ್ವಾಮಿ ಇತರರು ಇದ್ದರು. ಅಕಾಡೆಮಿ ಸದಸ್ಯರಾದ ಪೂಳಕಂಡ ಸಂದೀಪ್ ಸ್ವಾಗತಿಸಿದರು. ವರ್ಷ ಕೋಡಿಮನೆ ನಿರೂಪಿಸಿದರು. ಸಪ್ನ, ಚೊಂದಮ್ಮ, ಲಿಖಿತಾ ನಾಡಗೀತೆ ಹಾಡಿದರು, ಪೊನ್ನಚ್ಚನ ಮೋಹನ್ ವಂದಿಸಿದರು.