ಅನಿಲ್ ಹೆಚ್.ಟಿ.

ಮಡಿಕೇರಿ, ಮಾ. ೨೨: ಎಲ್ಲಿಯೋ ನಡೆಯುತ್ತಿರುವ ಯುದ್ದ.. ಎಲ್ಲೆಲ್ಲಿಯೂ ಸಮಸ್ಯೆ. ಸಪ್ತಸಾಗರದಾಚೆ ನಡೆಯುತ್ತಿರುವ ಸಮರದಿಂದ ಇಲ್ಲಿ ಸಮಸ್ಯೆಯಾಗದು ಎಂದು ನಂಬಿಕೊAಡಿದ್ದವರಿಗೆ ಅದನ್ನು ಸುಳ್ಳು ಮಾಡುವಂತೆ ಅಡುಗೆ ಅನಿಲದ ತೀವ್ರ ಕೊರತೆ ಇದೀಗ ಸಂಕಷ್ಟ ತಂದೊಡ್ಡುತ್ತಿದೆ. ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿಗೂ ಅರಬ್ ದೇಶಗಳ ಯುದ್ದದ ಬಿಸಿ ತಟ್ಟಿದ್ದು, ಪ್ರವಾಸೋದ್ಯಮಿಗಳು ಕಂಗಾಲಾಗುವAತಾಗಿದೆ.

ಕೊಡಗು ಜಿಲ್ಲೆಯ ಬಹುತೇಕ ಪುಟ್ಟ ಕ್ಯಾಂಟೀನ್, ರೆಸ್ಟೋರೆಂಟ್, ರೆಸಾರ್ಟ್ಗಳಲ್ಲಿ ಅಡುಗೆ ಅನಿಲ ಖಾಲಿಯಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿನ ಗ್ಯಾಸ್ ಸಿಲಿಂಡರ್ ದೊರಕದೇ ಇರುವ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಹೋಟೇಲ್‌ಗಳು ಸೌದೆ ಬಳಸಿದ ಒಲೆಯಲ್ಲಿ ಅಡುಗೆ ಮಾಡಲು ಮುಂದಾಗಿವೆ. ತೋಟದಲ್ಲಿನ ಸೌದೆಗೆ ಸಹಜವಾಗಿಯೇ ಬೇಡಿಕೆ ದುಪ್ಪಟ್ಟಾಗಿದ್ದು ದುಬಾರಿ ಬೆಲೆ ತೆತ್ತು ಸೌದೆ ತರಲು ರೆಸ್ಟೋರೆಂಟ್ ಮಾಲೀಕರು ಮುಂದಾಗಿದ್ದಾರೆ.

ದೋಸೆ ಮಾಡಿದರೆ ಗ್ಯಾಸ್ ಬಳಕೆ ಹೆಚ್ಚುತ್ತದೆ ಎಂದು ಅನೇಕ ಹೊಟೇಲ್‌ಗಳಲ್ಲಿ ದೋಸೆ ಮಾಡುತ್ತಿಲ್ಲ. ಜತೆಗೇ, ಗ್ಯಾಸ್ ಅತೀಯಾಗಿ ಬಳಸುವ ನಾರ್ಥ್ ಇಂಡಿಯನ್ ಖಾದ್ಯಗಳ ತಯಾರಿಕೆಯೂ ಸ್ಥಗಿತಗೊಂಡಿದೆ. ದಕ್ಷಿಣ ಭಾರತದ ತಿನಿಸಿನ ಪೈಕಿ ಇಡ್ಲಿ, ಉಪ್ಪಿಟ್ಟು ಲಭಿಸುತ್ತಿದ್ದರೆ ವಡೆ, ಪೂರಿಗೆ ಹೊಟೇಲ್‌ಗಳು ತಾತ್ಕಾಲಿಕವಾಗಿ ಗುಡ್ ಬೈ ಹೇಳಿವೆ.

ಕೊಡಗಿನಲ್ಲಿ ಬಹುತೇಕ ಹೋಟೇಲ್‌ಗಳು ಉತ್ತರ ಭಾರತೀಯರನ್ನೇ ಪಾಕಶಾಲೆಯಲ್ಲಿ ಕೆಲಸಕ್ಕಾಗಿ ನಿಯೋಜಿಸಿದ್ದವು. ಆದರೆ ಈಗ ಸೌದೆ ಬಳಸಿ ಅಡುಗೆ ಮಾಡಲು ತಯಾರಿಲ್ಲದ ಉತ್ತರ ಭಾರತೀಯರು ನಮ್ಮ ಕೈಯಲ್ಲಿ ಇದು ಸಾಧ್ಯವಿಲ್ಲ ಎಂದು ಕೆಲಸವನ್ನೇ ಬಿಟ್ಟು ತೆರಳಿರುವ ಅನೇಕ ಉದಾಹರಣೆಗಳಿವೆ.

ಗ್ಯಾಸ್ ಸಿಲಿಂಡರನ್ನೇ ಬಳಸಿ ಅಡುಗೆ ಮಾಡುವ ವ್ಯವಸ್ಥೆಗೆ ರೆಸ್ಟೋರೆಂಟ್ ಮಾಲೀಕರು, ಸಿಬ್ಬಂದಿಗಳು ಹತ್ತಾರು ವರ್ಷಗಳಿಂದ ಒಗ್ಗಿಹೋಗಿದ್ದ ಹಿನ್ನಲೆಯಲ್ಲಿ ಇದೀಗ ಸೌದೆ ಬಳಸಿ ಅಡುಗೆ ತಯಾರಿಕೆಗೆ ರೆಸ್ಟೋರೆಂಟ್‌ಗಳ ಅಡುಗೆ ಕೋಣೆಗಳಲ್ಲಿ ಸ್ಥಳದ ಕೊರತೆಯೂ ಕಾಡುತ್ತಿದೆ. ಸೌದೆ ಬಳಸಿ ಅಡುಗೆ ಮಾಡುವುದರಿಂದಾಗಿ ಹೊಗೆಯ ವಾಸನೆಯನ್ನೂ ಸಹಿಸಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ಯಾಸ್ ಬಳಸಿ ತಯಾರಿಸಿದ ಅಡುಗೆ ಮತ್ತು ಸೌದೆ ಬಳಸಿ ತಯಾರಿಸಿದ ಅಡುಗೆಗೆ ರುಚಿಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಸೌದೆ ಒಲೆ ಬಳಸಿ ಮಾಡಿದ ಖಾದ್ಯದಲ್ಲಿ ಸ್ವಾದಿಷ್ಟತೆ ದೊರಕುತ್ತಿಲ್ಲ ಎಂಬುದು ಗ್ರಾಹಕರ ದೂರಾಗಿದೆ.

ಮಡಿಕೇರಿ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿದ್ದ ಸಣ್ಣ ಪುಟ್ಟ ಕ್ಯಾಂಟೀನ್‌ಗಳು, ಮಿನಿ ರೆಸ್ಟೋರೆಂಟ್‌ಗಳು ಗ್ಯಾಸ್ ಸಿಲಿಂಡರ್ ದೊರಕದೇ ಬಾಗಿಲು ಮುಚ್ಚಿವೆ. ಸೌದೆ ಬಳಸಿ ಅಡುಗೆ ತಯಾರಿಕೆ ಸಣ್ಣ ಉದ್ಯಮಿಗಳ ಪಾಲಿಗೆ ಹೊರೆಯ ಬಾಬ್ತಾಗಿರುವ ಹಿನ್ನಲೆಯಲ್ಲಿ ಇದಕ್ಕಿಂತ ಸದ್ಯಕ್ಕೆ ವ್ಯಾಪಾರ ಸ್ಥಗಿತಗೊಳಿಸುವುದೇ ಲೇಸು ಎಂಬ ಭಾವನೆಯಿದೆ.

ಸಮಸ್ಯೆಯ ಪ್ರಾರಂಭ ಈಗ.. ಕೊನೆ ಸಧ್ಯಕ್ಕಿಲ್ಲ

ಇರಾನ್ ಮೇಲೆ ಮುಗಿಬಿದ್ದಿರುವ ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಸದ್ಯಕ್ಕೆ ಯುದ್ದ ನಿಲ್ಲಿಸುವ ಸೂಚನೆಯಿಲ್ಲ, ಎಲ್ಲಿಯವರೆಗೂ ಈ ಯುದ್ದ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಭಾರತಕ್ಕೆ ಗ್ಯಾಸ್ ಸಮಸ್ಯೆ ಕಾಡಲಿದೆ. ಇಷ್ಟಕ್ಕೂ ಶಿವಾಲಿಕ್ ಹಡಗಿನ ಮೂಲಕ ಸಾಕಷ್ಟು ಗ್ಯಾಸ್ ಭಾರತಕ್ಕೆ ಲಭಿಸಿದ್ದರೂ ಇದು ಕೂಡ ಭಾರತದ ಒಟ್ಟು ಬೇಡಿಕೆಗೆ ಸಾಕಾಗದು. ಹೀಗಾಗಿ ಯುದ್ಧ ನಿಂತರೂ ಭಾರತಕ್ಕೆ ಬೇಡಿಕೆಯಂತೆ ಗ್ಯಾಸ್ ರವಾನೆಯಾಗಿ ಅದು ದೇಶವ್ಯಾಪಿ ಪೂರೈಕೆಯಾಗಲು ಮತ್ತಷ್ಟು ದಿನಗಳು ಬೇಕೇ ಬೇಕು.

ಗ್ಯಾಸ್ ಸಿಲಿಂಡರ್‌ಗೆ ಬೇಡಿಕೆ ಇನ್ನೆರಡು - ಮೂರು ದಿನಗಳು ಇದೇ ರೀತಿ ಮುಂದುವರೆದದ್ದೇ ಆದಲ್ಲಿ ದೇಶವ್ಯಾಪಿ ಗ್ಯಾಸ್‌ಗಾಗಿ ಹಾಹಾಕಾರ ಪ್ರಾರಂಭವಾಗುವುದು ಖಂಡಿತಾ. ಕಾಳಸಂತೆ ಧಂದೆಕೋರರು ಇದರ ಲಾಭ ಪಡೆಯಲು ಮುಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ತಲ್ಲಣ ಉಂಟಾಗುವ ಎಲ್ಲಾ ಸಾಧ್ಯತೆಯಿದೆ.

ಗ್ಯಾಸ್ ಸಿಲಿಂಡರ್ ದೊರಕದೇ ಇರುವ ಹಿನ್ನಲೆಯಲ್ಲಿ ಸೀಮಿತ ಸಿಲಿಂಡರ್ ಬಳಸಿ ರೆಸ್ಟೋರೆಂಟ್‌ಗಳು ಅಡುಗೆ ತಯಾರಿಕೆ ಮಾಡಬೇಕಾದ ಹಿನ್ನಲೆಯಲ್ಲಿ ಕೆಲವು ಖಾದ್ಯಗಳಿಗೆ ಬೆಲೆ ಏರಿಕೆಯೂ ಆಗಿದೆ

ಕೊಡಗಿನ ಪ್ರವಾಸೋದ್ಯಮ ಸ್ಥಿತಿ

ಮಾರ್ಚ್ ಕೊನೇ ವಾರದಿಂದ ಜೂನ್ ಮೊದಲ ವಾರದವರೆಗೂ ಕೊಡಗಿನಲ್ಲಿ ಪ್ರವಾಸಿ ದಟ್ಟಣೆ ಇರುವ ಕಾಲ. ಈ ವರ್ಷ ಇನ್ನೇನು ಪ್ರವಾಸಿಗರು ಕೊಡಗಿಗೆ ಕಾಲಿಡಬೇಕು ಎನ್ನುವಷ್ಟರಲ್ಲಿಯೇ ಸಿಲಿಂಡರ್ ಸಮಸ್ಯೆ ಪ್ರವಾಸೋದ್ಯಮಿಗಳ ಪಾಲಿಗೆ ಗಂಭೀರ ಸಮಸ್ಯೆ ತಂದೊಡ್ಡಿದೆ. ಅನೇಕ ಪ್ರವಾಸಿಗರು ಕರೆ ಮಾಡಿ, ಸರಿಯಾಗಿ ಊಟ, ತಿಂಡಿ ದೊರಕುತ್ತಿದೆಯೇ? ನಮಗೆ ಬೇಕಾದ ತಿಂಡಿ ತಿನಿಸು ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಸೀಮಿತ ತಿಂಡಿ, ತಿನಿಸು ಮಾತ್ರ ದೊರಕುತ್ತಿದೆ ಎಂದು ತಿಳಿದೊಡನೇ ತಮ್ಮ ಕೊಡಗು ಪ್ರವಾಸವನ್ನೇ ಮುಂದಕ್ಕೆ ಹಾಕುತ್ತಿದ್ದಾರೆ. ಪ್ರವಾಸಿ ಸೀಸನ್ ಪ್ರಾರಂಭವಾಗುತ್ತಿರುವAತೆಯೇ ಪ್ರವಾಸಿಗರ ಕೊರತೆ ಸಾಧ್ಯತೆ ನಿಚ್ಚಳವಾಗಿರುವುದು ಪ್ರವಾಸೋದ್ಯಮಿಗಳ ಚಿಂತೆಗೆ ಕಾರಣವಾಗಿದೆ.

ಕಳೆದ ೬-೭ ತಿಂಗಳಿನಿAದ ಪ್ರವಾಸಿಗರು ನಿರೀಕ್ಷಿತ ಪ್ರಮಾಣದಲ್ಲಿ ಕೊಡಗಿಗೆ ಬಾರದೇ ಇರುವುದರಿಂದಾಗಿ, ಪ್ರವಾಸೋದ್ಯಮಕ್ಕೆ ಮಂಕು ಕವಿದಿತ್ತು, ಮಾರ್ಚ್- ಜೂನ್ ನಲ್ಲಿ ಈ ಕೊರತೆ ನೀಗಬಹುದು ಎಂಬ ಪ್ರವಾಸೋದ್ಯಮಿಗಳ ಭಾವನೆಗೆ ಈಗ ತಣ್ಣೀರು ಎರಚಿದಂತಾಗಿದೆ. ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಕಾಟೇಜ್‌ಗಳು ಮಾತ್ರವಲ್ಲದೇ ಬಾಡಿಗ ಕಾರ್, ಜೀಪ್, ವ್ಯಾನ್, ಬೈಕ್ ಹೀಗೆ ಪ್ರವಾಸೋದ್ಯಮ ಅವಲಂಭಿತರಿಗೂ ಗ್ಯಾಸ್ ಸಿಲಿಂಡರ್ ಪರೋಕ್ಷ ರೀತಿಯಲ್ಲಿ ಬಿಸಿ ಮುಟ್ಟಿಸಿದೆ.

ಹೋಂಸ್ಟೇಗಳ ಆಶಾಭಾವನೆ

ಈ ನಡುವೇ ಕೊಡಗಿನ ಹೋಂಸ್ಟೇಗಳಿಗೆ ಆಶಾಭಾವನೆ ಇದೆ. ಕಾಫಿ ತೋಟಗಳ ನಡುವಿನ ಹೋಂಸ್ಟೇಗಳಲ್ಲಿ ಯಥೇಚ್ಚ ಸೌದೆ ದೊರಕುವುದರಿಂದಾಗಿ ಮತ್ತು ತೋಟಗಳ ಹೋಂಸ್ಟೇಗಳು ಬಹುತೇಕ ಸೌದೆ ಬಳಸಿ ಅಡುಗೆ ಮಾಡುವುದರಿಂದಾಗಿ ಪ್ರವಾಸಿಗರಿಗೆ ಇಂಥ ಹೋಂಸ್ಟೇಗಳಿಗೆ ಆತಿಥ್ಯ ಸುಲಭಸಾದ್ಯವಾಗಿದೆ. ಹೀಗಾಗಿ ಕೊಡಗಿನ ಹೋಂಸ್ಟೇಗಳು ಈಗ ಈ ಸಂಕಷ್ಟದ ದಿನಗಳನ್ನೇ ತಮ್ಮ ಬೇಡಿಕೆಯಾಗಿ ಪರಿವರ್ತಿಸಲು ಸಕಾಲವಾಗಿದೆ.

ಭಾರತದಲ್ಲಿ ತೈಲ ಸಂಗ್ರಹಾಗಾರದ ಕೊರತೆ

ಇಷ್ಟಕ್ಕೂ ಬಾರತದಲ್ಲಿ ಯಾಕೆ ಇಷ್ಟೊಂದು ಸಮಸ್ಯೆಯಾಗುತ್ತಿದೆ ಎಂದು ಗಮನಿಸಿದರೆ ದೇಶದಲ್ಲಿ ನಿಗಧಿತ ರೀತಿಯಲ್ಲಿ ಅಡುಗೆ ಅನಿಲ ಸಂಗ್ರಹಾಗಾರಗಳೇ ಇಲ್ಲ. ವಿಶಾಖಪಟ್ಟಣ ಮತ್ತು ಮಂಗಳೂರಿನಲ್ಲಿ ಮಾತ್ರ ದೇಶದ ಎರಡೇ ಎರಡು ಅನಿಲ ಸಂಗ್ರಹಾಗಾರಗಳಿವೆ. ಇದು ವಿಪರ್ಯಾಸವಾದರೂ ವಾಸ್ತವ. ಗಮನಾರ್ಹ ಎಂದರೆ ವಿಶ್ವದಲ್ಲಿಯೇ ಅನಿಲವನ್ನು ಬಳಕೆ ಮಾಡುವ ದೇಶಗಳಲ್ಲಿಯೇ ಭಾರತ ಅತೀ ಹೆಚ್ಚು ಅನಿಲವನ್ನು ಬಳಕೆ ಮಾಡುವ ದೇಶವಾಗಿದೆ. ತನ್ನ ಜನರಿಗೆ ಭಾರತ ಸೂಕ್ತ ರೀತಿಯಲ್ಲಿ ಅಡುಗೆ ಅನಿಲ ಪೂರೈಸಲೇಬೇಕಾದ ಹೊಣೆಯನ್ನೂ ಹೊಂದಿದೆ. ಪಳೆಯಳಿಕೆಗಳಿಂದ ಉತ್ಪತ್ತಿಯಾದ ಇಂಧನ ದ್ರವ್ಯಗಳಲ್ಲಿ ಅನಿಲ ಕಡಮೆ ಬೆಲೆಯದ್ದು. ಆದರೆ ಇಂಥ ಅನಿಲವನ್ನೇ ದೀರ್ಘ ಕಾಲದವರೆಗೂ ಸಂಗ್ರಹಿಸಿಟ್ಟುಕೊಳ್ಳುವುದು ಬಹಳ ಮುಖ್ಯ ಎಂಬ ಸ್ಪಷ್ಟ ಅರಿವು ಈ ಯುದ್ದಕಾಲದಲ್ಲಿ ಭಾರತಕ್ಕೆ ಬಂದಿದೆ. ಭಾರತದಲ್ಲಿ ಸದ್ಯ ೨ ಬೃಹತ್ ಎಲ್ ಜಿ ಸಂಗ್ರಹಾಲಯಗಳಿವೆ. ಪ್ರತೀ ಎರಡು ದಿನಗಳಿಗೊಮ್ಮೆ ಈ ಸಂಗ್ರಹಾಗಾರವನ್ನು ಭರ್ತಿ ಮಾಡಬೇಕಾಗುತ್ತದೆ. ಭಾರತದಲ್ಲಿ ಅನಿಲದ ನಿತ್ಯ ಬಳಕೆ ಆ ಪ್ರಮಾಣದಲ್ಲಿದೆ. ವಿಶಾಖಪಟ್ಟಣ ಸಂಗ್ರಹಾಗಾರದಲ್ಲಿ ೬೦ ಸಾವಿರ ಟನ್ ಎಲ್‌ಪಿಜಿ ಸಂಗ್ರಹಿಸಬಹುದಾಗಿದ್ದರೆ, ಮಂಗಳೂರು ಸಂಗ್ರಹಾಗಾರದಲ್ಲಿ ೮೦ ಸಾವಿರ ಟನ್ ಎಲ್‌ಪಿಜಿ ಸಂಗ್ರಹಿಸಿಡಲು ಸಾಧ್ಯವಿದೆ. ಎರಡೂ ಸಂಗ್ರಹಾಗಾರಗಳು ೧.೪೦ ಲಕ್ಷ ಟನ್ ಎಲ್ ಪಿಜಿ ಸಂಗ್ರಹಿಸಿಡುತ್ತವೆ. ಭಾರತದಲ್ಲಿ ೧ ದಿನದ ಎಲ್‌ಪಿಜಿ ಅನಿಲ ಬಳಕೆಯೇ ೯೦ ಸಾವಿರ ಟನ್ ಆಗಿದೆ.

ಸಾಮಾನ್ಯವಾಗಿ ಗಲ್ಫ್ ದೇಶಗಳಿಂದ ಭಾರತಕ್ಕೆ ಮೊದಲಿನಿಂದಲೂ ಅಡುಗೆ ಅನಿಲ ಸಲೀಸಾಗಿ ಬರುತ್ತಿತ್ತು. ಕೇವಲ ೨-೩ ದಿನಗಳಲ್ಲಿಯೇ ಗಲ್ಪ್ ದೇಶಗಳಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ತೈಲ ಹೊತ್ತ ಹಡಗು ಭಾರತದ ತೈಲ ಸಂಗ್ರಹಾಗಾರಕ್ಕೆ ಬಂದು ಸೇರುತ್ತಿದ್ದವು. ಹೀಗಾಗಿ ಈವರೆಗೂ ಭಾರತಕ್ಕೆ ಅಡುಗೆ ಅನಿಲದ ಕೊರತೆ ಇಷ್ಟೊಂದು ತೀವ್ರವಾಗಿದ್ದೇ ಇಲ್ಲ. ಕಡಿಮೆ ಬೆಲೆಗೆ ಭಾರತಕ್ಕೆ ಅಡುಗೆ ಅನಿಲ ಸರಬರಾಜಾಗುತ್ತಿತ್ತು. ಹೀಗಾಗಿ ಅನಿಲವನ್ನು ಸಂಗ್ರಹಿಸಿಡುವ ಬಗ್ಗೆ, ನಿರ್ವಹಣೆ ಬಗ್ಗೆ ಭಾರತ ಈವರೆಗೂ ಗಂಭೀರವಾಗಿ ಯೋಚಿಸಿಯೇ ಇರಲಿಲ್ಲ. ಸಂಗ್ರಹಾಗಾರ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗುವುದರಿಂದಾಗಿಯೂ ಆರ್ಥಿಕ ಹೊರೆಗೆ ಭಾರತ ಮುಂದಾಗಲೂ ಇಲ್ಲ. ಇಂಥದ್ದೊAದು ಸಂಕಷ್ಟ ಎದುರಾದೀತು ಎಂದು ಭಾರತವೂ ಯೋಚಿಸಿಯೇ ಇರಲಿಲ್ಲ. ಆದರೆ ಈಗ ಸಂಕಷ್ಟ ಎದುರಾಗಿರುವ ಹಿನ್ನಲೆಯಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು ಎಂಬAತೆ ಭಾರತವೂ ಎಚ್ಚತ್ತುಕೊಂಡಿದೆ. ಭವಿಷ್ಯದಲ್ಲಿ ಇಂಥ ಸಂಕಷ್ಟ ಪರಿಸ್ಥಿತಿ ಮರುಕಳಿಸದಂತೆ ತಡೆಯಲು ಅಗತ್ಯವಿರುವಷ್ಟು ತೈಲ ಸಂಗ್ರಹಾಗಾರಗಳ ನಿರ್ಮಾಣಕ್ಕೆ ಇದೀಗ ಭಾರತ ಮುಂದಾಗಿದೆ. ಪ್ರಸ್ತುತ, ಭಾರತಕ್ಕೆ ತೈಲ ಸರಬರಾಜಾಗುತ್ತಿದ್ದ ಕೊಲ್ಲಿ ದೇಶದ ಪ್ರಮುಖ ಸಮುದ್ರ ಮಾರ್ಗ ಹೋರ್ಮುಜ್ ಜಲಸಂಧಿಯನ್ನೇ ಇರಾನ್ ಮುಚ್ಚಿರುವುದರಿಂದಾಗಿ ಭಾರತದ ೨೨ ಹಡಗುಗಳು ತೈಲ ಹೊತ್ತು ಸಮುದ್ರದಲ್ಲಿ ನಿಂತಲ್ಲಿಯೇ ನಿಂತಿದೆ. ಗಲ್ಪ್ ದೇಶಗಳ ಯುದ್ದವೇ ಭಾರತದಲ್ಲಿ ತೈಲ ಸಂಗ್ರಹಾಲಯಗಳ ಅಗತ್ಯತೆ ಎಷ್ಟಿದೆ ಎಂಬುದಕ್ಕೆ ಪಾಠ ಹೇಳಿದಂತಿದೆ. ಸಂಕಷ್ಟ ಬಂದಾಗಲೇ ಪರಿಸ್ಥಿತಿಯ ಸತ್ಯ ದರ್ಶನವಾಗುತ್ತದೆ ಎಂಬುದಕ್ಕ ಈಗಿನ ಗ್ಯಾಸ್ ಟ್ರಬಲ್ ಉತ್ತಮ ಉದಾಹರಣೆಯಾಗಿದೆ.

ಕೊನೇ ಹನಿ

ಹಳೇ ಗಾದೆ ಮಾತನ್ನು ನೆನಪಿಸಿಕೊಳ್ಳುವುದಾದಲ್ಲಿ, ಯುದ್ದದಲ್ಲಿ ಯಾರೇ ಗೆಲ್ಲಲಿ, ಯಾರೇ ಸೋಲಲಿ.. ಗೋಳಿಡುವುದು ಜನಸಾಮಾನ್ಯರೇ..

ಹೌದು. ಈಗಿನ ಸಮರ ೨೩ ದಿನಗಳನ್ನೂ ಪೂರೈಸಿ ಮುಂದುವರೆಯುತ್ತಿರುವುದನ್ನು ನೋಡಿದಾಗ, ಯಾರದ್ದೋ ಅಧಿಕಾರದ ಹತಾಶೆಗೆ ಯಾರದ್ದೋ ಅಹಂಗೆ ಇಡೀ ಜಗತ್ತಿನ ಜನರೇ ಬೆಲೆ ತೆರುವಂತಾಗಿದೆ. ದುಬೈನಂಥ ದೇಶವೇ ದಿನದಿನಕ್ಕೂ ನಾಶವಾಗುತ್ತಿದೆ. ಹಲವಾರು ದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ದುಬೈನ ಸುಂದರ ವಿಮಾನ ನಿಲ್ದಾಣವೇ ನುಚ್ಚು ನೂರಾಗಿದೆ. ತಾನು ವಿಶ್ವದ ದೊಡ್ಡಣ್ಣ ಎಂಬ ಪ್ರಭುತ್ವ ಸ್ಥಾಪಿಸಬೇಕೆಂಬ ಹಠದಿಂದ ಅಮೇರಿಕಾದ ಡೋನಾಲ್ಡ್ ಟ್ರಂಪ್ ಕೈಗೊಂಡ ಯುದ್ದದ ನಿರ್ಧಾರ ಇಷ್ಟೊಂದು ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಇರಾನ್ ತನ್ನ ವಿರುದ್ಧವೇ ಪ್ರತಿಧಾಳಿ ನಡೆಸುವ ಹಂತಕ್ಕೆ ಹೋದೀತು ಎಂದೂ ಟ್ರಂಪ್ ಭಾವಿಸಿರಲಿಕ್ಕಿಲ್ಲ. ಪ್ರಾರಂಭದಲ್ಲಿ ಇದು ಅಮೇರಿಕಾ, ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಕೈಗೊಂಡ ಯುದ್ದ ಎಂದು ಅನ್ನಿಸಿದ್ದರೂ ಈಗ ಇದೊಂದು ಮಧ್ಯಪ್ರಾಚ್ಯದ ಯುದ್ಧ ಮಾತ್ರವಾಗದೇ ಇಡೀ ಜಗತ್ತಿನ ಯುದ್ಧದಂತೆ ಭಾವನೆ ಬರುವಂತಿದೆ. ಯಾಕೆಂದರೆ, ಅಲ್ಲಿ ನಡೆಯುತ್ತಿರುವ ಆ ಯುದ್ಧ ವಿಶ್ವದ ಎಲ್ಲಾ ಕಡೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಲ್ಲಿ ಕ್ಷಿಪಣಿಗಳಿಂದ ಉಂಟಾದ ಬೆಂಕಿ ಅಲ್ಲಿಗೆ ಮಾತ್ರ ಸೀಮಿತವಾಗದೇ ಜಗತ್ತನ್ನೇ ಸುಡುವಂತೆ ವ್ಯಾಪಿಸುತ್ತಿದೆ.

ಯಾವುದೇ ಯುದ್ದವಾಗಲಿ.. ಪ್ರಾರಂಭಿಸುವುದು ಅತ್ಯಂತ ಸುಲಭ.. ಆದರೆ ಅಂತ್ಯಗೊಳಿಸುವುದು ಮಾತ್ರ ಕಷ್ಟ.. ಕಷ್ಟ.. ಯುದ್ಧದಲ್ಲಿ ಸೋತವನ ಜತೆ ಗೆದ್ದವನೂ ಕೂಡ ಅನೇಕ ರೀತಿಯಲ್ಲಿ ಸೋತವನೇ ಆಗಿರುತ್ತಾನೆ. ಯುದ್ಧ ಎಲ್ಲರ ಸೋಲಿಗೂ ಕಾರಣವಾಗುತ್ತದೆ. ಯುದ್ಧದಲ್ಲಿ ಸೋತು ಗೆದ್ದವರಿಲ್ಲ. ಯುದ್ಧದಲ್ಲಿ ಗೆದ್ದು ಸೋತವರೇ ಎಲ್ಲಾ!!