ಮಡಿಕೇರಿ, ಮಾ. ೨೦: ಜಿಲ್ಲೆಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವಶದಲ್ಲಿರುವ ದೇವಾಲಯಗಳ ಜಮೀನಿನ ಹಾಗೂ ಸೋಮವಾರಪೇಟೆ ತಾಲೂಕು ಅಂಜನಗೇರಿ ಬೆಟ್ಟಗೇರಿ ಗ್ರಾಮದ ಬೆಳ್ಳಾರಿಕಮ್ಮ ಹಾಗೂ ಅಯ್ಯಪ ದೇವರಕಾಡಿಗೆ ಸೇರಿರುವ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರು ಸ್ವಯಂಪ್ರೇರಿತರಾಗಿ ತೆರವುಮಾಡಿಕೊಡುವಂತೆ ಕೊಡಗು ಏಕೀಕರಣ ರಂಗ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗದ ಖಜಾಂಚಿ ಮಂದನೆರವAಡ ಅಪ್ಪಚ್ಚು, ಭಾಗಮಂಡಲ ಹೋಬಳಿಯ ಭಾಗಮಂಡಲ, ತಾವೂರು, ತಣ್ಣಿಮಾನಿ ಗ್ರಾಮದಲ್ಲಿ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಿಗೆ ಸೇರಿದ ಒಟ್ಟು ೧೫೮.೨೭ ಎಕರೆಯಷ್ಟು ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ತೆಗೆಸಿ ಒತ್ತುಚಿವರಿ ತೆರವಿಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೆಲವರು ಒತ್ತಡ ಹೇರಿ ಕಡತವನ್ನೇ ಇಲ್ಲದಂತೆ ಮಾಡಿದರು.
ನಂತರದಲ್ಲಿ ಕಳೆದ ತಾ. ೨೩-೦೧-೨೦೨೩ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಲೋಕಾಯುಕ್ತರು ನೀಡಿದ ಸೂಚನೆಯಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕರು ಸರ್ವೆ ಮಾಡಿ ಒತ್ತುವರಿದಾರರ ಹೆಸರು ಮತ್ತು ಒತ್ತುವರಿಯ ಪ್ರಮಾಣದ ಬಗ್ಗೆ ದೇವಾಲಯ ಸಮಿತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದರೂ ಇದುವರೆಗೂ ಯಾವದೇ ಕ್ರಮ ಆಗಿಲ್ಲವೆಂದು ಹೇಳಿದರು.
ಅದೇ ರೀತಿ ಸೋಮವಾರಪೇಟೆ ತಾಲೂಕು ಅಂಜನಗೇರಿ ಬೆಟ್ಟಗೇರಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯಕ್ಕೆ ಸೇರಿದ ಬಸ್ತಿ ದೇವರಕಾಡು ಮತ್ತು ಅಯ್ಯಪ್ಪ ದೇವರಕಾಡಿನ ಒತ್ತುವರಿಯನ್ನು ತೆರವುಗೊಳಿಸುವಂತೆ ಕುಶಾಲನಗರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗೆ ೨೩-೦೭-೨೦೨೪ರಂದು ದೂರು ಸಲ್ಲಿಸಲಾಗಿದೆ. ಇದರ ಆಧಾರದಲ್ಲಿ ತಹಶೀಲ್ದಾರರ ಸೂಚನೆಯಂತೆ ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೇ ನಡೆಸಿ ಒಟ್ಟು ೧೨.೫೧ಎಕರೆ ಜಾಗ ಒತ್ತುವರಿಯಾಗಿರುವ ಬಗ್ಗೆ ವರದಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ತೆರವಿಗೆ ಆಗ್ರಹ
ಈ ಎರಡೂ ಕಡೆಗಳಲ್ಲಿ ಒತ್ತುವರಿಯಾಗಿರುವ ವಿಚಾರಕ್ಕೆ ಸಂಬAಧಿಸಿದAತೆ ರಂಗದ ವತಿಯಿಂದ ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ಜನಾಂಗಕ್ಕೆ ಸೇರಿದ ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಜಿಲ್ಲಾ ಬಂಟರ ಸಂಘ, ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದು, ಆಯಾ ಜನಾಂಗದ ಜನರು ಒತ್ತುವರಿ ಮಾಡಿಕೊಂಡಿರುವ ದೇವಾಲಯದ ಜಮೀನು ಮತ್ತು ದೇವರಕಾಡಿನ ಜಾಗದ ಒತ್ತುವರಿಯನ್ನು ಸ್ವಪ್ರೇರಿತರಾಗಿ ತೆರವು ಮಾಡಿಕೊಡುವಂತೆ ಕೋರಲಾಗಿದೆ. ಎರಡೂ ಕಡೆಗಳ ದೇವಾಲಯದ ತಕ್ಕ ಮುಖ್ಯಸ್ಥರು, ಜನಪರ ಸಂಘಟನೆಗಳು ಸಾಮಾಜಿಕ ನಾಯಕತ್ವ ವಹಿಸಿ ಒತ್ತುವರಿದಾರರ ಮನವೊಲಿಸುವಂತೆ ಕೋರುವದಾಗಿ ಅಪ್ಪಚ್ಚು ಹೇಳಿದರು.
ಒತ್ತುವರಿ ಮಾಡಿಕೊಂಡಿರುವವರು ಒಂದು ವೇಳೆ ಸ್ವಯಂಪ್ರೇರಿತರಾಗಿ ತೆರವುಗೊಳಿಸದಿದ್ದಲ್ಲಿ ಒತ್ತುವರಿ ತೆರವಿಗೆ ಸರಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವದು. ತಲಕಾವೇರಿ ಭಾಗಮಂಡಲ ದೇವಾಲಯ ಸಮಿತಿ ಕಾರ್ಯನಿರ್ವಹಣಾಧಿಕಾರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕುಶಾಲನಗರ ವಲಯ ಅರಣ್ಯಾಧಿಕಾರಿಗಳ ಮೇಲೆಯೂ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವದಾಗಿ ಹೇಳಿದರು.
ಜಾಗೃತಿಗೆ ಪ್ರಯತ್ನ
ರಂಗದ ಕಾರ್ಯದರ್ಶಿ ತೇಲಪಂಡ ಪ್ರಮೋದ್ ಸೋಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲೆಲ್ಲಿ ದೇವರಕಾಡುಗಳು ಒತ್ತುವರಿ ಆಗಿದೆಯೋ ಅವರುಗಳಿಗೆಲ್ಲ ಬಿಟ್ಟುಕೊಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಈಗಾಗಲೇ ಬಾಳುಗೋಡುವಿನಲ್ಲಿ ಬಿಟ್ಟುಕೊಟ್ಟಿದ್ದಾರೆ. ಒತ್ತುವರಿಯಿಂದ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಬಿಟ್ಟುಕೊಡದಿದ್ದಲ್ಲಿ ಎದುರಾಗುವ ಪರಿಣಾಮಗಳಿಗೆ ಪರೋಕ್ಷವಾಗಿ ಎಚ್ಚರಿಕೆಯೂ ಆಗಿದೆ ಎಂದು ಹೇಳಿದರು.
ರಂಗದ ಸಂಚಾಲಕ ಅಜ್ಜಿನಂಡ ತಮ್ಮು ಪೂವಯ್ಯ ಮಾತನಾಡಿ, ದೇವರಕಾಡು ಉಳಿಯುವಿಕೆಗಾಗಿ ೧೯೯೧ ರಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಅಂದು ೧೯ ಸಾವಿರ ಎಕರೆಯಷ್ಟಿದ್ದ ದೇವರ ಕಾಡುಗಳು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆ ಸುಪರ್ದಿಗೆ ಒಳಪಟ್ಟ ಬಳಿಕ ಒತ್ತುವರಿಯಾಗಿದೆ. ಇದೀಗ ಮತ್ತೆ ಅರಣ್ಯ ಇಲಾಖೆಗೆ ಒಳಪಟ್ಟು ಮೀಸಲು ಅರಣ್ಯ ವ್ಯಾಪ್ತಿಗೊಳಪಟ್ಟಿದೆ. ನಮ್ಮ ಹೋರಾಟದಿಂದಾಗಿ ಸದ್ಯ ೫ ಸಾವಿರ ಎಕರೆ ಪ್ರದೇಶ ಉಳಿದಿದ್ದು, ಅದನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.