ಕೂಡಿಗೆ/ಕಣಿವೆ ಮಾ. ೧೬: ತಾಲೂಕಿನ ಗಡಿಗ್ರಾಮಗಳಾದ ಹೆಬ್ಬಾಲೆ, ತೊರೆನೂರು ಶಿರಂಗಾಲ ಭಾಗದಲ್ಲಿ ಸೋಮವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ಹಾನಿ ಸಂಭವಿಸಿದೆ.
ಶಿರಂಗಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಮನೆಗಳ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ರೈತರ ಮನೆಯ ಮೇಲ್ಛಾವಣಿ ಹಾನಿಯಾಗಿ ಭತ್ತ, ರಾಗಿ ನೀರುಪಾಲಾಗಿದೆ. ಸಂಜೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರ್ಧ ತಾಸುಗಳಿಗೂ ಹೆಚ್ಚು ಕಾಲ ಆರ್ಭಟಿಸುತ್ತ ಆಲಿಕಲ್ಲು ಸಹಿತ ವರುಷದ ಮೊದಲ ಮಳೆಯಿಂದ ಶಿರಂಗಾಲ ಗ್ರಾಮದ ಚಿಕ್ಕನಾಯಕನಹೊಸಹಳ್ಳಿ ನಿವಾಸಿ ಎಸ್.ಎಚ್.ಸುಂದರ ಎಂಬವರ ಮನೆಯ ಮೇಲ್ಛಾವಣಿಗಳು ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ೪೦ ಚೀಲ ಭತ್ತ ಹಾಗೂ ರಾಗಿ ಮಳೆ ನೀರಿಗೆ ಸಿಲುಕಿ ಹಾನಿಯಾಗಿದೆ. ಜೊತೆಗೆ ಮನೆಯ ಸಾಮಗ್ರಿಗಳಿಗೂ ಹಾಗೂ ದನದ ಕೊಟ್ಟಿಗೆಗೂ ಹಾನಿಯಾಗಿದೆ.
ಅದೇ ರೀತಿ ಗ್ರಾಮದ ಹರೀಶ್ ಹಾಗೂ ಪಾಲ್ಗುಣ ಎಂಬವವರ ಮನೆ ಮೇಲೆ ತೆಂಗಿನ ಮರ ಬಿದ್ದ ಹಿನ್ನೆಲೆ ಹಾನಿ ಉಂಟಾಗಿದೆ. ಹೊಗೆಸೊಪ್ಪು ಮನೆ ಹಾಗೂ ಕೊಟ್ಟಿಗೆಗೂ ಹಾನಿ ಉಂಟಾಗಿದೆ. ಮರಬಿದ್ದ ಪರಿಣಾಮ ಮನೆ ಮುಂದೆ ಸಿಲ್ಲಿಸಿದ್ದ ಹೊಸ ಟ್ರಾಕ್ಟರ್ ಜಖಂಗೊAಡಿದೆ. ಮನೆ ಮೇಲೆ ಬಿದ್ದ ಮರವನ್ನು ಅರಣ್ಯ ಸಿಬ್ಬಂದಿ ತೆರವುಗೊಳಿಸಿದರು. ಮನೆಯಲ್ಲಿ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ. ಮನೆ ಬಳಿ ಇದ್ದ ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದೆ.
ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ನಿರೀಕ್ಷಕ ಸಂತೋಷ, ಗ್ರಾಮ ಲೆಕ್ಕಿಗ ಗುರುದರ್ಶನ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಆರ್.ಹೇಮಲತಾ, ಕಾರ್ಯದರ್ಶಿ ಮನ್ಸೂರ್ ಖಾನ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.