ನಾಪೋಕ್ಲು, ಮಾ.೧೦: ಇಲ್ಲಿಗೆ ಸಮೀಪದ ಕೂರುಳಿ ಸುಭಾಷ್ ನಗರದಲ್ಲಿ ನಾಗಸನ್ನಿಧಾನದ ಪುನರ್ ಪ್ರತಿಷ್ಠಾಪನೆಯ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು. ೧೩ ವರ್ಷಗಳಿಂದ ಆರಾಧಿಸುತ್ತಾ ಬಂದಿರುವ ನಾಗ ಸನ್ನಿಧಾನದ ಪುನರ್ ಪ್ರತಿಷ್ಠಾಪನೆಯ ಪ್ರಯುಕ್ತ ಪೂಜಾ ಕಾರ್ಯಗಳನ್ನು ಸಾಂಪ್ರ ದಾಯಿಕವಾಗಿ ನಡೆಸಲಾಯಿತು.
ಪಂಚಗವ್ಯ ಪುಣ್ಯಾಹ, ಸಪ್ತಶುದ್ಧಿ ವಾಸ್ತುಬಲಿ, ಬಿಂಭಶುದ್ಧಿ ಪೂಜೆಗಳು ಹಾಗೂ ಗಣಹೋಮ, ಪ್ರತಿಷ್ಠಾಪನಾ ಹೋಮಗಳು, ಆಶ್ಲೇಷ ಬಲಿ ಹಾಗೂ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನೆರವೇರಿತು.
ಪೂಜಾ ವಿಧಿ ವಿಧಾನವನ್ನು ನಾಪೋಕ್ಲು ಶ್ರೀ ಭಗವತಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಅವರು ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.