ಮಡಿಕೇರಿ ಮಾ. ೨೫: ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವಂತಾಗಬೇಕು ಎಂದು ಕೊಡಗು ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷರಾದ ಟಿ.ಕೆ ಪಾಂಡರAಗ ಅವರು ಸಲಹೆ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಜಾಗತೀಕರಣ ಯುಗದಲ್ಲಿಯೂ ಸಹ ಕೈಮಗ್ಗ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಕೈಮಗ್ಗ ಉತ್ಪನ್ನಗಳನ್ನು ಉಳಿಸಿ ಬೆಳೆಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕೈಜೋಡಿಸಬೇಕು ಎಂದು ಅವರು ಕೋರಿದರು.

ಸರ್ಕಾರಿ ಆಸ್ಪತ್ರೆಗಳು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಸರ್ಕಾರದ ಅಂಗ ಸಂಸ್ಥೆಗಳಿಗೆ ಬೆಡ್‌ಶೀಟ್, ಟವಲ್, ಮ್ಯಾಟ್ ಮತ್ತಿತರ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿದಲ್ಲಿ ಕೈಮಗ್ಗ ಉತ್ಪನ್ನಗಳಿಗೆ ಬೇಡಿಕೆ ಬರಲಿದೆ. ಇದರಿಂದ ಸ್ಥಳೀಯವಾಗಿ ಸ್ವ-ಉದ್ಯೋಗ ದೊರೆಯಲಿದೆ ಎಂದು ಅವರು ಸಲಹೆ ಮಾಡಿದರು.

ಕೊಡಗು ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯದರ್ಶಿ ನಾಗರಾಜ ಶೆಟ್ಟಿ ಅವರು ಮಾತನಾಡಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ವೃತ್ತ, ಮತ್ತಿತರ ಕಡೆಗಳಲ್ಲಿ ದೇವರ ದಾಸಿಮಯ್ಯ ಅವರ ಹೆಸರು ಇಡುವಂತಾಗಬೇಕು. ಜೊತೆಗೆ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಕೋರಿದರು. ದೇವರ ದಾಸಿಮಯ್ಯ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೂ ತಿಳಿಸುವಂತಾಗಲು ಈ ಕಾರ್ಯಗಳು ಆಗಬೇಕು ಎಂದು ನಾಗರಾಜಶೆಟ್ಟಿ ಅವರು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್ ಲೋಕೇಶ್ ಸಾಗರ್ ಅವರು ಮಾತನಾಡಿ, ದೇವರ ದಾಸಿಮಯ್ಯ ಅವರು ೧೭೬ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು. ರಾಷ್ಟçಕವಿ ಗೋವಿಂದ ಪೈ ಅವರು ದೇವರ ದಾಸಿಮಯ್ಯ ಬಗ್ಗೆ ಸಂಶೋಧನಾ ಕೃತಿಗಳನ್ನು ಅಧ್ಯಯನ ಮಾಡಿ ವಿವರಿಸಿದ್ದಾರೆ ಎಂದು ಹೇಳಿದರು.

ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಿ.ನಾಗೇಶ್ ಕುಮಾರ್ ಅವರು ಮಾತನಾಡಿ, ೧೦, ೧೧ನೇ ಶತಮಾನದಲ್ಲಿಯೇ ದೇವರ ದಾಸಿಮಯ್ಯ ಅವರು ಕೈಮಗ್ಗ ಚಟುವಟಿಕೆಯಲ್ಲಿ ಕಾಯಕ ಕಾಣುವ ಮೂಲಕ ಮಾನವನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ದೇವರ ದಾಸಿಮಯ್ಯ ಅವರು ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆ ನಿಟ್ಟಿನಲ್ಲಿ ನೇಕಾರ ವೃತ್ತಿಯನ್ನು ಗೌರವಿಸಬೇಕು ಎಂದು ಹೇಳಿದರು. ನೇಕಾರಿಕೆ ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಅವರು ಮಾತನಾಡಿ, ದೇವರ ದಾಸಿಮಯ್ಯ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಮರೆಯಬಾರದು ಎಂದು ತಿಳಿಸಿದರು.

ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ್ ದೇವರಾಜು, ಪ್ರಮುಖರಾದ ಚೌಡೇಶ್ವರಿ ದೇವಾಲಯದ ಸಮಿತಿ ಅಧ್ಯಕ್ಷರಾದ ಗಜಾನನ, ಪದ್ಮ ಮೋಹನ್, ಭಾರತಿ ರಮೇಶ್, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ ಡಿ.ವಿ ಜಗದೀಶ, ರಮೇಶ್, ಇತರರು ಇದ್ದರು.

ಲೋಕೇಶ್ ಸಾಗರ್ ಮತ್ತು ಭಾರತಿ ರಮೇಶ್ ತಂಡದವರು ನಾಡಗೀತೆ ಹಾಗೂ ನೇಕಾರಿಕೆ ಗೀತೆ ಹಾಡಿ ಗಮನ ಸೆಳೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.