ಸಿದ್ದಾಪುರ, ಮಾ ೧೩: ಮಾನವನ ಮೇಲೆ ದಾಳಿ ಮಾಡುತ್ತಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾದರು.
ಪುಂಡಾನೆಯನ್ನು ಸೆರೆ ಹಿಡಿಯುವಂತೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದರು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಶುಕ್ರವಾರದಂದು ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿದರು. ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಚೌರಿರ ಗಣಪತಿ ಅವರನ್ನು ಹಾಡಹಗಲೇ ಕಾಫಿ ತೋಟದೊಳಗೆ ಒಂಟಿ ಸಲಗ ದಾಳಿ ನಡೆಸಿ ಕೊಂದು ಹಾಕಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ .ಎಸ್.ಪೊನ್ನಣ್ಣ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಉಪಟಳ ನೀಡುತ್ತಿರುವ ಕಾಡಾನೆಯನ್ನು ವೈಜ್ಞಾನಿಕವಾಗಿ ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದ್ದರು. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಸಿದ್ದಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವ್ರಷ್ಣಿ, ಹಾಗೂ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ಶುಕ್ರವಾರ ಬೆಳಗಿನಿಂದಲೇ ಸಾಕಾನೆಗಳಾದ ಅಯ್ಯಪ್ಪ, ಹರ್ಷ, ಧನಂಜಯ, ಸುಗ್ರೀವ ಪ್ರಶಾಂತ್, ಕಂಜನ್, ಈ ಆರು ಆನೆಗಳ ನೆರವಿನಿಂದ ಬೆಳಗಿನಿಂದಲೇ ಕಾರ್ಯಾಚರಣೆ ನಡೆಸಿದರು. ಮಾನವನ ಮೇಲೆ ದಾಳಿ ನಡೆಸುತ್ತಿರುವ ಒಂಟಿ ಸಲಗವನ್ನು ಕಾರ್ಯಾಚರಣೆ ತಂಡವು ಅದರ ಚಲನವಲನವನ್ನು ಪತ್ತೆಹಚ್ಚಿದ್ದರು.
ಇಂಜಿಲಗೆರೆ ಭಾಗದಿಂದ ಕಾರ್ಯಾಚರಣೆ ತಂಡವು ಬೆಳಿಗ್ಗೆ ಪೂಜೆ ಮಾಡಿ ಬಳಿಕ ಕಾರ್ಯಾಚರಣೆ ಪ್ರಾರಂಭಿಸಿತು. ಆದರೆ ಒಂಟಿ ಸಲಗ ಕಾರ್ಯಾಚರಣೆ ತಂಡವನ್ನು ಕಂಡ ಕೂಡಲೇ ವೇಗವಾಗಿ ಓಡಲು ಆರಂಭಿಸಿತು. ಅಮ್ಮತ್ತಿ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಭಾಗದಿಂದ ಪಾಲಿಬೆಟ್ಟ ಭಾಗಕ್ಕೆ ಕಾಫಿ ತೋಟಗಳ ನಡುವೆ ತೆರಳಿದ ಸಲಗದ ಹಿಂದೆಯೇ ಕಾರ್ಯಾಚರಣೆ ತಂಡದ ಸಾಕಾನೆಗಳು ತೆರಳಿದವು. ಮೊದಲಿಗೆ ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಅನುಭವಿ ಶಾರ್ಪ್ ಶೂಟರ್ ಉಪವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಅವರು ಪ್ರಶಾಂತ್ ಹಾಗೂ ಸುಗ್ರೀವ ಆನೆಗಳನ್ನು ಏರಿ ಕಾಫಿ ತೋಟದೊಳಗೆ ಸುತ್ತಾಡಿದರು. ಇವರ ಹಿಂದೆ ಇನ್ನಿತರ ನಾಲ್ಕು ಆನೆಗಳು ಕೂಡ ಹಿಂಬಾಲಿಸಿಕೊAಡು ಕಾರ್ಯಾಚರಣೆ ತಂಡದ ಅಧಿಕಾರಿಗಳೊಂದಿಗೆ ಮತ್ತು ಸಿಬ್ಬಂದಿಗಳೊAದಿಗೆ ಸುಮಾರು ದೂರದವರೆಗೆ ಸಲಗವನ್ನು ಹಿಂಬಾಲಿಸಿಕೊAಡು ತೆರಳಿದರು. ಆದರೆ ಸಲಗವು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸುತ್ತಾ ಕಾರ್ಯಾಚರಣೆ ತಂಡವನ್ನು ಉರಿಬಿಸಿಲಿನ ನಡುವೆ ಸುತ್ತಾಡಿಸಿ ಸುಸ್ತುಭರಿಸಿತು.
ಕಾರ್ಯಾಚರಣೆ ತಂಡವನ್ನು ದಿಕ್ಕು ತಪ್ಪಿಸಿ ಸಲಗವು ವೇಗವಾಗಿ ಓಡಲು ಆರಂಭಿಸಿತು ಎಂದು ಕಾರ್ಯಚರಣೆ ತಂಡದ ಸಿಬ್ಬಂದಿಗಳು ಮಾಹಿತಿ ನೀಡಿದರು. ಕಾಡಾನೆ ಅಮ್ಮತ್ತಿ ಭಾಗದಿಂದ ಸುತ್ತಾಡಿಕೊಂಡು ಬಳಿಕ ಖಾಸಗಿ ಸಂಸ್ಥೆಗಳ ಎಮ್ಮೆ ಗುಂಡಿ ಭಾಗಕ್ಕೆ ತೆರಳಿತು. ನಂತರ ಬಾಡಗ- ಬಾಣಂಗಾಲ ಗ್ರಾಮದ ಮಠ ಭಾಗದ ಕಾಫಿ ತೋಟಗಳ ಒಳಗೆ ಲಗ್ಗೆ ಇಟ್ಟಿತು. ಬಳಿಕ ಇಂಜಿಲಗೆರೆಯ ಭಾಗಕ್ಕೆ ತೆರಳಿತು. ಸುಮಾರು ೨೫ ಕಿ.ಮೀ ದೂರಗಳವರೆಗೆ ಕಾರ್ಯಾಚರಣೆ ತಂಡವನ್ನು ಸುತ್ತಾಡಿಸಿದ ಸಲಗವನ್ನು ಸೆರೆ ಹಿಡಿಯುವ ಛಲದಿಂದ ಕಾರ್ಯಾಚರಣೆ ತಂಡವು ಅರವಳಿಕೆ ಔಷಧಿಯೊಂದಿಗೆ ಕಾರ್ಯಾಚರಣೆಯನ್ನು ಮುಂದುವರೆಸಿತು.
ಈ ಸಂದರ್ಭದಲ್ಲಿ ಸಲಗವು ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ಗ್ರಾಮದ ಗೇರ್ ಮೊರ್ ಕಾಫಿ ತೋಟದೊಳಗೆ ಪತ್ತೆಯಾಯಿತು. ಕೂಡಲೆ ಶೂಟರ್ ರಂಜನ್ ಅವರು ಅರೆವಳಿಕೆ ಔಷಧಿಯನ್ನು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಕಾಡಾನೆಯು ಸುಮಾರು ದೂರದವರೆಗೆ ಓಡಿ ಕಾಫಿ ತೋಟದೊಳಗೆ ನೆಲಕ್ಕೆ ಉರುಳಿ ಬಿದ್ದಿತ್ತು ತಕ್ಷಣವೇ ಸಾಕಾನೆಗಳ ನೆರವಿನಿಂದ ಕಾಲಿಗೆ ಹಗ್ಗ ಕಟ್ಟಿ ಎಳೆದು ತರಲಾಯಿತು. ಕಾಫಿ ತೋಟದಿಂದ ಹೊರಕ್ಕೆ ಬರಲು ಸಲಗವು ಹಿಂದೇಟು ಹಾಕಿತು. ಕಾರ್ಯಾಚರಣೆಯಲ್ಲಿ ಸುಮಾರು೧೨೦ಕ್ಕೂ ಅಧಿಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್, ಮಡಿಕೇರಿ ವಿಭಾಗದ ಡಿ ಸಿ ಎಫ್ ಅಭಿಷೇಕ್, ಎ.ಸಿ.ಎಫ್.ಗಳಾದ ಗೋಪಾಲ್, ತಾಸಿಂ ಬಾನು, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ಉಪವಲಯ ಅರಣ್ಯ ಅಧಿಕಾರಿಗಳು, ಆರ್ .ಆರ್. ಟಿ .ಮತ್ತು ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಉತ್ತಪ್ಪ, ಬಿಜೆಪಿ ಮುಖಂಡ ಕುಟ್ಟಂಡ ಅಜಿತ್ ಕರುಂಬಯ್ಯ, ಇನ್ನಿತರರು ಹಾಜರಿದ್ದರು.
-ಚಿತ್ರ ವರದಿ ವಾಸು ಎ.ಎನ್.