ಮಡಿಕೇರಿ, ಮಾ. ೨೦: ೨೦೨೧-೨೨, ಮತ್ತು ೨೦೨೨-೨೩ರಲ್ಲಿ ಕೊಡಗು ವನ್ಯಜೀವಿ ವಿಭಾಗದ ಅಧಿಕಾರಿಗಳು ವಿವಿಧ ಲೆಕ್ಕಶೀರ್ಷಿಕೆಯ ಅನುದಾನಗಳನ್ನು ಕಾಮಗಾರಿ ನಡೆಸದೇ ಕೋಟ್ಯಂತರ ರೂಪಾಯಿ ಬಿಲ್ ಪಾವತಿಯನ್ನು ಚಾಮರಾಜನಗರ ಜಿಲ್ಲೆಯ ಗುತ್ತಿಗೆದಾರರೊಬ್ಬರಿಗೆ ಮಾಡಿದ್ದ ವಿವರಗಳು ದಾಖಲೆಗಳ ಸಮೇತ ಬಹಿರಂಗವಾಗಿದ್ದು, ಇದಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ತೆನ್ನಿರ ಮೈನಾ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಜ್ವಲಂತ ಸಮಸ್ಯೆಯಾದ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆ ಕುರಿತು ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರ ನಡೆ ಸ್ವಾಗತಾರ್ಹ. ಕಳೆದ ಎರಡು ದಶಕಗಳಿಂದ ವನ್ಯಜೀವಿ ದಾಳಿಯಿಂದ ಅನೇಕ ಮಾನವ ಜೀವಹಾನಿ ಹಾಗೂ ಜಾನುವಾರುಗಳ ಜೀವಹಾನಿ ಸಂಭವಿ ಸುತ್ತಿದ್ದು, ಇದನ್ನು ಶಾಶ್ವತವಾಗಿ ತಡೆಗಟ್ಟುವ ಪ್ರಯತ್ನ ಮಾಡುವುದಾಗಿ ಇಬ್ಬರು ಶಾಸಕದ್ವಯರು ಚುನಾವಣೆ ಸಂದರ್ಭಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸಮಸ್ಯೆಯ ಗಂಭೀರತೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆ ಅರಣ್ಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸುಮಾರು ೯೫೦ ಕಿ.ಮೀ. ನಷ್ಟು ಆನೆ ಕಂದಕಗಳು, ಸೋಲಾರ್ ವಿದ್ಯುತ್ ಬೇಲಿಗಳನ್ನು ದುರಸ್ತಿಪಡಿಸಲು ಹಾಗೂ ಕಾಡಿನ ಒಳಗೆ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಮೇವು ದೊರಕಲು ತಕ್ಷಣವೇ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅರಣ್ಯ ಸಚಿವರು ಸೂಚನೆ ನೀಡಿದ್ದು ಇದರಿಂದ ಬಹುತೇಕ ಸಮಸ್ಯೆ ಬಗೆಹರಿಯುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.