ಸಿದ್ದಾಪುರ, ಮಾ. ೧೭: ದಾಂಧಲೆ ನಡೆಸುತ್ತ ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿದ್ದು, ದಾಳಿಕೋರ ಆನೆಯ ಸೆರೆಗೆ ಇಲಾಖೆ ಅಗತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಭಾಗದ ಪೊದುಕೋಟೆ, ಕುಕ್ಲೂರು, ಮಗ್ಗುಲ, ಐಮಂಗಲ, ದೇವಣಗೇರಿ, ಬೆಳ್ಳೂರು, ಬೆಳ್ಳರಿಮಾಡು ಗ್ರಾಮಗಳಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿರುವ ಹಾಗೂ ಕಳೆದ ಕೆಲವು ತಿಂಗಳ ಹಿಂದೆ ಪೊದುಕೋಟೆ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ನಡೆಸಿದ್ದ ಒಂಟಿ ಸಲಗ ಪತ್ತೆಗೆ ಇದೀಗ ಅನುಮತಿ ದೊರೆತಿದೆ.
ಮಾನವನ ಮೇಲೆ ದಾಳಿ ಹಾಗೂ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಾ ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಸರ್ಕಾರದ ಗಮನ ಸೆಳೆದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಿಂದಲೂ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದಕ್ಕೆ ಪೂರಕವಾಗಿ ಆನೆಯ ಚಲನವಲನದ ಮಾಹಿತಿ ಸೇರಿದಂತೆ ಅದರ ಛಾಯಾಚಿತ್ರಗಳನ್ನು ಅಧಿಕಾರಿಗಳಿಗೆ ರವಾನಿಸಲಾಗಿದೆ. ಪರಿಣಾಮ ಅನುಮತಿ ದೊರೆತಿದೆ.
ಪುಂಡಾನೆಯನ್ನು ಸಾಕಾನೆಗಳ ನೆರವಿನಿಂದ ಸೆರೆಹಿಡಿದು ಸ್ಥಳಾಂತರ ಮಾಡಲು ಯುಗಾದಿ ಮತ್ತು ರಂಜಾನ್ ಹಬ್ಬ ಮುಗಿದ ಬಳಿಕ ಮುಂದಿನ ವಾರದಲ್ಲಿ ಕಾರ್ಯಾಚರಣೆ ನಡೆಯಲಿದೆ. ಸರಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ಮಾನವನ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದ ಒಂಟಿ ಸಲಗವನ್ನು ಚೆನ್ನಯ್ಯನಕೋಟೆ ಗ್ರಾಮದ ಕಾಫಿ ತೋಟ ಒಂದರಲ್ಲಿ ಸೆರೆಹಿಡಿದು ಸ್ಥಳಾಂತರ ಮಾಡಲಾಗಿತ್ತು.
ವರದಿ : ಎ.ಎನ್.ವಾಸು