ಮಡಿಕೇರಿ, ಮಾ. ೧೨: ಇನ್ನೆರಡು ವರ್ಷಗಳಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನೆಲದಾಳದ ಮೂಲಕ (ಅಂಡರ್‌ಗ್ರೌAಡ್) ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪುಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಭರವಸೆ ನೀಡಿದ್ದಾರೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜು ಸಮಸ್ಯೆ ಬಗ್ಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಪ್ರಸ್ತಾಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ನೆಲದಾಳದ ಕೇಬಲ್ ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭಿಸುವAತೆ ಆದೇಶ ನೀಡಲಾಗುವುದು. ೨ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಮಡಿಕೇರಿ ನಗರದಲ್ಲಿ ಮಳೆಗಾಲದಲ್ಲಿ ಸಂಭವಿಸುವ ವಿದ್ಯುತ್ ವ್ಯತ್ಯಯ ಬಗ್ಗೆ ಗಮನ ಸೆಳೆದ ಮಂತರ್, ಪ್ರತಿ ವರ್ಷ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿಯೇ ಸುಮಾರು ೩೦ ಕಂಬಗಳು ನೆಲಸಮವಾಗುತ್ತವೆ. ಅಧಿಕ ಗಾಳಿಯಿಂದ ಈ ರೀತಿ ಆಗುತ್ತದೆ. ೩೦ ಕಡೆಗಳಲ್ಲಿ ಕಟ್ಟಡ ಇತ್ಯಾದಿ ಸ್ಥಳಗಳ ಬಳಿ ಅಪಾಯಕಾರಿ ರೀತಿ ವಿದ್ಯುತ್ ಲೈನ್‌ಗಳು ಹಾದುಹೋಗಿವೆ. ಈ ಕಾರಣದಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಅಧಿಕ ಹಾನಿಯುಂಟಾಗಿ ವಿದ್ಯುತ್ ಸರಬರಾಜು ಹಾಗೂ ಈ ಮೂಲಕ ನೀರಿನ ಸರಬರಾಜಿಗೂ ತೊಂದರೆ ಆಗುತ್ತಿದೆ. ಇದನ್ನು ತಡೆಯಲು ಅಂಡರ್‌ಗ್ರೌAಡ್ ಕೇಬಲ್‌ಗಳ ಮೂಲಕ ವಿದ್ಯುತ್ ಸಂಪರ್ಕ ನೀಡಬೇಕೆಂದು ಒತ್ತಾಯಿಸಿದರು. ಅಮೃತ್ -೨ ಯೋಜನೆಯಡಿಯಲ್ಲಿ ಈಗಾಗಲೇ ರಸ್ತೆಗಳನ್ನು ಅಗೆದು ನೀರು ಸರಬರಾಜು ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆಯೇ ಕೇಬಲ್ ಅಳವಡಿಕೆ ಕೂಡ ಮಾಡಿದಲ್ಲಿ ರಸ್ತೆಯನ್ನು ಮತ್ತೆ ಅಗೆಯುವ ಕೆಲಸ ತಪ್ಪಲಿದೆ ಎಂದು ಕೂಡ ಮಂತರ್ ಅಭಿಪ್ರಾಯಪಟ್ಟರು.