ಕುಶಾಲನಗರ, ಮಾ. ೧೪: ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಶಾಲನಗರದಲ್ಲಿ ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಯಾವುದೇ ಸಂದರ್ಭ ಕಾನೂನು ಉಲ್ಲಂಘನೆಗೆ ಅವಕಾಶ ಕಲ್ಪಿಸಬಾರದು. ಸಂಚಾರಿ ವ್ಯವಸ್ಥೆಗೆ ಸಾರ್ವಜನಿಕರು ಕೈಜೋಡಿಸಿ ಉತ್ತಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

ಪೊಲೀಸರು ನಾಗರಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ಶೂಟಿಂಗ್ ರೇಂಜ್ ನಿರ್ಮಾಣ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾತನಾಡಿ, ಕುಶಾಲನಗರದಲ್ಲಿ ಸಂಚಾರಿ ಪೊಲೀಸ್ ಠಾಣಾ ಕಟ್ಟಡಕ್ಕೆ ಅಂದಾಜು ಮೊತ್ತ ೨ ಕೋಟಿ ೭೨ ಲಕ್ಷ ೫೦ ಸಾವಿರ ರೂಪಾಯಿ ಅನುದಾನ ಕಲ್ಪಿಸಲಾಗಿದ್ದು, ೧೧ ತಿಂಗಳ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ.

ಕಟ್ಟಡದಲ್ಲಿ ನೆಲ ಮಹಡಿ ಮತ್ತು ಮೊದಲನೇ ಮಹಡಿ ಕಾಮಗಾರಿ ನಡೆಯಲಿದ್ದು, ಪೊಲೀಸ್ ಉಪ ನಿರೀಕ್ಷಕರ ಕಚೇರಿ ಸಹಾಯಕ ಪೊಲೀಸ್ ಉಪ ನಿರೀಕ್ಷಕರ ಕಚೇರಿ ಕೊಠಡಿ, ವಯರ್ಲೆಸ್ ಕೊಠಡಿ, ಕಂಪ್ಯೂಟರ್ ರೂಮ್, ಶಸ್ತ್ರಾಗಾರ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಟ್ಟಡ ಹೊಂದಲಿದೆ ಎಂದು ಮಾಹಿತಿ ಒದಗಿಸಿದರು.

ಇದೇ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕುಶಾಲನಗರದಲ್ಲಿ ತಾಲೂಕು ಕಚೇರಿಗಳಿಗೆ ಅಗತ್ಯವಾದ ಸ್ಥಳಗಳನ್ನು ನಿಗದಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಸಮರ್ಪಕವಾದ ಸಂಚಾರಿ ವ್ಯವಸ್ಥೆ ರೂಪಿಸಲು ವಾಹನ ಸವಾರರು ಪೊಲೀಸರೊಂದಿಗೆ ಕೈಜೋಡಿಸಬೇಕಾಗಿದೆ ಎಂದರು.

ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಅರಣ್ಯ ಅಧಿಕಾರಿ ಅಭಿಷೇಕ್, ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್ ಉಪಸ್ಥಿತರಿದ್ದರು.

ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್ ಪೊಲೀಸ್ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಪ್ರದೀಪ್, ಉಪನಿರೀಕ್ಷಕರಾದ ಗಣೇಶ್ ಮೋಹನ್ ರಾಜ್, ಗೀತಾ ಮತ್ತಿತರರು ಇದ್ದರು.

ದಿವ್ಯ ಕಾರ್ಯಕ್ರಮ ನಿರೂಪಿಸಿದರು. ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಸ್ವಾಗತಿಸಿದರು. ಆಶಾ ಪ್ರಾರ್ಥನೆ ಮಾಡಿದರು. ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ವಂದಿಸಿದರು.

ಸ್ಥಗಿತಗೊAಡಿದ್ದ ಕಾಮಗಾರಿ

ಕಳೆದ ನಾಲ್ಕು ವರ್ಷಗಳ ಹಿಂದೆ ಗುಂಡೂರಾವ್ ಬಡಾವಣೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಗೆ ನೂತನ ಕಟ್ಟಡ ನಿರ್ಮಿಸಲು ಭೂಮಿಪೂಜೆ ನಡೆದು ಸುಮಾರು ಎರಡು ಕೋಟಿ ರೂ ವೆಚ್ಚದಲ್ಲಿ ಕಟ್ಟಡದ ಅಡಿಪಾಯ ಮತ್ತು ನೆಲಮಹಡಿ ಕಾಮಗಾರಿ ಪ್ರಗತಿಯಲ್ಲಿದ್ದ ಸಂದರ್ಭ ಅಲ್ಲಿನ ನಾಗರಿಕರು ಬಡಾವಣೆಯಲ್ಲಿ ಪೊಲೀಸ್ ಠಾಣೆ ಕಚೇರಿ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದುದನ್ನು ಇಲ್ಲಿ ಸ್ಮರಿಸಬಹುದು. ಸುಮಾರು ೫೦ ಲಕ್ಷಕ್ಕೂ ಅಧಿಕ ವೆಚ್ಚದ ಕಾಮಗಾರಿ ನಡೆದಿದ್ದು, ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಚಾರಿ ಠಾಣೆ ಕಟ್ಟಡವನ್ನು ಕುಶಾಲನಗರದ ಚಿಕ್ಕಣ್ಣ ಬಡಾವಣೆಗೆ ಸ್ಥಳಾಂತರಿಸಲಾಗಿದೆ. ಗುಂಡೂರಾವ್ ಬಡಾವಣೆಯ ಆ ಸ್ಥಳದಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಕಚೇರಿ ಕಟ್ಟಡ ನಿರ್ಮಿಸಲು ಚಿಂತನೆ ಹರಿಸಲಾಗಿದೆ.