ಮಡಿಕೇರಿ, ಮಾ. ೧೩: ಒಬ್ಬ ವ್ಯಕ್ತಿಯ ಬದುಕಿಗೆ ಜ್ಞಾನ ಎಂಬದು ಅಗತ್ಯಗತ್ಯ. ಈ ಜ್ಞಾನ ಪುಸ್ತಕಗಳ ಮೂಲಕ ಹೆಚ್ಚಾಗಿ ಸಿಗಲಿದೆ. ಕೊಡವ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುವ ಚಿಂತನೆ - ಪ್ರಯತ್ನ ಬದಲಾವಣೆ ಪೂರಕವಾಗಲಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರು ಅಭಿಪ್ರಾಯಪಟ್ಟರು.
ಅಕಾಡೆಮಿಯ ನೂತನ ಯೋಜನೆಯಾದ ಕೊಡವ ಪುಸ್ತಕ ಪತ್ತಾಯ ಸ್ಥಾಪನೆಯ ಐದನೇ ಹೆಜ್ಜೆಯ ಕಾರ್ಯಕ್ರಮ ನಿನ್ನೆ ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಅಂಡ್ ಸೋಸಿಯಲ್ ವೆಲ್‌ಫೇರ್ ಸೆಂಟರ್‌ನಲ್ಲಿ ನಡೆಯಿತು. ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದ ಅವರು, ಕೊಡವ ಜನಾಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಸಾಹಿತಿಕ ಹಾಗೂ ಸಾಂಸ್ಕೃತಿಕವಾದ ಬದಲಾವಣೆಗಳು ಒಂದು ಉತ್ತಮ ಬೆಳವಣಿಗೆಯಾಗಿ ಪರಿಣಮಿಸುತ್ತಿದೆ.
ಕೊಡಗಿನಲ್ಲಿರುವ ಬಲ್ಯಮನೆಗಳು, ಸಮಾಜಗಳು, ಸಂಘ-ಸAಸ್ಥೆ ಹಾಗೂ ಅಸೋಸಿಯೇಶನ್‌ಗಳಲ್ಲಿ ‘ಕೊಡವ ಪುಸ್ತಕ ಪತ್ತಾಯ’ ತೆರೆಯುಲು ಸ್ವತಃ ಮುಂದೆ ಬರುತ್ತಿರುವುದು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜನಾಂಗದಲ್ಲಿ ಸಾಹಿತ್ಯ ಪರ ಚಿಂತನೆಯನ್ನು ತೋರ್ಪಡಿಸುತ್ತಿದೆ. ಇವೆಲ್ಲವು ಒಂದು ರೀತಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಯೋಜನೆಗಳಿಂದ ಆಗುತ್ತಿರುವ ಬದಲಾವಣೆಯಾಗಿದ್ದು, ಜನರಲ್ಲಿ ಸಾಹಿತ್ಯದತ್ತ ಒಲವು ಮೂಡಿಸಲು ಕಾರಣವಾಗಿದೆ. ನಡಿಕೇರಿಯಂಡ ಚಿಣ್ಣಪ್ಪನವರು ಬರೆದ ಪಟ್ಟೋಲೆ ಪಳಮೆ ಪುಸ್ತಕವು ಸಂಸ್ಕೃತಿ, ಭಾಷೆ, ಸಾಹಿತ್ಯವನ್ನು ಹೊಂದಿರುವ ಬೃಹತ್ ಗ್ರಂಥವಾಗಿ ನಮ್ಮೊಂದಿಗೆ ಶಾಶ್ವತವಾಗಿದೆ. ಹಿಂದಿನ ಕಾಲದ ಜನರ ದೇಹವೇ ಒಂದು ಗ್ರಂಥಾಲಯವಾಗಿತ್ತು. ಅದರ ರೂಪವೇ ಈ ಪಟ್ಟೋಲೆ ಪಳಮೆಯಾಗಿದೆ ಎಂದರು. ಒಬ್ಬ ಮನುಷ್ಯನು ಪುಸ್ತಕ ಪ್ರೇಮಿಯಾಗಿದ್ದರೆ ಮಾತ್ರ ಆತನು ಬೇರೊಬ್ಬರ ಮುಂದೆ ನಿಂತು ಧೈರ್ಯದಿಂದ ಮಾತನಾಡುವ ಶಕ್ತಿಯನ್ನು ಹೊಂದಿರುತ್ತಾನೆ. ಕೊಡವ ಸಾಹಿತ್ಯ ಅಕಾಡೆಮಿಯು ಬಹಳ ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಸಂಸ್ಥೆಯಾಗಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು. ಕೊಡವರಿಗಾಗಿ ‘ಕೊಡವ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಲಾಗಿದ್ದ, ಇದನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.
ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ಅಧ್ಯಕ್ಷರಾದ ಮುಳ್ಳಂಡ ರತ್ತು ಚಂಗಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಜಿಲ್ಲಾ ಸಮನ್ವಯ ಅಧಿಕಾರಿಗಳಾದ ಅಜ್ಜಿಕುಟ್ಟಿರ ಸೌಮ್ಯ ಪೊನ್ನಪ್ಪ ಅವರು ಮಾತನಾಡಿ ಜನರಿಗೆ ಹಾಗೂ ಪುಸ್ತಕಾಭಿಮಾನಿಗಳಿಗೆ ಮನಮುಟ್ಟುವಂತೆ ಸಾಹಿತ್ಯವನ್ನು ಬೆಳೆಸುವ ಯೋಜನೆ ಶ್ಲಾಘನೀಯ. ಸಾಹಿತ್ಯ ಎಂದರೆ ಪುಸ್ತಕವನ್ನು ಓದಿ ಜ್ಞಾನವನ್ನು ವೃದ್ದಿಸಿಕೊಳ್ಳುವಂತದ್ದು ಇದರೊಂದಿಗೆ ಕಲ್ಪನಾಶಕ್ತಿಯೂ ಹೆಚ್ಚುತ್ತದೆ. ಓದುಗರು ಹೆಚ್ಚಿದ್ದರೆ ಬರಹಗಾರರಿಗೆ ಇನ್ನೂ ಹೆಚ್ಚು ಬರೆಯುವ ಆಸಕ್ತಿಯು ಹೆಚ್ಚುತ್ತದೆ. ಪ್ರತಿ ಪುಸ್ತಕವು ನಮ್ಮಂತವರಿಗೆ ಕಲಿಕೆಯಾಗುತ್ತದೆ. ನಮ್ಮಲ್ಲಿಯೇ ಒಬ್ಬ ಬರಹಗಾರರು ಇರುತ್ತಾರೆ, ಆದರೆ ನಮಗೆ ತಿಳಿಯುವುದಿಲ್ಲ. ಪುಸ್ತಕಗಳನ್ನು ಓದಿ ತದನಂತರ ಅದರ ಬಗ್ಗೆ ಇರುವ ಮಾಹಿತಿಯನ್ನು ಮೊಬೈಲ್ (ರೀಲ್ಸ್)ಗಳ ಮೂಲಕ ವಿವರಿಸುವಂತಾದರೆ ಇನ್ನೂ ಹೆಚ್ಚಿನ ಜನರಿಗೆ ನಮ್ಮ ಭಾಷೆಯು ತಲುಪುತ್ತದೆ. ಅಕಾಡೆಮಿಯು ನಡೆಸುತ್ತಿರುವ ಈ ಯೋಜನೆಯು ಬಹಳ ಉಪಯುಕ್ತವಾಗಿದೆ. ಇನ್ನೂ ಮುಂದೆಯೂ ಹೀಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಮುದ್ರಿಸಿ ಬಿಡುಗಡೆಗೊಳಿಸುವಂತಾಗಲಿ ಎಂದು ಆಶಿಸಿದರು.
ಬರಹಗಾರ್ತಿ ಐಚಂಡ ರಶ್ಮಿ ಮೇದಪ್ಪ ಅವರು ಮಾತನಾಡಿ ಪತ್ತಾಯ ಎಂದರೆ ಸಂಗ್ರಹ / ಶೇಖರಣೆ ಎಂದು ಅರ್ಥ. ಅಕಾಡೆಮಿಯು ಇಂತಹ ಒಂದು ಹೊಸ ಯೋಜನೆಯನ್ನು ನಡೆಸುತ್ತಿದೆ. ಇದನ್ನು ಜ್ಞಾನ ಪತ್ತಾಯ ಎಂದೂ ಹೇಳಬಹುದು. ಇನ್ನೂ ಹೆಚ್ಚು ಅಧ್ಯಯನ ಪುಸ್ತಕಗಳನ್ನು ಹೊರತರುವಂತಾಗಬೇಕು. ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ಕೊಡವ ಭಾಷೆಯೂ ಒಂದಾಗಿದೆ. ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ನಾವು ಆದಷ್ಟು ಸಭೆ ಸಮಾರಂಭಗಳಲ್ಲಿ ಕೊಡವ ಭಾಷೆ ಮಾತನಾಡುವುದು, ಕೊಡವ ಪುಸ್ತಕ ಓದುವುದು, ಕೊಡವ ಪತ್ರಿಕೆಗಳನ್ನು ಓದುವುದು ಹೆಚ್ಚಾಗಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರತ್ತು ಚಂಗಪ್ಪ ಆಧುನಿಕತೆಯು ಮೊಬೈಲ್ ಬಳಕೆಯಿಂದ ಪುಸ್ತಕದ ಕಡೆ ತಿರುಗಿ ನೋಡದಂತಾಗಿದೆ. ಈ ಪರಿಸ್ಥಿತಿಯಲ್ಲಿ ಕೊಡವ ಅಕಾಡೆಮಿಯು ಮನೆ ಮನೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ವೆಲ್ಫೇರ್ ಸೆಂಟರ್‌ನಲ್ಲಿ ಪ್ರತ್ಯೇಕವಾದ ವಾಚನಾಲಯವನ್ನು ಈ ಮೂಲಕ ಸ್ಥಾಪಿಸಲು ಚಿಂತಿಸಲಾಗುವುದು ಎಂದರು.
ಸರ್ವರಿಗೂ ಮಡಿಕೇರಿಯ ಕೊಡವ ಸಮಾಜ ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ವತಿಯಿಂದ ಲಘು ಉಪಹಾರವನ್ನು ಏರ್ಪಡಿಸಲಾಗಿತ್ತು. ಮಡಿಕೇರಿಯ ಕೊಡವ ಸಮಾಜ ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ಅಧ್ಯಕ್ಷರು ಪುಸ್ತಕ ಪತ್ತಾಯದ ನೋಂದಣಿ ಬಾಪ್ತು ರೂ. ೧೦ ಸಾವಿರಗಳನ್ನು ಅಕಾಡೆಮಿಗೆ ನೀಡಿದರು. ಕೊಡವ ಪುಸ್ತಕ ಪತ್ತಾಯ ನೋಂದಣಿ ಪತ್ರವನ್ನು ಅಕಾಡೆಮಿಯ ಅಧ್ಯಕ್ಷರು ಕೊಡವ ಸಮಾಜ ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ಇವರಿಗೆ ಹಸ್ತಾಂತರಿಸಿದರು.
ಅಕಾಡೆಮಿಯ ಸದಸ್ಯರಾದ ಕಂಬೆಯAಡ ಡೀನಾ ಬೋಜಣ್ಣ, ಕುಡಿಯರ ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ನಾಪಂಡ ಗಣೇಶ್, ಪೊನ್ನಿರ ಗಗನ್ ಚೊಟ್ಟೆಯಂಡ ಸಂಜು ಕಾವೇರಪ್ಪ ಅರೆಕಾಡು-ಹೊಸ್ಕೇರಿ ಕೊಡವ ಭವನದ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ, ಚೆಯ್ಯಂಡ ಸತ್ಯ ಗಣಪತಿ, ಸಾಹಿತಿ ಅಲ್ಲಾರಂಡ ವಿಠಲ್ ನಂಜಪ್ಪ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ, ಕಾರ್ಯದರ್ಶಿ ಕೂಪದಿರ ಜೂನಾ ವಿಜಯ್, ಕೊಡವ ಸಮಾಜದ ನಿರ್ದೇಶಕ ಮೂವೆರ ಜಯರಾಂ, ಕೊಡವ ಸಮಾಜ ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ಪದಾದಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ಅರೆಕಾಡು ಕೊಡವ ಭವನದಲ್ಲಿ ಸ್ಥಾಪಿಸಿದ ಪುಸ್ತಕ ಪತ್ತಾಯದ ಬಾಪ್ತು ರೂ.೧೦ ಸಾವಿರದ ಚೆಕ್ಕನ್ನು ಜಯಾ ಚಿಣ್ಣಪ್ಪ ಅವರು ಕೊಡವ ಅಕಾಡೆಮಿಗೆ ನೀಡಿದರು.
ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ಖಜಾಂಚಿ ಬೊಪ್ಪಂಡ ಶ್ಯಾಮ್ ಪೂಣಚ್ಚ ಸರ್ವರನ್ನು ಸ್ವಾಗತಿಸಿದರು. ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷರಾದ ಕನ್ನಂಡ ಕವಿತಾ ಬೊಳ್ಳಪ್ಪನವರು ಪ್ರಾರ್ಥಿಸಿ, ಅಕಾಡೆಮಿಯ ಸದಸ್ಯ ಕೊಂಡಿAಜಮ್ಮನ ಬಾಲಕೃಷ್ಣ ನಿರೂಪಿಸಿ, ವಂದಿಸಿದರು.