ಶನಿವಾರಸಂತೆ, ಮಾ. ೧೨: ಸಮೀಪದ ಕೊಡ್ಲಿಪೇಟೆಯ ಕಲ್ಲಳ್ಳಿಮಠ ಹಾಗೂ ಶ್ರೀವೀರಶೈವ ಸಮಾಜದ ಸಹಯೋಗದಲ್ಲಿ ಮಠಾಧೀಶ ರುದ್ರಮುನಿ ಮಹಾ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪುರೋಹಿತ ಬಳಗದವರಿಂದ ಶ್ರೀವೀರಭದ್ರ ಮಹಾಸ್ವಾಮಿಯವರ ೭೧ನೇ, ಶ್ರೀಸಂಗಮೇಶ್ವರ ಮಹಾ ಸ್ವಾಮಿಯ ೩೫ನೇ ಪುಣ್ಯಸ್ಮರಣೆ ಹಾಗೂ ಶ್ರೀಚೌಡೇಶ್ವರಿ ತಾಯಿಯ ೧೨೨ನೇ ಮಹಾಪೂಜೆ (ಪರೇವು) ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಿತು.
ಗುರುವಾರ ಬೆಳಿಗ್ಗೆ ಶ್ರೀವೀರಭದ್ರ ಮಹಾಸ್ವಾಮಿ ಹಾಗೂ ಶ್ರೀಸಂಗಮೇಶ್ವರ ಮಹಾಸ್ವಾಮಿಯ ಗದ್ದುಗೆಗಳ ಶಿವಲಿಂಗಕ್ಕೆ ರುದ್ರಾಭಿಷೇಕ, ಲಿಂಗ ದೀಕ್ಷೆ (ಶಿವದೀಕ್ಷೆ) ಹಾಗೂ ಮಹಾ ಪೂಜೆ ಹಾಗೂ ರಾತ್ರಿ ಹೋಮ-ಹವನ ನಡೆದು ತೀರ್ಥ-ಪ್ರಸಾದ ವಿನಿಯೋಗವಾಯಿತು. ಶುಕ್ರವಾರ ಬೆಳಿಗ್ಗೆ ಶ್ರೀತಾಯಿ ಚೌಡೇಶ್ವರಿ ದೇವಿಗೆ ಶ್ರೀರುದ್ರಾಭಿಷೇಕ, ಹೂವಿನ ಅಲಂಕಾರ, ಅಷ್ಟೋತ್ತರ ಕುಂಕುಮಾರ್ಚನೆ, ಮಹಾ ಮಂಗಳಾರತಿಯಾಗಿ ತೀರ್ಥ-ಪ್ರಸಾದ ವಿನಿಯೋಗವಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಯನ್ನು ಏರ್ಪಡಿಸಲಾಗಿತ್ತು.
ಶ್ರೀರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಪುರೋಹಿತ ಬಳಗದವರಾದ ಮಂಜುನಾಥ್, ಶಂಕರಯ್ಯ, ಮೃತ್ಯುಂಜಯ, ರಮೇಶ್ ಅವರುಗಳು ಪೂಜಾ ವಿಧಿ ನೆರವೇರಿಸಿದರು. ಶ್ರೀವೀರಶೈವ ಸಮಾಜದ ಪದಾಧಿಕಾರಿಗಳು ಹಾಜರಿದ್ದರು. ಕಲ್ಲಳ್ಳಿ, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಶನಿವಾರಸಂತೆಯ ನೂರಾರು ಮಂದಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.