ಮಡಿಕೇರಿ, ಮಾ.೧೪: ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಪುಣ್ಯಕ್ಷೇತ್ರ ದೇವಾಲಯಗಳು, ಪ್ರವಾಸಿ ಸ್ಥಳಗಳು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ನಿತಿನ್ ಚಕ್ಕಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಉಪ ವಿಭಾಗಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾ.೧೬ ರಂದು ಜಿಲ್ಲೆಯಾದ್ಯಂತ ಎಲ್ಲಾ ಪ್ರವಾಸಿ ಸ್ಥಳಗಳು ಹಾಗೂ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ವಚ್ಚ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಶುಚಿತ್ವಕ್ಕೆ ಒತ್ತು ನೀಡಲು ತೀರ್ಮಾನಿಸಲಾಯಿತು.
ಆ ದಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ, ಭಾಗಮಂಡಲ, ಪ್ರವಾಸಿ ಸ್ಥಳಗಳಾದ ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತ, ನಾಲ್ಕುನಾಡು ಅರಮನೆ, ರಾಜರ ಗದ್ದುಗೆ, ರಾಜಾಸೀಟು, ಕೋಟೆ, ಅಬ್ಬಿ ಜಲಪಾತ, ಚೇಲಾವರ ಜಲಪಾತದಲ್ಲಿ ಶುಚಿತ್ವ ಕಾರ್ಯ ನಡೆಯಲಿದೆ.
ಕುಶಾಲನಗರ ತಾಲೂಕಿನ ದುಬಾರೆ ರಿವರ್ ರ‍್ಯಾಫ್ಟಿಂಗ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಹಾರಂಗಿ ಉದ್ಯಾನವನ ಆನೆ ಶಿಬಿರ ಮತ್ತು ಹಿನ್ನೀರಿನ ಸಾಹಸ ಕ್ರೀಡೆ ಸ್ಥಳಗಳು, ಚಿಕ್ಲಿ ಹೊಳೆ. ಸೋಮವಾರಪೇಟೆ ತಾಲೂಕಿನ ಹೊನ್ನಮ್ಮ ಕೆರೆ, ಮಕ್ಕಳ ಗುಡಿ ಬೆಟ್ಟ, ಕೋಟೆ ಬೆಟ್ಟ, ಸೂರ್ಲಬ್ಬಿ ಜಲಪಾತ ಮತ್ತು ಮಲ್ಲಳ್ಳಿ ಜಲಪಾತ. ಹಾಗೆಯೇ ಪೊನ್ನಂಪೇಟೆ ತಾಲೂಕಿನ ಬರಹೊಳೆ ರಿವರ್ ರ‍್ಯಾಫ್ಟಿಂಗ್ ಮತ್ತು ಇರ್ಪು ಜಲಪಾತ ಇಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ.
ಹಾಗೆಯೇ ಮಡಿಕೇರಿ ನಗರದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವಿರಾಜಪೇಟೆ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ(ಮಂಗಳೂರು ರಸ್ತೆ), ಮಡಿಕೇರಿ-ಸಿದ್ದಾಪುರ ರಸ್ತೆ ಮತ್ತು ಮಡಿಕೇರಿ-ಮೈಸೂರು ರಸ್ತೆ ಈ ವ್ಯಾಪ್ತಿಯ ೨ ಕಿ,.ಮೀ ವರೆಗೆ ಸ್ವಚ್ಛತಾ ಅಭಿಯಾನ ನಡೆಯಲಿದೆ.
ಕುಶಾಲನಗರದಲ್ಲಿ ಕೊಪ್ಪ ಗೇಟಿನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ, ಸೋಮೇಶ್ವರ ದೇವಸ್ಥಾನದಿಂದ ಕೋಣಮಾರಮ್ಮ ದೇವಸ್ಥಾನ ವೃತ್ತದ ಮುಖಾಂತರ ಐಬಿ ರಸ್ತೆಗಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ, ತಾವರೆಕೆರೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಕೆಎಸ್‌ಆರ್‌ಸಿ ಬಸ್ ನಿಲ್ದಾಣದವರೆಗೆ ಅಭಿಯಾನ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಿತಿನ್ ಚಕ್ಕಿ ಅವರು ಸ್ವಚ್ಛ ಹಾಗೂ ಸುಂದರ ಕೊಡಗು ಹೆಸರಿನಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಹಲವರ ಸಹಕಾರದಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಟೂರ್ ಅಂಡ್ ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷ ವಸಂತ, ಜಿಲ್ಲಾ ಚೇಂಬರ್ ಆಪ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲರೂ ಸಹಕರಿಸುವಂತೆ ಕೋರಿದರು.
ತಹಶೀಲ್ದಾರ್ ಶ್ರೀಧರ, ಎಫ್‌ಎಂಸಿ ಕಾಲೇಜಿನ ಪ್ರಾಂಶುಪಾಲರಾದ ರಾಘವ, ದುಬಾರೆ ರಿವರ್ ರ‍್ಯಾಫ್ಟಿಂಗ್ ಅಸೋಷಿಯೇಷನ್ ಅಧ್ಯಕ್ಷ ಉತ್ತಪ್ಪ, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಕಾಲೇಜಿನ ಪ್ರಾಂಶುಪಾಲರು, ವಿವಿಧ ದೇವಾಲಯಗಳ ಕಾರ್ಯ ನಿರ್ವಹಣಾಧಿಕಾರಿಗಳು ಇತರರು ಇದ್ದರು.