ಮಡಿಕೇರಿ, ಮಾ. ೧೫: ಆಧುನಿಕತೆಯ ಭರಾಟೆಯಲ್ಲಿ ಆರೋಗ್ಯ ಪೂರ್ಣ ಆಹಾರ ಕ್ರಮ ಮರೆಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಲು ಸಿರಿಧಾನ್ಯ ಬಳಕೆ ಸಹಕಾರಿ ಎಂದು ಗಣ್ಯರು, ವಿಜ್ಞಾನಿಗಳು ಅಭಿಮತ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆ, ದೇಸಿ ತಳಿಗಳ ಸಂರಕ್ಷಣೆ ಹಾಗೂ ಅಂತರರಾಷ್ಟಿçÃಯ ವಾಣಿಜ್ಯ ಮೇಳ-೨೦೨೬ರ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಸಿರಿಧಾನ್ಯ ಹಬ್ಬ, ದೇಸಿ ತಳಿಗಳ ಸಂರಕ್ಷಣೆ ಕಾರ್ಯಾಗಾರ, ಕಿಸಾನ್ ಮೇಳ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಆಯೋಜಿಸಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸಿರಿ ಧಾನ್ಯವನ್ನು ಹೆಚ್ಚಾಗಿ ಬಳಸಬೇಕು. ಆರೋಗ್ಯಯುತ ಬದುಕಲು ಇದು ಪೂರಕವಾಗಿರುತ್ತದೆ. ಸಿರಿಧಾನ್ಯಗಳಿಂದ ದೋಸೆ, ರೊಟ್ಟಿ, ಉಪ್ಪಿಟ್ಟು ರೀತಿಯ ಖಾದ್ಯಗಳನ್ನು ತಯಾರಿಸಿ ಬಳಸುವುದರಿಂದ ಆರೋಗ್ಯ ಸದೃಢವಾಗಿರುತ್ತದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಚಂದ್ರಶೇಖರ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸಹಕಾರಿ. ಇದರಲ್ಲಿ ಉಪಯುಕ್ತ ಖನಿಜಾಂಶ, ಪೋಷಕಾಂಶವಿರುತ್ತದೆ. ಮಧುಮೇಹ ನಿಯಂತ್ರಣಕ್ಕೂ ಸಹಕಾರಿಯಾಗಿದ್ದು, ಮಾರಣಾಂತಿಕ ಕಾಯಿಲೆಗಳನ್ನು ದೂರ ಮಾಡುತ್ತದೆ. ಜಿಲ್ಲೆಯ ಕೆಲವೆಡೆ ಸಿರಿಧಾನ್ಯ ಬೆಳೆಸಲು ಅವಕಾಶವಿದೆ. ಇದಕ್ಕೆ ಅಗತ್ಯ ತರಬೇತಿಯೊಂದಿಗೆ, ಮಾರುಕಟ್ಟೆ, ಮೌಲ್ಯವರ್ಧನೆಗೂ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸಹಕಾರಿ. ಭತ್ತ ಕೃಷಿಗೆ ಸರಕಾರ ಸಬ್ಸಿಡಿ ನೀಡಿ ಪ್ರೋತ್ಸಾಹಿಸಬೇಕೆಂದರು.

ಉಪಕೃಷಿ ನಿರ್ದೇಶಕ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸನ್ಮಾನ ಕಾರ್ಯಕ್ರಮ

ರಾಜ್ಯ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾದ ಟಿ.ಜೆ. ಶೇಷಪ್ಪ ಹಾಗೂ ನಾಪಂಡ ಸುಮಿತ್ರ ಗಣಪತಿ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಆಸಕ್ತಿಯಿಂದ ಕೃಷಿ ಮಾಡಿದರೆ ಯಶಸ್ಸು ಗಳಿಸಬಹುದು. ಉದ್ಯೋಗಸ್ಥರಿಗಿಂತ ಹೆಚ್ಚಿನ ಆದಾಯ ಕೃಷಿಯಿಂದ ಗಳಿಸಬಹುದು ಎಂದು ಸನ್ಮಾನ ಸ್ವೀಕರಿಸಿದ ಶೇಷಪ್ಪ ಹೇಳಿದರು.ಪಶುಸಂಗೋಪನ ಇಲಾಖೆ ಉಪನಿರ್ದೇಶಕ ಲಿಂಗರಾಜು ದೊಡ್ಡಮನಿ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ. ರಾಜಣ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶ್ರೀಧರ್ ಹಾಜರಿದ್ದರು. ಸೌಮ್ಯ ಶೆಟ್ಟಿ ಪ್ರಾರ್ಥಿಸಿ, ಉಪಕೃಷಿ ನಿರ್ದೇಶಕ ಸೋಮಶೇಖರ್ ಸ್ವಾಗತಿಸಿ, ಪರಮೇಶ್ ವಂದಿಸಿದರು.

ಗಮನ ಸೆಳೆದ ವಸ್ತು ಪ್ರದರ್ಶನ - ಮಳಿಗೆ

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಮೀನುಗಾರಿಕೆ ಇಲಾಖೆಯ ಸ್ಟಾಲ್‌ಗಳಲ್ಲಿ ಕೃಷಿ ಸಂಬAಧಿತ ಉಪಯುಕ್ತ ಮಾಹಿತಿಗಳನ್ನು ರೈತರಿಗೆ ಈ ಸಂದರ್ಭ ನೀಡಲಾಯಿತು.

ಗರ್ವಾಲೆಯ ಪೂಣಚ್ಚ ಎಂಬವರು ಆದಿ ಕರಿಮೆಣಸು ತಳಿಯನ್ನು ಪ್ರದರ್ಶಿಸಿದರು. ಪೊನ್ನಂಪೇಟೆಯ ಹುದೂರು ಗ್ರಾಮದ ಪ್ರಗತಿಪರ ಕೃಷಿಕ ರವಿಶಂಕರ್ ಅಪರೂಪ ತಳಿಯ ಭತ್ತದ ಬೀಜಗಳು, ಮರ ಕಾಫಿ, ಕಾಡು ಅಂಜೂರ, ಕುಶಾಲನಗರದ ಅಫ್ತಾಬ್ ಎಂಬವರು ಚೈನಾ ಮೂಲದ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆದ ೧೮ ಇಂಚು ಉದ್ದದ ಹಸಿಮೆಣಸು ಗಿಡ ಪ್ರದರ್ಶಿಸಿದರು. ಇದರೊಂದಿಗೆ ವಿವಿಧ ಸಂಸ್ಥೆಗಳ ಆಹಾರ ಉತ್ಪನ್ನಗಳು, ಕೃಷಿ ಸಲಕರಣೆಗಳು ಗಮನ ಸೆಳೆದವು. ಸಭಾಂಗಣದ ಎದುರು ಕಾಫಿ, ಏಲಕ್ಕಿ, ಕರಿಮೆಣಸು ಸೇರಿದಂತೆ ಸಿರಿಧಾನ್ಯಗಳಿಂದ ರಚಿಸಲಾಗಿದ್ದ ಚಿತ್ರ ನೋಡುಗರ ಗಮನ ಸೆಳೆಯಿತು.

ತಾಂತ್ರಿಕ ಅಧಿವೇಶನ

ಅಪ್ಪಂಗಳದ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯ ವಿಜ್ಞಾನಿ ಡಾ. ಜಿ.ಎ. ರಾಜಣ್ಣ ಮಾತನಾಡಿ, ಏಲಕ್ಕಿ, ಅರಶಿಣ, ಕರಿಮೆಣಸು, ಶುಂಠಿ ಸೇರಿದಂತೆ ೧೨ ಸಾಂಬಾರ ಬೆಳೆಗಳಿವೆ. ಮಳೆ ಕಡಿಮೆ ಇರುವ ಜಾಗಕ್ಕೆ ಸೂಕ್ತ ತಳಿಯನ್ನು ಸಂಸ್ಥೆಯ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಸಂಬಾರ ಬೆಳೆಗಳಿಂದ ದೇಶಕ್ಕೆ ರೂ. ೩೦ ಸಾವಿರ ಕೋಟಿ ಲಾಭ ಬರುತ್ತಿದೆ. ಬೆಳೆಗಳಿಗೆ ಅಗತ್ಯ ಪೋಷಕಾಂಶವನ್ನು ನೀಡಬೇಕು. ರಫ್ತಿನ ಬಗ್ಗೆ ಆಸಕ್ತಿ ತೋರಬೇಕು. ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಸಿ ಭತ್ತದ ತಳಿಗಳ ಕುರಿತು ಪೊನ್ನಂಪೇಟೆಯ ಹುದೂರು ಗ್ರಾಮದ ಪ್ರಗತಿಪರ ರೈತ ರವಿಶಂಕರ್ ಮಾತನಾಡಿ, ಭತ್ತದ ಕೃಷಿ ಲಾಭದಾಯಕವಲ್ಲ ಎಂಬ ಮನಸ್ಥಿತಿ ರೈತರಿಗೆ ಬಂದಿದೆ. ವನ್ಯಜೀವಿ ಹಾವಳಿ, ಕಾರ್ಮಿಕರ ಕೊರತೆ ಇದಕ್ಕೆ ಕಾರಣವಾಗಿದೆ. ದೇಸಿಯ ತಳಿಗಳನ್ನು ಸಂರಕ್ಷಿಸಬೇಕು. ತಾನು ೨೫೦ಕ್ಕೂ ಹೆಚ್ಚು ಹಲಸಿನ ತಳಿಗಳು, ೩೦೦ಕ್ಕೂ ಹೆಚ್ಚು ಹಣ್ಣು ತಳಿ ಬೆಳೆಯುತ್ತಿದ್ದೇನೆ. ಪರಿಮಳಯುಕ್ತ ಭತ್ತದ ತಳಿಗಳಿವೆ. ಮುಂದಿನ ಪೀಳಿಗೆಗೆ ಉತ್ತಮ ತಳಿಗಳನ್ನು ನೀಡಬೇಕು. ಕೃಷಿ ನಾಶವಾಗದಂತೆ ಎಚ್ಚರವಹಿಸಬೇಕು. ಭತ್ತ ಫಸಲಿಗೆ ಕ್ವಿಂಟಾಲ್‌ಗೆ ಕನಿಷ್ಟ ೫ ಸಾವಿರ ಬೆಂಬಲ ಬೆಲೆ ನೀಡಿದರೆ ಭತ್ತದ ಗದ್ದೆ ಪಾಳು ಬೀಳುವುದಿಲ್ಲ ಎಂದ ಅವರು, ಭಾರತ ಸ್ವಾವಲಂಬಿಯಾಗಿ ಕೃಷಿಯಲ್ಲಿದೆ. ಮತ್ತೇ ಸಮಸ್ಯೆಗೆ ಸಿಲುಕಬಾರದು ಎಂದು ಎಚ್ಚರಿಸಿದರು.

ಜೇನು ಕೃಷಿ ಕುರಿತು ತೋಟಗಾರಿಕೆ ಇಲಾಖೆ ನಿವೃತ್ತ ನಿರ್ದೇಶಕ ವಸಂತ್ ಮಾತನಾಡಿ, ಜೇನು ಕೃಷಿಯನ್ನು ಕೊಡಗಿನವರು ಮೈಗೂಡಿಸಿಕೊಂಡಿದ್ದಾರೆ. ಯಾವುದೇ ಕೆಲಸ ಮಾಡಬೇಕಾದರೂ ಅದರ ಕುರಿತು ಕನಿಷ್ಟ ಜ್ಞಾನ ಹೊಂದಿರಬೇಕು. ಇಲ್ಲದಿದ್ದಲ್ಲಿ ಯಶಸ್ಸು ದೊರೆಯುವುದಿಲ್ಲ. ರಾಜ್ಯಕ್ಕೆ ಹೆಚ್ಚು ಉತ್ಪಾದನೆ ಜೇನುತುಪ್ಪ ಉತ್ಪಾದನೆ ಮಾಡುತ್ತಿದ್ದ ಜಿಲ್ಲೆ ಕೊಡಗು ಆಗಿತ್ತು. ಕೊಡಗು ರಾಜ್ಯವಾಗಿದ್ದಾಗ ಜೇನು ಕೃಷಿಗೆ ಪ್ರತ್ಯೇಕ ಬಜೆಟ್ ಇತ್ತು. ಯಥೇಚ್ಛವಾದ ಜೇನು ಕುಟುಂಬಗಳಿದ್ದವು. ಕಾಯಿಲೆಯಿಂದ ಶೇ. ೯೫ ಜೇನು ಕುಟುಂಬ ನಾಶವಾಯಿತು. ಕ್ರಮೇಣ ಜೇನು ಕೃಷಿ ಮರೆಯುವ ಪರಿಸ್ಥಿತಿ ಬಂತು. ಪರಕೀಯ ಪರಾಗ ಸ್ಪರ್ಶ ಕ್ರಿಯೆ ಹೆಚ್ಚಾಗಲು ಜೇನು ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಮಾರಕಟ್ಟೆಯಲ್ಲಿ ಕಲಬೆರಕೆ ಜೇನುತುಪ್ಪ ಮಾರಾಟವಾಗುತ್ತಿದ್ದು, ಇದು ತಪ್ಪಬೇಕೆಂದರು.

ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಬಾಗಣ್ಣ ಮಾತನಾಡಿ, ಸಿರಿಧಾನ್ಯದ ಬಳಕೆಯಿಂದ ಆಗುವ ಲಾಭದ ಬಗ್ಗೆ ಮಾಹಿತಿ ನೀಡಿದರು.

ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸುಮತಿ ಮಾತನಾಡಿ, ಮಾದಕ ವಸ್ತುಗಳಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕ್ಷೀಣಿಸುತ್ತದೆ. ಸಮಾಜದ ಸ್ವಾಸ್ಥö್ಯ ಹದಗೆಡುತ್ತದೆ. ಅಮಲು ಪದಾರ್ಥಗಳಿಂದ ಕ್ಷಣಿಕ ಸುಖ ದೊರೆಯುತ್ತದೆ. ಭವಿಷ್ಯಕ್ಕೆ ಅಪಾಯ ತಂದೊಡ್ಡಲಿದೆ. ಮದ್ಯ, ಗಾಂಜಾ, ಸಿಗರೇಟ್‌ನಂತಹ ಮಾದಕ ವಸ್ತುಗಳನ್ನು ಬಳಸಬಾರದು. ಪೋಷಕರು ಕೂಡ ಈ ಬಗ್ಗೆ ಗಮನ ನೀಡಬೇಕು. ಮಕ್ಕಳು ದಾರಿತಪ್ಪದ ರೀತಿ ಎಚ್ಚರಿಕೆ ವಹಿಸಬೇಕು. ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಕಾನೂನು ಪರಿಣಾಮಕಾರಿಯಾಗಿದ್ದು, ಸಮಸ್ಯೆಗಳಾದ ಸಂದರ್ಭ ಸಹಾಯವಾಣಿ ಸಂಪರ್ಕಿಸುವAತೆ ಕರೆ ನೀಡಿದರು