ಮಡಿಕೇರಿ, ಮಾ. ೧೪ : ಜಿಲ್ಲೆಯಲ್ಲಿನ ಮಾಜಿ ಸೈನಿಕರ ಕುಂದುಕೊರತೆ, ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಲು ಸದ್ಯದಲ್ಲಿ ಮಾಜಿ ಸೈನಿಕರ ಅದಾಲತ್ ನಡೆಸಲು ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಭರವಸೆಯಿತ್ತಿದ್ದಾರೆ.

ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಸ್ವಾಗತ ಕೋರಿ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದ ಸಂದರ್ಭ ಅವರು ಆಶ್ವಾಸನೆ ನೀಡಿದರು. ಕಳೆದ ಹಲವಾರು ವರ್ಷಗಳಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಜಿ ಸೈನಿಕರ ಅದಾಲತ್ ಕಾರ್ಯಕ್ರಮವನ್ನೇ ನಡೆಸಲಾಗಿಲ್ಲ. ಅಲ್ಲದೆ, ಜಾಗ ಮಂಜೂರಾತಿ, ನಿವೇಶನ ಮತ್ತಿತರ ಬೇಡಿಕೆಗಳ ಬಗ್ಗೆ ಯಾವುದೇ ಸ್ಪಂದನ ಸಿಗುತ್ತಿಲ್ಲ ಎಂಬ ಬಗ್ಗೆ ಪ್ರಮುಖರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಪ್ರತಿ ಜಿಲ್ಲೆಯಲ್ಲೂ ಸೈನಿಕ ಕಲ್ಯಾಣ ಚಟುವಟಿಕೆಗಳ ಬಗ್ಗೆ ಚರ್ಚಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಜಿಲ್ಲಾ ಸೈನಿಕ ಮಂಡಳಿ ಇದೆ. ಆದರೆ ಆ ಮಂಡಳಿ ಕಳೆದ ಮೂರು ವರ್ಷದಿಂದ ವಿಸರ್ಜನೆಗೊಂಡಿದ್ದು, ಇದರ ಪುನರ್‌ರಚನೆ, ಸರಕಾರಿ ಕಚೇರಿಗಳಲ್ಲಿ ಸೈನಿಕರು ಮತ್ತು ಅವಲಂಬಿತರಿಗೆ ಆದ್ಯತೆ ಮೇರೆಗೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಕ್ರಮವಹಿಸಲಾಗುವುದು. ಮತ್ತಿತರ ಬೇಡಿಕೆಗಳನ್ನು ಈ ಸಂದರ್ಭ ಸಲ್ಲಿಸಲಾಯಿತು.

ಈ ಎಲ್ಲದರ ಬಗ್ಗೆ ಸಮಾಲೋಚಿಸಲು ಅದಾಲತ್ ನಡೆಸಲಿರುವುದಾಗಿ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಆಶ್ವಾಸನೆಯಿತ್ತರು.

ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ, ಪದಾಧಿಕಾರಿಗಳಾದ ಲೇ.ಕ ಕಾವೇರಪ್ಪ, ನಾಚಪ್ಪ, ಕುಟ್ಟಂಡ ನಂದ ವಾಸಪ್ಪ, ಕನ್ನಂಡ ಸುರೇಶ್, ನಾಟೋಳಂಡ ಸೋಮಯ್ಯ, ಮಹೇಶ್ ಸೇರಿದಂತೆ ಸುಮಾರು ೨೦ ಮಂದಿ ಪಾಲ್ಗೊಂಡಿದ್ದರು.