ಸೋಮವಾರಪೇಟೆ, ಮಾ. ೨೫: ಇಲ್ಲಿನ ಲಯನ್ಸ್ ಸಂಸ್ಥೆಗೆ ಲಯನ್ಸ್ ವಲಯಾಧ್ಯಕ್ಷ ನಟರಾಜ್ ಕೆಸ್ತೂರ್ ಅವರು ಅಧಿಕೃತ ಭೇಟಿ ನೀಡಿ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಬೆಂಗಳೂರಿನ ಯಲಹಂಕ ಲಯನ್ಸ್ ಸಂಸ್ಥೆಯ ಸದಸ್ಯರ ತಂಡ ಜೊತೆಗೂಡಿದ್ದು, ಈ ಹಿಂದೆ ಸೋಮವಾರಪೇಟೆ ಹಾಗೂ ಯಲಹಂಕ ಲಯನ್ಸ್ ಕ್ಲಬ್‌ನಿಂದ ಜಂಟಿಯಾಗಿ ನಿರ್ಮಿಸಲಾದ ಗರಗಂದೂರಿನ ಚಿತಾಗಾರಕ್ಕೆ ಭೇಟಿ ನೀಡಿ, ಗಿಡಗಂಟಿಗಳನ್ನು ತೆರವುಗೊಳಿಸಿ ನೆರಳಿನ ಗಿಡಗಳನ್ನು ನೆಡಲಾಯಿತು.

ನಂತರ ಸ್ಥಳೀಯ ೧೦೦ ಮಂದಿ ಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಆಹಾರ ವಿತರಿಸಲಾಯಿತು. ಇದರೊಂದಿಗೆ ಉಚಿತವಾಗಿ ಬಿ.ಪಿ,. ಶುಗರ್ ಪರೀಕ್ಷೆ ನಡೆಸಲಾಯಿತು. ಸಂಜೆ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಲಯಾಧ್ಯಕ್ಷ ನಟರಾಜ್ ಕೆಸ್ತೂರ್, ಲಯನ್ಸ್ ಸದಸ್ಯರು ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕು. ಸಮಾಜ ಸೇವೆಯಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಸಾರ್ಥಕ ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಬಟ್ಟೆ ಹೊಲಿಗೆ ತರಬೇತಿ ಪಡೆದಿರುವ ಮೂರು ಮಂದಿ ಬಡ ಮಹಿಳೆಯರಿಗೆ ಎರಡೂ ಸಂಸ್ಥೆಗಳ ಮೂಲಕ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ ಲಯನ್ಸ್ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸೋಮವಾರಪೇಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ರಾಮಶೆಟ್ಟಿ ವಹಿಸಿದ್ದರು. ಕಾರ್ಯದರ್ಶಿ ಮಂಜುನಾಥ್ ಚೌಟ, ಖಜಾಂಚಿ ಕೆ.ಎನ್. ತೇಜಸ್ವಿ ಸೇರಿದಂತೆ ಸದಸ್ಯರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.