ಸಿದ್ದಾಪುರ, ಮಾ. ೨೫: ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಾಲ್ಕು ದಿನಗಳ ಕಾಲ ನಡೆಯಿತು.

ಗಣಪತಿ ಹೋಮ, ರಂಗ ಪೂಜೆ, ಸಾಮೂಹಿಕ ಆಶ್ಲೇಷ ಬಲಿ ಪೂಜೆ, ಪೋದಮ್ಮ ದೇವಾಲಯದಲ್ಲಿ ವಸಂತ ಪೂಜೆ, ಅವಭೃತ ಸ್ನಾನ ನಡೆಯಿತು. ಬಳಿಕ ರಾತ್ರಿ ಶ್ರೀ ಸತ್ಯನಾರಾಯಣ ದೇವಾಲಯದ ಆವರಣದ ಒಳಗೆ ದೇವರ ಆರಾಟ್ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ತೀರ್ಥಪ್ರಸಾದ ನಡೆಯಿತು. ನಾಲ್ಕು ದಿನಗಳ ಕಾಲ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಾರ್ಷಿಕೋತ್ಸವದ ಕೊನೆಯ ದಿನದಂದು ರಾತ್ರಿ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನ ನಡೆಯಿತು.

ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸತ್ಯನಾರಾಯಣ ದೇವಾಲಯದ ಆಡಳಿತ ಮಂಡಳಿಯವರು ಮತ್ತು ಸದಸ್ಯರುಗಳು ಹಾಜರಿದ್ದರು.