ಸುಂಟಿಕೊಪ್ಪ, ಮಾ.೯: ಶಾಲಾ ಕಾಲೇಜು ಹಂತದಲ್ಲೇ ಸಾಹಿತ್ಯ ಕುರಿತು ಆಸಕ್ತಿ ಹೆಚ್ಚಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವುದು ದತ್ತಿ ಉಪನ್ಯಾಸಗಳ ಉದ್ದೇಶವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿ ಸಮೂಹವನ್ನು ಗುರಿಯಾಗಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದು ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಹೇಳಿದರು.

ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕುಶಾಲನಗರ ತಾಲೂಕು ಘಟಕ ಆಯೋಜಿತ ಎಸ್.ಎಸ್ ರಾಮಮೂರ್ತಿ ದತ್ತಿ ಮತ್ತು ದಿವಂಗತ ಪಿ.ಎಸ್ ಬೀರಪ್ಪ ದತ್ತಿನಿಧಿ ಉಪನ್ಯಾಸದಲ್ಲಿ ಉಪನ್ಯಾಸ ನೀಡಿದ ಅವರು, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ಕೆಲಸವಾಗಬೇಕಾಗಿದೆ. ಸಾಹಿತಿಯೊಬ್ಬ ಪದ್ಯ ಅಥವಾ ಗದ್ಯವನ್ನು ರಚಿಸಿದಾಗ ನೂತನ ಭಾವನಾ ಪ್ರಪಂಚವನ್ನು ಸೃಷ್ಟಿಸಿ ಸೃಷ್ಟಿಕರ್ತ ಎನಿಸಿಕೊಳ್ಳುತ್ತಾನೆ ಎಂದು ಮುನೀರ್ ಅಹ್ಮದ್ ಬಣ್ಣಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಶಾಲನಗರ ತಾಲೂಕು ಕಸಾಪ ಘಟಕದ ನಿರ್ದೇಶಕ ಎಂ.ಎA. ಕಾಳಪ್ಪ ಅವರು, ಮಕ್ಕಳು ಕೀಳರಿಮೆಯನ್ನು ದೂರವಿಟ್ಟು ಸಮಾಜಮುಖಿಯಾಗಿ ಬಾಳಬೇಕೆಂದು ಕರೆ ನೀಡಿದರು. ಮಾನವನು ಸಂಘ ಜೀವಿಯಾಗಿದ್ದು, ತಮ್ಮ ಆದಾಯದಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕಾಗಿ ನೀಡಬೇಕೆಂದು ಕರೆ ನೀಡಿದರು.

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಅವಕಾಶಗಳಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ಕೊಡಗು ಕಸಾಪ ದತ್ತಿನಿಧಿಗಳ ಉಪನ್ಯಾಸ ಆಯೋಜನೆಯಿಂದ ನಮ್ಮ ಹಿರಿಯರು, ಸಾಹಿತಿಗಳು ಮತ್ತು ಕನ್ನಡ ಭಾಷಾ ಪೋಷಕರಿಗೆ ಗೌರವ ಸಲ್ಲಿಸದಂತಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ಎಸ್.ಜಿ ಶ್ರೀನಿವಾಸ್ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ವಾಚಿಸುವ ಮೂಲಕ ಹೆಚ್ಚು ಸಾಹಿತ್ಯ ಜ್ಞಾನವನ್ನು ಪಡೆಯಬೇಕು, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಗಳು ಸಾಹಿತ್ಯ ಪರ ಕಾಳಜಿಯನ್ನು ಎತ್ತಿ ಹಿಡಿಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಾದ ಜೆ.ಎಸ್ ಪೂರ್ವಿಕ, ಅಫ್ರಿನಾ ಮತ್ತು ಎಸ್ ಕಾವ್ಯ ಅವರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷರಾದ ಪಿ.ಎಫ್ ಸಬಾಸ್ಟೀನ್ ವಹಿಸಿದರು.

ಸಮಾರಂಭದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಬಾಲಕೃಷ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಇ ಕರೀಂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಪಿ.ಇ ನಂದ, ಸುಂಟಿಕೊಪ್ಪ ಹೋಬಳಿ ಕಸಾಪ ಕಾರ್ಯದರ್ಶಿ ಲೀಲಾ ಮೇದಪ್ಪ, ಕುಶಾಲನಗರ ತಾಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ದೇವಿಪ್ರಸಾದ್, ನಿರ್ದೇಶಕರುಗಳಾದ ಬಿ.ಸಿ ದಿನೇಶ್, ಜಿ.ಬಿ ಹರೀಶ್, ಸುಲೈಮಾನ್, ಕೊಡಗಿನ ಗೌರಮ್ಮ ಅವರ ಮೊಮ್ಮಗಳಾದ ರಾಜಲಕ್ಷಿö್ಮ, ಕರಿಬಸಪ್ಪ ಅಡ್ಮನಿ, ಮಾಜಿ ಅಧ್ಯಕ್ಷ ಎಂ.ಎಸ್ ಸುನಿಲ್ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಕುಶಾಲನಗರ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ.ವಿ ಶೈಲಾ ಸ್ವಾಗತಿಸಿದರು, ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಲಿಯೋನಾ ಕಾರ್ಯಕ್ರಮ ನಿರೂಪಿಸಿ ಸುಂಟಿಕೊಪ್ಪ ಹೋಬಳಿ ಕಸಾಪ ಮಾಜಿ ಅಧ್ಯಕ್ಷ ವಹೀದ್‌ಜಾನ್ ವಂದಿಸಿದರು.