ಕಣಿವೆ, ಮಾ. ೨೨: ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಖಜಾನೆಯನ್ನು ಬರಿದು ಮಾಡುತ್ತಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಆರೋಪಿಸಿದರು.

ನಂಜರಾಯಪಟ್ಟಣದ ಮಹಿಳಾ ಸಮಾಜದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಾಸಕರಿಗೆ ವಾರ್ಷಿಕವಾಗಿ ೨೫೦ ರಿಂದ ೩೦೦ ಕೋಟಿ ರೂಪಾಯಿಗಳನ್ನು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿತ್ತು.

ಆದರೆ, ಪುಕ್ಕಟೆ ಯೋಜನೆಗಳ ಆಸೆ ತೋರಿಸಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಪ್ರತಿ ಜನರ ಮೇಲೆ ಲಕ್ಷಾಂತರ ರೂಪಾಯಿಗಳ ಸಾಲದ ಹೊರೆ ಹೊರಿಸಿದೆ. ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳಾಗುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರುಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ ಸಿಎಂ ಕುರ್ಚಿ ಕಾಳಗದಿಂದ ಹಳಿ ತಪ್ಪಿರುವ ಸರ್ಕಾರದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂದರು.

ಮಡಿಕೇರಿ ಕ್ಷೇತ್ರದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾತಿಯಾದ ಕಾಮಗಾರಿಗಳು ನಡೆಯುತ್ತಿವೆಯೇ ಹೊರತು ಹೊಸದಾದ ಯಾವುದೇ ಅಭಿವೃದ್ಧಿ ಯೋಜನೆಗಳು ಕಳೆದ ಮೂರು ವರ್ಷಗಳ ಆಡಳಿತದಲ್ಲಿ ಜಾರಿಯಾಗಿಲ್ಲ ಎಂದು ಅಪ್ಪಚ್ಚು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಬೇಕು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳ ಕುರಿತು ಮತದಾರರ ಮನೆ ಬಾಗಿಲಿಗೆ ತೆರಳಿ ಸಂಪೂರ್ಣ ಮಾಹಿತಿ ನೀಡುವ ಮೂಲಕ ಯೋಜನೆಗಳ ಪರಿಣಾಮಕಾರಿ ಬಳಕೆಗೆ ಅರಿವು ಮೂಡಿಸಬೇಕು ಎಂದು ಕರೆಕೊಟ್ಟರು

ಬಿಜೆಪಿ ಶಕ್ತಿ ಕೇಂದ್ರದ ತಾಲೂಕು ಅಧ್ಯಕ್ಷ ಗೌತಮ್ ಮಾತನಾಡಿ, ಅಭಿವೃದ್ಧಿ ವಂಚಿತ ಕಾಂಗ್ರೆಸ್ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡದ ಕಾಂಗ್ರೆಸ್ ಸರ್ಕಾರ, ಕರ್ನಾಟಕ ಲೋಕ ಸೇವಾ ಆಯೋಗವನ್ನು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿಸಿ ವ್ಯಾಪಕ ಭ್ರಷ್ಟಾಚಾರದೊಂದಿಗೆ ಲಕ್ಷಾಂತರ ಪದವೀಧರರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಪಾದಿಸಿದರು.

ನಂಜರಾಯಪಟ್ಟಣ ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ತಾ.ಪಂ. ಮಾಜಿ ಸದಸ್ಯ ವಿಜು ಅವರನ್ನು ಆಯ್ಕೆ ಮಾಡಲಾಯಿತು. ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಆರ್.ಕೆ. ಚಂದ್ರು, ಗ್ರಾ.ಪಂ. ಮಾಜಿ ಸದಸ್ಯ ಮಾವಾಜಿ ರವಿ, ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ನವೀನ್ ಇದ್ದರು.