ಗಣಪತಿ - ಮುತ್ತಪ್ಪ ವಾರ್ಷಿಕೋತ್ಸವ
ಸಿದ್ದಾಪುರ: ಮಾಲ್ದಾರೆಯ ಶ್ರೀ ಐಶ್ವರ್ಯ ಗಣಪತಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ತೆರೆ ಮಹೋತ್ಸವ ಎರಡು ದಿನಗಳ ಕಾಲ ಸಂಭ್ರಮದಿAದ ನಡೆಯಿತು.
ದೇವಾಲಯದಲ್ಲಿ ಮುತ್ತಪ್ಪನ ವೆಳ್ಳಾಟಂ, ಗುಳಿಗ, ಕುಟ್ಟಿಚಾತನ್, ಕಂಡ ಕರ್ಣನ್ ವೆಳ್ಳಾಟಂ ಮತ್ತು ಕೋಳಿಗೆ ಪಾಟ್ ನಡೆಯಿತು. ವಸೂರಿಮಾಲೆ ಹಾಗೂ ವಿಷ್ಣುಮೂರ್ತಿ, ಮುತ್ತಪ್ಪ - ತಿರುವಪ್ಪ, ಗುಳಿಗ, ಭಗವತಿ, ವಿಷ್ಣುಮೂರ್ತಿ, ಕಂಡ ಕರ್ಣ ದೈವಗಳ ತೆರೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು.
ತೆರೆ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಎರಡು ದಿನಗಳ ಕಾಲ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.ಕೆದಕಲ್ ವಿಷ್ಣುಮೂರ್ತಿ ಕಟ್ಟಿತೆರೆ
ಸುಂಟಿಕೊಪ್ಪ: ಕೆದಕಲ್ ಭದ್ರಕಾಳೇಶ್ವರಿ ದೇವಾಲಯದ ವತಿಯಿಂದ ವಿಷ್ಣುಮೂರ್ತಿ ದೇವರ ಕಟ್ಟಿತೆರೆ ಹಾಗೂ ಕೋಲಗಳು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನಡೆದವು.
ತೆರೆಯ ಅಂಗವಾಗಿ ಭದ್ರಕಾಳೇಶ್ವರಿ, ಈಶ್ವರ, ವಿಷ್ಣುಮೂರ್ತಿ ಹಾಗೂ ಅಜ್ಜಪ್ಪ ದೇವರ ಕೋಲ ಮತ್ತು ದರ್ಶನಗಳು ನಡೆದವು. ಇದೇ ವೇಳೆ ವಿಷ್ಣುಮೂರ್ತಿಯ ಕಟ್ಟಿತೆರೆ ನಡೆದಿದ್ದು, ಈ ತೆರೆಯಲ್ಲಿ ಪರಿವಾರ ದೇವರುಗಳು ತಮ್ಮ ಶಕ್ತಿಯ ನಂಬಿಕೆಯನ್ನು ತೋರಿಸಿ ಭಕ್ತರಲ್ಲಿ ಶ್ರದ್ಧೆ, ಭಯಭಕ್ತಿಯನ್ನು ಉಂಟು ಮಾಡಿದವು.
ದೇವರ ದರ್ಶನದ ವೇಳೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತಸಮೂಹ ತಮ್ಮ ಕಷ್ಟ ಕಾರ್ಪಣ್ಯವನ್ನು ಪರಿಹರಿಸುವಂತೆ ದೈವಗಳಲ್ಲಿ ಬೇಡಿಕೊಂಡರು. ವಿಷ್ಣುಮೂರ್ತಿ ದೇವರಿಗೆ ತೆರೆಕಟ್ಟುವ ಮೊದಲು ತೆರೆಯನ್ನು ಕೆದಕಲ್ ಮುಖ್ಯ ರಸ್ತೆಯಲ್ಲಿ ಕೇರಳದ ಚಂಡೆ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ಮಹಾಮಂಗಳಾರತಿ, ಭಂಡಾರ ಹಾಕುವುದು, ದೇವರ ಹರಕೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಕೆದಕಲ್, ಬಾಳೆಕಾಡು, ಸುಂಟಿಕೊಪ್ಪ, ಹಾಲೇರಿ, ಬೋಯಿಕೇರಿ, ಮಡಿಕೇರಿ, ಕಾಂಡನಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.ಕಿರಗಂದೂರಿನಲ್ಲಿ ಕರಗ ಪೂಜೆ
ಐಗೂರು: ಕಿರುಗಂದೂರಿನ ಕರಿಮಾರಿಯಮ್ಮ ದೇವಾಲಯದ ವಾರ್ಷಿಕ ಪೂಜೆ ದುರ್ಗಾ ನಗರದ ನಿವಾಸಿಗಳ ವತಿಯಿಂದ ಎರಡು ದಿನಗಳ ಕಾಲ ಭಕ್ತಿಪೂರ್ವಕವಾಗಿ ನೆರವೇರಿತು.
ವನದುರ್ಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾರ್ಷಿಕ ಪೂಜೆಗೆ ಚಾಲನೆ ನೀಡಲಾಯಿತು. ಚೋರನ ಹೊಳೆಯ ಬದಿಯಲ್ಲಿ ಪೂಜಾರಿ ನರಸಿಂಹ ಅವರ ನೇತೃತ್ವದಲ್ಲಿ ಕರಗಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಕರಗ ವ್ರತಾಧಾರಿಗಳಾದ ಗೌತಮ್ ಮತ್ತು ಸಂಜಯ್ ಕರಗ ಹೊತ್ತು ಮುಂದೆ ಸಾಗಿದ ಮೆರವಣಿಗೆಯಲ್ಲಿ ವಾದ್ಯಗೋಷ್ಠಿ, ಸಿಡಿಮದ್ದಿನ ಪ್ರದರ್ಶನ, ಘೋಷಣೆಗಳೊಂದಿಗೆ ಮೆರವಣಿಗೆ ಕರಿಮಾರಿಯಮ್ಮ ದೇವಾಲಯವನ್ನು ತಲುಪಿ ಕರಗ ಪ್ರತಿಷ್ಠಾಪನೆ ನಡೆಯಿತು. ದ್ವಿತೀಯ ಪೂಜೆಯಲ್ಲಿ ಪೂಜಾರಿ ನರಸಿಂಹ ಕರಿಮಾರಿಯಮ್ಮ ದೇವಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಚಿಕ್ಕಮಗಳೂರಿನ ವೈ. ಶೇಷಪ್ಪ ಮತ್ತು ಪುತ್ರ ಶ್ರೇಯಸ್ ಇವರು ದೇವಿಗೆ ಲೋಹದ ಕೊಡೆಯನ್ನು ಸಮರ್ಪಿಸಿದರು. ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ನಂತರ ಮೆರವಣಿಗೆಯೊಂದಿಗೆ ಚೋರನ ಹೊಳೆಯಲ್ಲಿ ಕರಗ ವಿಸರ್ಜನೆಯೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.