ಸಿದ್ದಾಪುರ, ಮಾ. ೨೨: ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಾ ಮಾನವನ ಮೇಲೆ ದಾಳಿ ಮಾಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಮೈತಾಡಿ, ಕುಕ್ಲೂರು, ಮಗ್ಗುಲ, ಅರಮೇರಿ, ಕದನೂರು, ಬಿಳುಗುಂದ, ಐಮಂಗಲ, ದೇವಣಗೇರಿ, ಬೆಳ್ಳೂರು ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಆತಂಕ ಸೃಷ್ಟಿಸುತ್ತಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದÀ ಎ.ಎಸ್. ಪೊನ್ನಣ್ಣ ಅವರು ಸದನದಲ್ಲಿ ಪ್ರಸ್ತಾಪ ಮಾಡಿ ಕಾಡಾನೆ ಹಿಡಿಯಲು ಅನುಮತಿಯನ್ನು ಪಡೆದು ಕೊಟ್ಟಿದ್ದರು. ಇತ್ತೀಚೆಗಷ್ಟೇ ಚೆನ್ನಯ್ಯನ ಕೋಟೆ ಗ್ರಾಮದಲ್ಲಿ ಮಾನವನ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದ ಸಲಗವನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಭಾನುವಾರ ಕುಕ್ಲೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ನೆರವಿನಿಂದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಬೆಳಿಗ್ಗೆ ಪೂಜೆ ಮುಗಿಸಿ ಕಾರ್ಯಾಚರಣೆ ನಡೆಸಿದರು. ಬೆಳಿಗ್ಗೆ ೧೦ ಗಂಟೆಗೆ ಕಾರ್ಯಾಚರಣೆ ಪ್ರಾರಂಭವಾಯಿತು.ಮಧ್ಯಾಹ್ನ ೧ ಗಂಟೆಯ ಸಮಯಕ್ಕೆ ಅಂದಾಜು ೩೫ ವರ್ಷ ಪ್ರಾಯದ ಬೃಹತ್ ಗಾತ್ರದ ಒಂಟಿ ಸಲಗ ಪತ್ತೆಯಾಯಿತು. ಸಾಕಾನೆಗಳು ತಕ್ಷಣವೇ ಒಂಟಿ ಸಲಗವನ್ನು ಸುತ್ತುವರಿದವು. ಕೂಡಲೇ ವನ್ಯಜೀವಿ ವೈದ್ಯಾಧಿಕಾರಿ ಡಾ ರಮೇಶ್ ಅರವಳಿಕೆ ಔಷಧಿಯನ್ನು ಬಂದೂಕಿಗೆ ತುಂಬಿದರು. ಶಾರ್ಪ್ ಶೂಟರ್ ಕುಶಾಲನಗರ ಉಪ ವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಅವರು ಅರವಳಿಕೆ ಔಷಧಿಯನ್ನು ಪ್ರಯೋಗಿಸಿದರು. ಕೂಡಲೆ ಆನೆಯು ಸುಮಾರು ೫೦೦ ಮೀಟರ್ವರೆಗೆ ಕಾಫಿ ತೋಟದ ಸುತ್ತಾಡಿ ಕೊನೆಗೆ ಕುಕ್ಲೂರು ಗ್ರಾಮದ ಕುಟ್ಟಂಡ ಪ್ರಭು ಅವರ ಕಾಫಿ ತೋಟದೊಳಗೆ ನೆಲಕ್ಕುರುಳಿತು.
ಕೂಡಲೇ ಕಾರ್ಯಾಚರಣೆ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಕಾಡಾನೆಯ ತಲೆಗೆ ನೀರು ಸುರಿದು ನಂತರ ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಕಂಜನ್ ಭೀಮಾ, ಸುಗ್ರೀವ, ಹರ್ಷ, ಇವುಗಳ ನೆರವಿನಿಂದ ಕಾಲಿಗೆ ಹಗ್ಗ ಕಟ್ಟಿದರು. ಬಳಿಕ ಸೆರೆ ಹಿಡಿದ ಸಲಗವನ್ನು ಸಾಕಾನೆಗಳ ನೆರವಿನಿಂದ ಕಾಫಿ ತೋಟದೊಳಗಿನಿಂದ ಎಳೆದು ತರಲಾಯಿತು. ಹೊರಕ್ಕೆ ಎಳೆದು ತರುವ ಸಂದರ್ಭ ಸಲಗವು ಲಾರಿಯ ಸಮೀಪಕ್ಕೆ ಬರಲು ಹಿಂದೇಟು ಹಾಕಿ ಪುಂಡಾಟಿಕೆ ಮಾಡುತ್ತಾ ಹಗ್ಗವನ್ನು ಎಳೆದಾಡುತ್ತಿತ್ತು. ಆದರೂ ಕೂಡ ಕಾಡಾನೆಗಳ ಕಾರ್ಯಾಚರಣೆಯಲ್ಲಿ ಅನುಭವ ಹೊಂದಿರುವ ಅಭಿಮನ್ಯು ಮತ್ತು ಭೀಮಾ ಸಲಗವನ್ನು ದೂಡುತ್ತಾ ಎಳೆದು ತರುವಲ್ಲಿ ಯಶಸ್ವಿಯಾದವು. ಸೆರೆಹಿಡಿದ ಸಲಗವನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು. ಸೆರೆ ಹಿಡಿದ ಆನೆಯನ್ನು ಆನೆ ಚೌಕೂರಿಗೆ ಸ್ಥಳಾಂತರ ಮಾಡಲಾಯಿತು.
ಕಾರ್ಯಾಚರಣೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್. ಜಗನ್ನಾಥ್ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್.ಗಳಾದ ಗೋಪಾಲ್ ಮತ್ತು ತಹಸೀನ್, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಉಪವಲಯ ಅರಣ್ಯ ಅಧಿಕಾರಿಗಳಾದ ರಾಘವ, ಶ್ರೀನಿವಾಸ, ಲೋಕೇಶ್, ಶಶಿ, ಆರ್.ಆರ್. ಟಿ ಆನೆ ಕಾರ್ಯ ಪಡೆ ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
೧೦ ದಿನದಲ್ಲಿ ಎರಡು ಸಲಗ ಸೆರೆ
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಚೌರಿರ ಗಣಪತಿ ಅವರು ಹಾಡಹಗಲೇ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ತಾ೧೨ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪುಂಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿದ್ದರು. ಇದೀಗ ಭಾನುವಾರ ಉರಿ ಬಿಸಿಲಿನಲ್ಲಿ ಕಾರ್ಯಾಚರಣೆ ನಡೆಸಿ ಶ್ರಮಪಟ್ಟು ಕೂಕ್ಲೂರು ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಸಲಗವನ್ನು ಸೆರೆ ಹಿಡಿದಿದ್ದಾರೆ. ಎರಡು ಸಲಗಳನ್ನು ಸೆರೆಹಿಡಿದ ಅರಣ್ಯ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಶಾಸಕ ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೂರಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಒಂಟಿ ಸಲಗವನ್ನು ಸೆರೆಹಿಡಿದ ವಿಚಾರ ತಿಳಿದ ಸ್ಥಳೀಯ ನಿವಾಸಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಸೆರೆಯಾದ ಸಲಗವನ್ನು ನೋಡಿ ತಮ್ಮ ಮೊಬೈಲ್ನಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದು ಕಂಡು ಬಂತು.
- ವರದಿ : ವಾಸು