ಮಡಿಕೇರಿ, ಮಾ. ೧೩: ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ, ನೀರು, ಕಾಡು, ಪರಿಸರಗಳನ್ನು ಪೂಜಿಸುವುದು ಮತ್ತು ವೀರ ಪರಂಪರೆ ಇವು ಕೊಡಗಿನ ಸಂಸ್ಕೃತಿ ಎಂದು ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಧೋಶ್ ಪೂವಯ್ಯ ನುಡಿದರು. ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ೨೦೨೫-೨೬ನೇ ಸಾಲಿನ ದಿ. ಇರುವೈಲು ರಘುರಾಮ ಅಸ್ರಣ್ಣ ಮತ್ತು ಲೀಲಾ ಅಸ್ರಣ್ಣ ಜ್ಞಾಪಕಾರ್ಥ ದತ್ತಿ ಕಾರ್ಯಕ್ರಮದ ಆಶಯದಂತೆ ಕೊಡಗಿನ ಸಾಂಸ್ಕೃತಿಕ ಚಿಂತನೆ ಕುರಿತು ಉಪನ್ಯಾಸ ನೀಡುತ್ತಿದ್ದರು.
ಕೊಡಗಿನ ಬೇರೆ ಬೇರೆ ಜನಾಂಗಗಳು ತಮ್ಮದೇ ಆದ ರೀತಿಯಲ್ಲಿ ಜನಪದ ಹಾಡು ಮತ್ತು ನೃತ್ಯಗಳ ಮೂಲಕ ಕೊಡಗಿನ ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ. ಕೊಡವ ಜನಾಂಗದ ದುಡಿಕೊಟ್ಟ್ ಪಾಟ್, ಬಾಳೋಪಾಟ, ಮಂಗಲಪಾಟ್, ದೇವಡಪಾಟ್, ಬೆಂದುಪಾಟ್, ಕೊಡಗಿನ ಜಾನಪದ ನೃತ್ಯಗಳಾದ ಉಮ್ಮತ್ತಾಟ್, ಬೊಳ್ಕಾಟ್, ಕತ್ತಿಯಾಟ್, ಪುತ್ತರಿ ಕೋಲಾಟ್ ಮುಂತಾದ ಸಮರಕಲೆಗಳು, ಅರೆ ಭಾಷೆ ಜನಾಂಗದವರ ಸೋಬಾನೆ ಹಾಡು, ಒಕ್ಕಲಿಗ ಜನಾಂಗದ ಸಿಡಿಯಾಟ್, ಸುಗ್ಗಿ ಕುಣಿತ, ಯರವ ಮತ್ತು ಕುರುಬರ ಹಾಡು ಮತ್ತು ನೃತ್ಯಗಳು ಅಲ್ಲದೆ ಹೊರ ಜಿಲ್ಲೆಗಳಿಂದ ಬಂದು ನೆಲೆ ನಿಂತಿರುವ ಹಲವಾರು ಜನಾಂಗಗಳು ಕೊಡಗಿನ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಗಳನ್ನು ನೀಡಿದೆ. ರಂಗಭೂಮಿ ಮತ್ತು ಜನಪದ ರಂಗಭೂಮಿ, ಸಿನೆಮಾ ಕೂಡ ಕೊಡಗಿನ ಸಾಂÀಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಗಳನ್ನು ಅಭಿವೃದ್ಧಿ ಗೊಳಿಸುವ ಕಾರ್ಯಕ್ರಮಗಳನ್ನು ನಡೆಸುವುದೇ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮಗಳ ಧ್ಯೇಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋಣಿಕೊಪ್ಪಲು ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕೆ ಚಿನ್ನಪ್ಪ ಅವರು ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕೊಡಗಿನ ಸಂಸ್ಕೃತಿಯ ಪರಿಚಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದ ವಿಚಾರ ಎಂದರು.
ದತ್ತಿದಾನಿಗಳ ಆಶಯದಂತೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ೨೦೨೪-೨೫ ನೇ ಸಾಲಿನ ೧೦ನೇ ತರಗತಿಯ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋಮವಾರಪೇಟೆ ತಾಲೂಕಿನ ನೀಡ್ತ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ.ಎಸ್. ಪೂರ್ವಿಕ ಅವರನ್ನು ಗೌರವಿಸಲಾಯಿತು.
ಗೋಣಿಕೊಪ್ಪಲು ಪ್ರೌಢಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಕುಪ್ಪಂಡ ಗಣೇಶ ತಿಮ್ಮಯ್ಯ, ಶಾಲೆಯ ಪ್ರಾಂಶುಪಾಲ ಕೃಷ್ಣ ಚೈತನ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ನಾಡು ನುಡಿಯ ಪರಿಚಯದ ಜೊತೆಗೆ ಸಾಮಾನ್ಯ ಜ್ಞಾನದ ಕುರಿತು ಅಭ್ಯಾಸ ಮಾಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಮೊಬೈಲ್‌ನಿಂದ ಹೊರಬಂದು ಗ್ರಂಥಾಲಯದ ಕಡೆಗೆ ಮುಖ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಟಿ ಆರ್ ವಿನೋದ್ ಪೂರ್ವಿಕಾ ಅವರ ಪೋಷಕರಾದ ಸುರೇಶ್ ಮತ್ತು ಲೀಲಾ ಉಪಸ್ಥಿತರಿದ್ದರು. ಗೋಣಿಕೊಪ್ಪಲು ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಅಧ್ಯಾಪಕರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.