ಕಡಂಗ, ಮಾ. ೧೩: ಎಮ್ಮೆಮಾಡು ಹಳರಮಿ ಯೂತ್ ವಾಯ್ಸ್ ವತಿಯಿಂದ ಗ್ರಾಂಡ್ ಇಫ್ತಾರ್ ಸಂಗಮವನ್ನು ಎಮ್ಮೆಮಾಡು ಖಿಳಿರಿಯ್ಯ ಜುಮಾ ಮಸೀದಿ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.

ಸೌಹಾರ್ದತೆ ಮತ್ತು ಧಾರ್ಮಿಕ ಏಕತೆಯನ್ನು ಸಾರುವ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಾರ್ವಜನಿಕರು ಹಾಗೂ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಸಯ್ಯದರುಗಳು, ಉಲಮಾ ಮತ್ತು ಉಮಾರಾ ನಾಯಕರು ಭಾಗವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಭಾಷಣವನ್ನು ಅಶ್ರಫ್ ಜವುಹರಿ ನಿರ್ವಹಿಸಿದರು.

ಇಫ್ತಾರ್ ಸಂಗಮದಲ್ಲಿ ಜುಮಾ ಮಸೀದಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಅಬೂಬಕರ್ ಸಕಾಫಿ, ಕಾರ್ಯದರ್ಶಿ ಜಕರಿಯ ಸಹದಿ, ಸ್ಥಳೀಯ ಮಸೀದಿಯ ಖತೀಬರಾದ ಹಾಫಿಜ್ ಅಬ್ದುಲ್ ರಾಜಿಕ್ ಫೈಜಿ ಹಾಗೂ ಶಹೀದಿಯ್ಯ ಅನಾಥಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಾಧುಲಿ ಹಾಜಿ, ಕಾರ್ಯದರ್ಶಿ ಮೊಯಿದು, ವಿವಿಧ ಮದರಸಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯುವಜನತೆಯ ಈ ಕಾರ್ಯವನ್ನು ಶ್ಲಾಘಿಸಿದರು. ಸಂಜೆ ಇಫ್ತಾರ್ ಅವಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಳಿಸಲಾಯಿತು.