ಕಣಿವೆ, ಮಾ. ೨೦: ಕೆಳಗೆ ಕಾವೇರಿ ನದಿ ಹರಿದಿದೆ. ಮೇಲೆ ಜಲಮಂಡಳಿಯ ನೀರು ನಿರ್ವಹಣಾ ಘಟಕದ ಟ್ಯಾಂಕ್‌ಗಳಿದ್ದು, ಸಂಸ್ಕರಣೆ ಒಳಪಟ್ಟ ಯಥೇಚ್ಛ ನೀರು ಅವ್ಯಾಹತವಾಗಿ ಚರಂಡಿಯಲ್ಲಿ ಹರಿದು ಮತ್ತದೇ ಕಾವೇರಿ ಸೇರುತ್ತಿದೆ.
ಆದರೆ, ಅಧಿಕಾರ ಮುಗಿಸಿ ಮನೆಗೆ ಮರಳಿದ ಚುನಾಯಿತರಿಗೂ ಉದ್ಯಾನದ ಮೇಲೆ ಕಾಳಜಿ ಇರಲಿಲ್ಲ. ಅಧಿಕಾರಿಗಳಿಗೆ ಮೊದಲೇ ಇಲ್ಲ. ಇನ್ನು ಸಮಸ್ಯೆಗಳನ್ನು ಹೇಳಿ ಕೊಳ್ಳುವುದಾದರೂ ಯಾರ ಬಳಿ ? ಇದು ಕುಶಾಲನಗರದ ಪರಿಸರ ಪ್ರಿಯರ ಮನದಾಳದ ಮಾತು.
ಊರಿಗೊಬ್ಬಳೇ ಪದ್ಮಾವತಿ ಎಂಬAತೆ ಇಡೀ ಕುಶಾಲನಗರದ ೫೦ ಬಡಾವಣೆಗಳ ಪೈಕಿ ಮುಖ್ಯಮಂತ್ರಿಗಳ ಅನುದಾನದಿಂದ ನಿರ್ಮಾಣವಾದ ರೈತ ಸಹಕಾರ ಭವನದ ಮುಂಬದಿಯ ಕಾವೇರಿ ಬಡಾವಣೆಯ ಉದ್ಯಾನವನ ನೀರು ನಿರ್ವಹಣೆ ಇಲ್ಲದೇ ಒಣಗಿ ಹೋಗಿದೆ.
ಉದ್ಯಾನದಲ್ಲಿ ಅಳಿದುಳಿದಿದ್ದ ಗಿಡ-ಸಸ್ಯಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಉದ್ಯಾನ ನಿರ್ಮಾಣದ ಸಂದರ್ಭ ಅಳವಡಿಸಿದ್ದ ಯಾಂತ್ರಿಕ ಕೊಳವೆ ಬಾವಿಯಲ್ಲಿ ನೀರು ಇಲ್ಲದ ಕಾರಣ ಬೋರ್‌ವೆಲ್‌ಗೆ ಅಳವಡಿತ ಪರಿಕರಗಳು ಕಿತ್ತು ಚೆಲ್ಲಾಪಿಲ್ಲಿಯಾಗಿವೆ.
ಉದ್ಯಾನವನದ ಮೇಲ್ಭಾಗದ ಕೂಗಳತೆಯ ದೂರದಲ್ಲಿ ಜಲಮಂಡಳಿಯ ಕಾರ್ಯಾಲಯವಿದ್ದು ಕಾವೇರಿ ನದಿಯಿಂದ ನೀರು ಮೇಲೆತ್ತಿ ಸಂಗ್ರಹಿಸಿ ಶುದ್ಧೀಕರಣ ಮಾಡುವ ಘಟಕವಿದೆ.
ಆ ಘಟಕದಲ್ಲಿ ಕಾವೇರಿ ನದಿಯ ನೀರನ್ನು ಶುದ್ಧೀಕರಣಗೊಳಿಸಿದಾಗ ಸಂಗ್ರಹವಾಗುವ ಅನುಪಯುಕ್ತ ನೀರನ್ನು ಪೈಪು ಲೈನ್ ಮೂಲಕ ಅಲ್ಲೇ ತಳಭಾಗದಲ್ಲಿರುವ ಕಾವೇರಿ ಉದ್ಯಾನಕ್ಕೆ ರೈತ ಸಹಕಾರ ಭವನದ ಮೂಲಕ ಅತಿ ಸುಲಭದಲ್ಲಿ ತರಬಹುದಾಗಿದೆ. ಏಕೆಂದರೆ ಜಳಮಂಡಳಿಯ ಶುದ್ಧೀಕರಣ ಕೇಂದ್ರದ ಅನುಪಯುಕ್ತ ನೀರು ಚರಂಡಿಗಳಲ್ಲಿ ಹರಿದು ಪೋಲಾಗುತ್ತಿದೆ. ಈ ನೀರನ್ನು ಉದ್ಯಾನಕ್ಕೆ ಬಳಸಿಕೊಳ್ಳುವ ಕನಿಷ್ಟ ಯೋಚನೆ ಅಥವಾ ಯೋಜನೆಗೆ ಕಳೆದ ಚುನಾಯಿತ ಮಂಡಳಿ ಮುಂದಾಗಲಿಲ್ಲ. ಹಾಗಾಗಿ ಈಗ ಸುಂದರ ಉದ್ಯಾನ ಬಿಸಿಲಿಗೆ ಒಣಗಿ ಪತರುಗುಟ್ಟುತ್ತಿದೆ.
ಇಡೀ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಹಸಿರುಮಯವಾಗಿ ಗೋಚರಿಸುವ ಏಕೈಕ ಉದ್ಯಾನದೊಳಗೆ ಸ್ಥಳೀಯ ರೋಟರಿ ಸಂಸ್ಥೆಯವರು ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ಕೆಲವೊಂದು ಪರಿಕರಗಳನ್ನು ಅಳವಡಿಸಿದ್ದರು. ಈ ಪರಿಕರಗಳು ಅತ್ಯಂತ ಸಮರ್ಥವಾಗಿ ಬಳಕೆಯೂ ಆಗುತ್ತಿದ್ದವು.
ಇದೀಗ ಉದ್ಯಾನ ಒಣಗಿ ನಿಂತದ್ದರಿAದ ಇಲ್ಲಿ ಯಾರೊಬ್ಬರೂ ಉದ್ಯಾನದೊಳಕ್ಕೆ ಆಗಮಿಸುವ ಮನಸ್ಸು ಮಾಡುತ್ತಿಲ್ಲ. ಕೂಡಲೇ ಪುರಸಭೆ ಅಧಿಕಾರಿಗಳು ಊರಿನ ಜನರ ಮನಸ್ಥಿತಿಗಳನ್ನು ಅರಿತು ಅವರಿಗೆ ಬೇಕಾದ ಸುಸಜ್ಜಿತ ಉದ್ಯಾನವಾಗಿ ರೂಪಿಸಲು ಈಗಲೂ ಯೋಜನೆ ರೂಪಿಸಲಿ ಎಂಬುದಾಗಿ ನಗರದ ಹಿರಿಯ ನಾಗರೀಕರಾದ ಜಿ.ಎಲ್ ನಾಗರಾಜು ಒತ್ತಾಯಿಸಿದ್ದಾರೆ.