ಕಣಿವೆ, ಮಾ. ೧೫: ಕುಶಾಲನಗರದಲ್ಲಿ ಒಳಚರಂಡಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಮೆಷಿನ್ ಹೋಲ್‌ಗಳನ್ನು ಸೀವರ್ ಸಕ್ಷನ್ ಜೆಟ್ಟಿಂಗ್ ಮೆಷಿನ್ ಅಳವಡಿತ ವಾಹನದ ಮೂಲಕ ಪುರಸಭೆ ಹಾಗೂ ಒಳಚರಂಡಿ ಮಂಡಳಿ ನೌಕರರು ಕುಶಾಲನಗರದ ವಿವಿಧೆಡೆ ಪರಿಶೀಲನೆ ನಡೆಸಿದರು.
ಒಳಚರಂಡಿ ಮೆಷಿನ್ ಹೋಲ್‌ಗಳ ನಿರ್ವಹಣೆಗೆಂದೇ ಮಹಾರಾಷ್ಟçದ ಪುಣೆಯಿಂದ ತರಿಸಿಕೊಂಡ ೩೪ ಲಕ್ಷ ಮೌಲ್ಯದ ವಾಹನದಲ್ಲಿ ಅಳವಡಿತ ಯಂತ್ರದಿAದ ಮೆಷಿನ್ ಹೋಲ್‌ಗಳನ್ನು ಪರಿಶೀಲನೆ ನಡೆಸಲಾಯಿತು.
ಪುಣೆಯಿಂದ ವಾಹನದೊಂದಿಗೆ ಆಗಮಿಸಿದ್ದ ತಜ್ಞ ಬಸವರಾಜು ಎಂಬವರು ಪುರಸಭೆ ಹಾಗೂ ಜಲಮಂಡಳಿ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಹಾಗೂ ನಿರ್ವಹಣೆಗೆ ಮಾಹಿತಿ ನೀಡಿದರು. ಕುಶಾಲನಗರ ಪಟ್ಟಣ, ಮುಳ್ಳುಸೋಗೆ ಹಾಗೂ ಗುಮ್ಮನಕೊಲ್ಲಿ ವ್ಯಾಪ್ತಿಯ ಸುತ್ತಳತೆಯ ಒಟ್ಟು ೭೮ ಕಿ.ಮೀ. ವ್ಯಾಪ್ತಿಯಲ್ಲಿ ೩೧೦೦ ಮೆಷಿನ್ ಹೋಲ್‌ಗಳನ್ನು ನಿರ್ಮಾಣ ಮಾಡಲಾಗಿದ್ದು ಇನ್ನು ಎರಡು ತಿಂಗಳ ಅವಧಿಯೊಳಗೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.
೨೦೧೨ ರಲ್ಲಿ ಆಡಳಿತಾತ್ಮಕ ಅನುಮೋದನೆ
ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾಗೂ ಸುತ್ತಲಿನ ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ನೂರಾರು ಗ್ರಾಮಗಳ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿರುವ ಕುಶಾಲನಗರ ಪಟ್ಟಣದಲ್ಲಿ ಕನಿಷ್ಟ ಹದಿನೈದು ವರ್ಷಗಳ ೨೦೨೭ ರವರೆಗಿನ ಕುಶಾಲನಗರದ ಜನಸಂಖ್ಯೆ ೩೮೬೦೦ ರಷ್ಟು ಜನಸಂಖ್ಯೆ ಹಾಗೂ ೨೦೪೩ ರವರೆಗಿನ ಮೂವತ್ತು ವರ್ಷಗಳ ಜನಸಂಖ್ಯೆ ೬೦೪೦೦ ರಷ್ಟು ಜನಸಂಖ್ಯೆಯನ್ನು ಅಂದಾಜಿಸಿ ಮಹತ್ವದ ಯೋಜನೆಯ ಪಟ್ಟಿಯನ್ನು ತಯಾರಿಸಲಾಗಿತ್ತು.
೨೦೧೨ ರಲ್ಲಿ ರಾಜ್ಯ ಸರ್ಕಾರದ ಶೇ. ೯೫ ಹಾಗೂ ಸ್ಥಳೀಯ ಆಡಳಿತದ ಶೇ.೫ ರಷ್ಟು ಆನುದಾನದ ಒಟ್ಟು ೪೦೧೦ ಲಕ್ಷ ರೂಗಳಿಗೆ ಈ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗಿತ್ತು.
ಯೋಜನೆಯ ವಿವರಗಳು
೨೫/೦೮/೨೦೧೨ ರಲ್ಲಿ ಕುಶಾಲನಗರ ಪಟ್ಟಣದಲ್ಲಿ ಆಡಳಿತಾತ್ಮಕವಾಗಿ ಅನುಮೋದನೆಗೊಂಡ ಈ ಯೋಜನೆಗೆ ೨೨/೦೨/೨೦೧೪ ರಂದು ತಾಂತ್ರಿಕ ಅನುಮೋದನೆ ದೊರಕಿತ್ತು. ೭೧.೮೬೫ ಮೀ. ಸ್ಟೋನ್ ವೆಲ್, ಪಿವಿಸಿಯು ಮತ್ತು ಆರ್‌ಸಿಸಿ ಕೊಳವೆಗಳ ಒಳಚರಂಡಿ ಕೊಳವೆ ಮಾರ್ಗ ಮತ್ತು ೫೬೫೦ ಮನೆಗಳ ಮಲಿನ ನೀರು ಗೃಹ ಸಂಪರ್ಕ ಒದಗಿಸುವುದು. ೨೪೪೯ ರಷ್ಟು ಆಳುಗುಂಡಿಗಳ ನಿರ್ಮಾಣ, ೧೦ ಮೀ. ವ್ಯಾಸದ ೩ ವೆಟ್‌ವೆಲ್ ನಿರ್ಮಾಣ. ೩೦೦ ಮೀಟರ್ ಉದ್ದ, ೩೦೦ ಮೀ. ವ್ಯಾಸದ ಡಿಐ ಏರು ಕೊಳವೆ ಮಾರ್ಗದ ನಿರ್ಮಾಣ. ಎರಡು ಸೆಪ್ಟಿಕ್ ಟ್ಯಾಂಕು. ಒಂದು ಡಿಜಿ ರೂಮ್ ನಿರ್ಮಾಣ. ೪.೬ ಎಂಎಲ್‌ಡಿ ಸಾಮರ್ಥ್ಯದ ಡಬ್ಲ್ಯೂ ಎಸ್‌ಪಿ ತಾಂತ್ರಿಕತೆಯ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ. ೨೫ ಹೆಚ್‌ಪಿ ಸಾಮರ್ಥ್ಯದ ೩, ೫೦ ಹೆಚ್‌ಪಿ ಸಾಮರ್ಥ್ಯದ ೨,೧೦೦ ಹೆಚ್‌ಪಿ ಸಾಮರ್ಥ್ಯದ ೩,೭೫ ಹೆಚ್.ಪಿ.ಯ ೨ ನಾನ್ ಕ್ಲಾಗ್ ಸೀವೇಜ್ ಪಂಪ್ ಸೆಟ್‌ಗಳು. ಕುಶಾಲನಗರ ಚೆಸ್ಕಾಂನಿAದ ಯುಜಿಡಿಯ ವೆಟ್‌ವೆಲ್ ಘಟಕದವರೆಗೆ ೧೧ ಕೆ.ವಿ. ವಿದ್ಯುತ್ ಮಾರ್ಗ ಸಿದ್ಧಪಡಿಸಲಾಗಿತ್ತು. ದುರದೃಷ್ಟವಶಾತ್, ಇದೀಗ ಈ ಯೋಜನೆ ೧೨ ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿದ್ದು ಕುಶಾಲನಗರ ನಾಗರಿಕರಿಗೆ ಈ ಯೋಜನೆ ವ್ಯರ್ಥ ಯೋಜನೆಯಾಗಿ ಕಾಣುತ್ತಿರುವುದರಿಂದ ಜಲಮಂಡಳಿ ಅಧಿಕಾರಿಗಳು ಕೂಡಲೇ ಈ ಯೋಜನೆಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಬಿಟ್ಟು ಕೊಡುವತ್ತ ಗಂಭೀರ ಚಿಂತನೆ ನಡೆಸಬೇಕಿದೆ.