ಪೊನ್ನಂಪೇಟೆ, ಮಾ. ೧೫: ಅರಣ್ಯ ಸಂರಕ್ಷಣೆಯಿAದ ಮಾತ್ರ ವನ್ಯ ಜೀವಿಗಳು ಕಾಡಿನಿಂದ ಹೊರಬರದಂತೆ ತಡೆಯಲು ಸಾಧ್ಯ. ಅರಣ್ಯ ನಾಶದಿಂದ ಇಂದು ಪ್ರಾಣಿಗಳನ್ನು ಕಾಡಿನಲ್ಲಿ ಕಾಣುವ ಬದಲು ಊರಿನಲ್ಲಿ ಕಾಣುವಂತಾಗಿದೆ. ಅರಣ್ಯ ಸಂರಕ್ಷಣೆ ಹೊಣೆ ಕೇವಲ ಸರ್ಕಾರದ್ದು ಮಾತ್ರವಲ್ಲ. ಅದು ಸಮಾಜದ ಹೊಣೆಗಾರಿಕೆಯೂ ಆಗಿದೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ. ಜಗದೀಶ್ ಪ್ರತಿಪಾದಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ‘ಅರಣ್ಯ ಭೂಮಿಯ ಭೌಗೋಳಿಕ ಮರುವಿನ್ಯಾಸ, ಅದರ ಸಂರಕ್ಷಣೆಯಲ್ಲಿನ ಸವಾಲು, ಕಾರ್ಯನಿರ್ವಹಣೆ ಹಾಗೂ ಯಶೋಗಾಥೆ’ ಎಂಬ ವಿಷಯದ ಕುರಿತು ರಾಷ್ಟಿçÃಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯ ಜೀವ ಉಳಿಯಬೇಕಾದರೆ ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು. ಸ್ವಾತಂತ್ರ‍್ಯ ಪೂರ್ವದಲ್ಲಿ ಶೇ. ೩೫ರಷ್ಟು ಇದ್ದ ಅರಣ್ಯ ಪ್ರದೇಶ ಇಂದು ಶೇ. ೨೫ ಕ್ಕೆ ಇಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶ್ರೀಲಂಕಾ ಇಂದಿಗೂ ಶೇ.೩೫ ರಷ್ಟು ಅರಣ್ಯ ಪ್ರದೇಶವನ್ನು ಕಾಪಾಡಿಕೊಂಡು ಬಂದಿದೆ.
ಪಶ್ಚಿಮಘಟ್ಟ ಪ್ರದೇಶ ಜೀವ ವೈವಿಧ್ಯತೆಯ ತಾಣವಾಗಿದೆ. ಇಂತಹ ಸಂಪತ್ಭರಿತ ತಾಣ, ಸೇತುವೆ, ರಸ್ತೆ ಕಟ್ಟಡ ನಿರ್ಮಾಣ ಮೊದಲಾದ ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳಿಂದ ನಾಶವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ವಿನಾಶಕಾರಿ ಬೆಳವಣಿಗೆ ಹೆಚ್ಚಾಗಿ ನಡೆಯದಿದ್ದರೂ, ಪಶ್ಚಿಮ ಘಟ್ಟದ ಪ್ರಮುಖ ತಾಣವಾದ ಶಿವಮೊಗ್ಗ ಜಿಲ್ಲೆಯಲ್ಲಿ ಇದರ ಪ್ರಮಾಣ ಅತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶೇ. ೮೦ರಷ್ಟು ಔಷಧಿ ಸಸ್ಯಗಳು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸಿಗುತ್ತವೆ. ಬ್ರೆಜಿಲ್ ಅಮೆಜಾನ್ ಕಾಡುಗಳನ್ನು ಬಿಟ್ಟರೆ ನಮ್ಮಲ್ಲಿನ ಪಶ್ಚಿಮ ಘಟ್ಟ ಪ್ರದೇಶವೇ ಅತ್ಯಂತ ಶ್ರೀಮಂತವಾದ ಅರಣ್ಯ ಪ್ರದೇಶವಾಗಿದೆ. ರಾಜ್ಯದಲ್ಲಿ ೧೦ ಅರಣ್ಯ ವಲಯಗಳನ್ನು ಗುರುತಿಸಿದ್ದು, ಪೊನ್ನಂಪೇಟೆ ಅರಣ್ಯ ಕಾಲೇಜು, ಒಂದು ಅರಣ್ಯ ವಲಯವನ್ನು ತೆಗೆದುಕೊಂಡು ಅದರ ಸಂಶೋಧನೆ ಮತ್ತು ಸಂರಕ್ಷಣೆ ಬಗ್ಗೆ ವಿಶೇಷ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು. ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ದೇವಗಿರಿ ಮಾತನಾಡಿ ಅರಣ್ಯ ಸಂರಕ್ಷಣೆ ಮೂಲಕ ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟಬೇಕು. ನಿತ್ಯವೂ ನಾಶವಾಗುತ್ತಿರುವ ಅರಣ್ಯ ಮತ್ತು ಭೂಮಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅಧ್ಯಕ್ಷ ಡಾ. ಸಿ. ಜಿ. ಕುಶಾಲಪ್ಪ ಮಾತನಾಡಿ, ಕೊಡಗಿನಲ್ಲಿರುವ ದೇವರ ಕಾಡುಗಳ ಸಂರಕ್ಷಣೆಗಾಗಿಯೇ ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅನ್ನು ೨೦೦೫ರಲ್ಲಿ ಸ್ಥಾಪಿಸಲಾಯಿತು. ವಿದ್ಯಾರ್ಥಿಗಳು ಟ್ರಸ್ಟ್ ನ ಸಹಾಯ ಪಡೆದುಕೊಂಡು ಅಧ್ಯಯನ ನಡೆಸಬೇಕು ಎಂದರು.
ಎಲ್‌ಪಿಜಿ ಕೊರತೆಯಾದರೆ ಮರಗಳ ನಾಶ
ವರ್ಚ್ಯುವೆಲ್ ಮೂಲಕ ಮಾತನಾಡಿದ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾ ಕಾರ್ಯದರ್ಶಿ ಬಿ.ಪಿ ರವಿ ಅವರು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೊಲ್ಲಿ ರಾಷ್ಟ್ರಗಳ ಯುದ್ಧದಿಂದ ಎಲ್ ಪಿ ಜಿ ಅಡುಗೆ ಅನಿಲ ಕೊರತೆಯಾದರೆ ೩-೪ ತಿಂಗಳಲ್ಲಿ ಉರುವಲುಗಳಿಗಾಗಿ ಅಪಾರ ಪ್ರಮಾಣದ ಮರ ಗಿಡಗಳು ನಾಶವಾಗಲಿವೆ. ಈಗಾಗಲೇ ಬೆಂಗಳೂರಿನಲ್ಲಿ ಇಂತಹ ಘಟನೆಗಳನ್ನು ನೋಡುತ್ತಿದ್ದೇವೆ ಅಲ್ಲಿ ಕಟ್ಟಿಗೆ ಡಿಪೋಗಳ ಮುಂದೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದು ಹೇಳಿದರು.
ಜನರ ನಿರಂತರ ಹಸ್ತಕ್ಷೇಪ ಹಾಗೂ ಒತ್ತಡದಿಂದ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ವಾಹನಗಳ ಓಡಾಟ, ಗಣಿಗಾರಿಕೆ ಮತ್ತು ಜನರ ಪ್ರವೇಶ ಅರಣ್ಯ ನಾಶಕ್ಕೆ ಕಾರಣ ಎಂದರು. ಆರ್ಥಿಕ ಲಾಭದ ಉದ್ದೇಶದಿಂದ ಬೆಳೆಸಿದ್ದ ೧,೦೬೦ ಎಕರೆ ಅರಣ್ಯ ಪ್ರದೇಶದ ತೇಗದ ಮರಗಳನ್ನು ಕಡಿಯಲಾಗಿದೆ. ಪರಿಸರದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆಗಟ್ಟಿ ಸ್ವಾಭಾವಿಕ ಅರಣ್ಯ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಸಿ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ರಮೇಶ್ ರಾಥೋಡ್, ಪ್ರೊ. ರನೀಶ್, ಸ್ಥಳೀಯ ಕಾಲೇಜಿನ ಪ್ರಾಧ್ಯಾಪಕರಾದ ಶಿವಕುಮಾರ್, ಕೆಂಚ ರೆಡ್ಡಿ, ಟಾಟಾ ಕಾಫಿ ಮ್ಯಾನೇಜರ್ ಪಿ.ಜಿ. ಪೊನ್ನಪ್ಪ, ಕೊಡಗು ಮಾಡೆಲ್ ಫಾರೆಸ್ಟ್ ಕಾರ್ಯದರ್ಶಿ ಶರೀನ್ ಸುಬ್ಬಯ್ಯ, ನಾಗರಹೊಳೆ ಅರಣ್ಯ ಪ್ರದೇಶದ ಅರಣ್ಯ ಅಧಿಕಾರಿ ಅನನ್ಯಕುಮಾರ್ ಭಾಗವಹಿಸಿದ್ದರು. ಬಳಿಕ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ಪ್ರಬಂಧ ಮಂಡನೆ ಮತ್ತು ಸಂವಾದ ನಡೆಯಿತು.