ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಮಾ. ೧೪: ಕೊಡಗು ಮೂಲದ ಯುವಕನೊಬ್ಬ ವಯರ್ ಅನ್ನು ಕುತ್ತಿಗೆಗೆ ಬಿಗಿದು ತನ್ನ ಪ್ರೇಯಸಿಯನ್ನೇ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಆರೋಪಿಯನ್ನು ಪೊನ್ನಂಪೇಟೆ ಸಮೀಪದ ಟಿ ಶೆಟ್ಟಿಗೇರಿ ಗ್ರಾಮದ ಕೆ. ಯಶ್ವಂತ್ ಅಯ್ಯಪ್ಪ(೨೯) ಎಂದು ಗುರುತಿಸಲಾಗಿದ್ದು, ಆತನಿಂದ ಕೊಲೆಯಾದ ಆತನ ಪ್ರೇಯಸಿ ರಂಜಿತಾ (೨೪) ಪೊನ್ನಂಪೇಟೆ ಸಮೀಪದ ಬೆಳ್ಳೂರು ಗ್ರಾಮದವಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಯ್ಯಪ್ಪ ಡ್ರೈ ಫ್ರೂಟ್ಸ್ ಅಂಗಡಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತಿದ್ದು ರಂಜಿತಾ ಡಿ ಮಾರ್ಟ್ ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು. ಅಯ್ಯಪ್ಪನಿಗೆ ಈ ಹಿಂದೆಯೇ ಮದುವೆ ಆಗಿದ್ದು ಹೆಂಡತಿಯನ್ನು ಬಿಟ್ಟಿದ್ದ. ನಂತರ ತನ್ನ ಸಮೀಪದ ಊರಿನವಳೇ ಆಗಿದ್ದ ರಂಜಿತಾ ಜೊತೆ ಸ್ನೇಹವನ್ನು ಬೆಳೆಸಿ ಬಳಿಕ ಪ್ರೀತಿಸುತಿದ್ದ. ನಂತರ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇದ್ದ. ಇಬ್ಬರೂ ಕೊಡತಿ ಬಳಿಯಲ್ಲಿ ಮನೆ ಮಾಡಿಕೊಂಡಿದ್ದರು.

ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ರಂಜಿತಾಗೆ ಡಿ ಮಾರ್ಟ್ನಲ್ಲಿ ಕೆಲಸ ಸಿಕ್ಕಿತ್ತು. ಆದರೆ ರಂಜಿತಾ ತನ್ನನ್ನು ಬೇಗನೆ ಮದುವೆ ಆಗುವಂತೆ ತೀವ್ರ ಒತ್ತಡ ಹಾಕುತ್ತಿದ್ದಳು. ಆದರೆ ಮೊದಲ ಪತ್ನಿಗೆ ವಿಚ್ಚೇದನ ನೀಡಿದ ನಂತರ ಮದುವೆ ಆಗುವುದಾಗಿ ಹೇಳುತ್ತಾ ಆರೋಪಿ ದಿನ ದೂಡುತ್ತಿದ್ದ.

ಇದೇ ವಿಚಾರಕ್ಕೆ ಗುರುವಾರ ರಾತ್ರಿ ೧೨.೩೦ ಗಂಟೆಗೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ಜೋರಾಗುತಿದ್ದಂತೆ ಅಯ್ಯಪ್ಪ ಮನೆಯಲ್ಲಿದ್ದ ತುಂಡು ಕರೆಂಟ್ ವೈರ್ ತೆಗೆದುಕೊಂಡು ರಂಜಿತಾಳ ಕುತ್ತಿಗೆಗೆ ಬಿಗಿದಿದ್ದಾನೆ. ಮೂರು ನಿಮಿಷಗಳಲ್ಲೇ ಆಕೆಯ ಪ್ರಾಣ ಹೋಗಿದೆ. ರಾತ್ರಿ ಎರಡು ಗಂಟೆಯ ಸಮಯದಲ್ಲಿ ಇವರು ಬಾಡಿಗೆಗೆ ಇದ್ದ ಮನೆ ಮಾಲೀಕ ಗೋಪಾಲ್ ಅವರ ಬಳಿ ಹೋಗಿ ತನ್ನ ಪತ್ನಿಗೆ ಲೋ ಬಿಪಿ ಆಗಿ ಕುಸಿದು ಬಿದ್ದಿದ್ದಾಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ನೆರವು ಕೋರಿದ್ದಾನೆ. ಅಲ್ಲದೆ ತಾನು ನಿದ್ರೆ ಮಾಡುತ್ತಿದ್ದಾಗ ಆಕೆ ಆತ್ಮಹತ್ಯೆಗೂ ಪ್ರಯತ್ನಪಟ್ಟಿರುವದಾಗಿಯೂ ವೇಲ್‌ನಿಂದ ಫ್ಯಾನ್‌ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದಳು ಎಂದು ಹೇಳಿದ್ದಾನೆ. ನಂತರ ಆಕೆಯನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.

ನಂತರ ವರ್ತೂರು ಪೊಲೀಸರಿಗೆ ಅವರು ಮಾಹಿತಿ ನೀಡಿದಾಗ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗಲೂ ಆರೋಪಿ ಅಮಾಯಕನ ರೀತಿ ನಟಿಸಿ ಆಕೆ ಬಿಪಿ ಸಮಸ್ಯೆಯಿಂದಾಗಿ ಕುಸಿದು ಬಿದ್ದಳು ಎಂದು ಕಥೆ ಕಟ್ಟಿದ್ದಾನೆ. ಆದರೆ ಶವದ ಕುತ್ತಿಗೆ ಮೇಲೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸ್ಪಷ್ಟವಾಗಿ ಮೂಡಿದ್ದ ಬೆರಳ ಗುರುತಿನಿಂದ ಮತ್ತು ವೈದ್ಯರ ಮೇಲ್ನೋಟದ ಮಾಹಿತಿಯಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಶವದ ಪೋಸ್ಟ್ ಮಾರ್ಟಂಗೆ ವೈದೇಹಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮೇಲ್ನೋಟಕ್ಕೆ ಉಸಿರುಕಟ್ಟಿಸಿ ಕೊಲೆ ಮಾಡಿರುವದನ್ನು ಖಚಿತ ಪಡಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಶವವನ್ನು ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಸೈದುಲು ಅಡಾವತ್ ತಿಳಿಸಿದರು. ರಂಜಿತಾ ತಾಯಿ ಮತ್ತು ಸಹೋದರ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ದ ವರ್ತೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.