ವೀರಾಜಪೇಟೆ, ಮಾ. ೧೭: ಅಪಾರಶಕ್ತಿ ದೇವನೆಲೆಯಾದ ಮಲೆತಿರಿಕೆ ದೇವಾಲಯದಲ್ಲಿನ ಮಲೆತಂಬ್ರಾನ್ ಎಂಬ ಶಕ್ತಿನೆಲೆ ಈಶ್ವರ ದೇವಾಲಯದ ವಾರ್ಷಿಕೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ ೧ ರಿಂದ ಊರಿನವರು ದೇವರ ಸನ್ನಿಧಿಯಲ್ಲಿ ದೇವತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಹಬ್ಬಕಟ್ಟು ಬೀಳುವ ಸಂಪ್ರದಾಯ ನಡೆಯಿತು. ಅಂದು ದೇವಾಲಯದ ಶುದ್ಧ ಕಾರ್ಯ, ಕುಯ್ಯಪೊರೆಗೆ ಹುಲ್ಲು ಹಾಕುವುದು, ಕೆರೆಯ ಶುದ್ಧೀಕಾರ್ಯ, ಬನಕ್ಕೆ ತೆರಳಿ ಸೊಪ್ಪನ್ನು ತಂದು ಚಪ್ಪರ ಹಾಕುವುದು ನಡೆಯಿತು.
ಮಲೆತಿರಿಕೆ ಶಾಸ್ತಾವುವನ್ನು ಮಲೆತಂಬ್ರಾನ್ ಎಂದೂ ಜೊತೆಗೆ ಬೆಟ್ಟ ಸಾಲುಗಳಲ್ಲಿರುವ ತುಂಬೆ ಹೂವಿನ ಪ್ರಿಯವಾದರಿಂದ ತುಂಬೆಮಲೆ ದೇವಯ್ಯನೆಂದು ಕರೆಯುತ್ತಾರೆ. ಈ ವಿಶೇಷ ನೆಲೆಯಲ್ಲಿ ಒಂದು ರಾತ್ರಿಯೊಳಗೆ ದೇವಾಲಯ ನಿರ್ಮಾಣ ಆಗಲೇಬೇಕೆಂಬ ನಿಯಮವಾದ್ದರಿಂದ ಅಂದಿನಿAದ ಇಂದಿನವರೆಗೂ ದೇವಾಲಯ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಹರಕೆಯಾಗಿ ಒಪ್ಪಿಸಿದ ಮಣ್ಣಿನ ಬೇಟೆ ನಾಯಿಯ ರೂಪಗಳು, ಗಂಟೆಗಳು ಈ ದೇವನೆಲೆಯಲ್ಲಿ ಹೇರಳವಾಗಿ ಕಂಡುಬರುತ್ತಿವೆ.
ಇಲ್ಲಿನ ಸಂಪ್ರದಾಯದAತೆ ವಾರ್ಷಿಕೋತ್ಸವದ ಮುಂಚಿತವಾಗಿ ತಂದAತಹ ಮಣ್ಣಿನ ಕುಯ್ಯಮಡಿಕೆಯನ್ನು ಉತ್ಸವದ ಬೆಳಗಿನ ಜಾವ ಈ ವರ್ಷದ ಕುಯ್ಯತೆರಿಗೆಯ ಕುಟುಂಬದವರು ಮಡಕೆಯಲ್ಲಿ ದೇವಾಲಯದ ಸಮೀಪ ಕುಯ್ಯಕ್ಕಿಕೂಳ್ (ಅನ್ನ), ಚೆಕ್ಕೆಪಾರ (ಹಲಸಿನ ಹಣ್ಣಿನ ಉಪ್ಪಿನಕಾಯಿ), ಚಪ್ಪಲೆಪುಟ್ಟ್ ಮಾಡಿ ದೇವರ ಸನ್ನಿಧಿಯಲ್ಲಿ ಅರ್ಪಿಸಲಾಯಿತು.
ಶನಿವಾರ ಬೆಳಗ್ಗಿನ ಜಾವ ಪಟ್ರಪಂಡ ಕುಟುಂಬದಿAದ ಜೋಡೆತ್ತು ಪೋರಾಟವನ್ನು ದೇವಾಲಯಕ್ಕೆ ಒಪ್ಪಿಸಿದ ನಂತರ ನಾಡಿನವರು ಎತ್ತು ಪೋರಾಟವನ್ನು ದೇವರಿಗೆ ಅರ್ಪಿಸಿದರು. ಕರಡದ ಭಗವತಿ ದೇವಾಲಯದಿಂದ ದೇವರ ಭಂಡಾರವನ್ನು ತಂದು ದೇವರ ಸನ್ನಿಧಿಯಲ್ಲಿ ಇಡಲಾಯಿತು. ಊರಿನ ಹಿರಿಯರು ದುಡಿಕೊಟ್ಟ್ ಹಾಡನ್ನು ಹಾಡುವ ಮೂಲಕ ದೇವರನ್ನು ಕೊಂಡಾಡಿದರು.
ಮಧ್ಯಾಹ್ನ ೧೨ ಗಂಟೆಗೆ ವಿಶೇಷ ಅಲಂಕೃತ ದೇವನೆಲೆಯಲ್ಲಿ ವಿಶೇಷ ಮಹಾಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹಲವರಿಗೆ ದೇವರು ಮೈಯಿಗೆ ಬರುವ ಮೂಲಕ ಅನುವಾದ ನೀಡಿದರು. ನೆರೆದಿದ್ದ ಊರಿನವರು, ಭಕ್ತಾದಿಗಳು ಹರಕೆ ಭಂಡಾರವನ್ನು ಒಪ್ಪಿಸಿ ತೀರ್ಥ ಪ್ರಸಾದವನ್ನು ಪಡೆದರು. ಬಳಿಕ ಭಕ್ತಾಧಿಗಳಿಗೆ ಪಾಯಸವನ್ನು ನೀಡಲಾಯಿತು. ಸಂಜೆ ಭಂಡಾರದ ಲೆಕ್ಕಾಚಾರ ಮುಗಿದ ನಂತರ ದೇವ ಭಂಡಾರವನ್ನು ಕರಡ ಭಗವತಿ ನೆಲೆಯಲ್ಲಿ ಒಪ್ಪಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಶಕ್ತಿ ದೇವರೆಂದೇ ಖ್ಯಾತಿ ಪಡೆದ ಮಲೆತಂಬ್ರಾನ್‌ನ ದರ್ಶನಕ್ಕಾಗಿ ಅಪಾರಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಪ್ರತಿಬಾರಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅದರಂತೆ ಈ ಬಾರಿ ಜಿಲ್ಲೆಯ ನಾನಾ ಕಡೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಹಲವರು ಈ ಕ್ಷೇತ್ರದ ಮಹಿಮೆಯ ಕುರಿತು ಮಾಹಿತಿ ಪಡೆದುಕೊಂಡರು.