ಗೋಣಿಕೊಪ್ಪಲು, ಮಾ. ೨೨: ರೂ. ೧೮ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಲ್ಲಿಗೆ ಸಮೀಪದ ಮೈಸೂರಮ್ಮ ನಗರದ ನೂತನ ರಸ್ತೆಯನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಹಂತ ಹಂತವಾಗಿ ಗ್ರಾಮೀಣ ರಸ್ತೆಗಳನ್ನು ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು. ಜನರ ಬೇಡಿಕೆಯನ್ನು ಈಡೇರಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಮೈಸೂರಮ್ಮ ನಗರದ ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ಡಾಂಬರೀಕರಣದ ಬದಲಾಗಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು ಮಾತನಾಡಿ, ಮೈಸೂರಮ್ಮ ನಗರ ಸೇರಿದಂತೆ ನಾಲ್ಕು ಗ್ರಾಮಗಳಿಗೆ ರಸ್ತೆ ಅಭಿವೃದ್ಧಿಗಾಗಿಯೆ ಶಾಸಕ ಪೊನ್ನಣ್ಣ ಅವರು ೨ ಕೋಟಿ ಅನುದಾನವನ್ನು ಈಗಾಗಲೇ ನೀಡಿದ್ದಾರೆ. ಅರುವತೊಕ್ಕಲು ಭಾಗದಲ್ಲಿ ೩೫ ಲಕ್ಷ ಅನುದಾನ ರಸ್ತೆಗಾಗಿ ನೀಡಲಾಗಿದೆ. ಮುಂದೆ ಇನ್ನಷ್ಟು ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಅರುವತ್ತೋಕ್ಕಲು ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿಮಾಡ ಯಶ್ವಿನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜೆ.ಕೆ. ಸೋಮಣ್ಣ, ಜಿಲ್ಲಾ ವಕ್ತಾರ ಆಪಟ್ಟಿರ ಟಾಟು ಮೊಣ್ಣಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಲಾಲು ಸ್ಟಾಲಿನ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕುಲ್ಲಚಂಡ ಪ್ರಮೋದ್ ಗಣಪತಿ, ಎಂ. ಮಂಜುಳ, ವಿ.ಟಿ. ವಾಸು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.