ಕುಶಾಲನಗರ, ಮಾ. ೮: ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಹಾಗೂ ಇತರ ವಾಹನಗಳ ಸಂಚಾರಕ್ಕೆ ತೊಂದರೆ ಆಗುವಂತೆ ವೀಲ್ಹಿಂಗ್ ಮಾಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರ ಮೇಲೆ ಕುಶಾಲನಗರ ಸಂಚಾರಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಕುಶಾಲನಗರ ಬೈಚನಹಳ್ಳಿ ಬಳಿ ಹೆದ್ದಾರಿ ರಸ್ತೆಯಲ್ಲಿ ಬೈಕ್ ಚಾಲಕ ಯಾಸಿನ್ ಎಂಬಾತ ಕೆ ಎ ೦೯ ಹೆಚ್ ಡಬ್ಲ್ಯೂ ೦೧೮೬ ಕೆಟಿಎಂ ಡ್ಯೂಕ್ ಮೋಟಾರ್ ಬೈಕ್‌ನಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಚಾಲನೆ ಮಾಡಿದ್ದು, ಸಂಚಾರಿ ಪೊಲೀಸರು ಬೈಕ್‌ನ್ನು ವಶಪಡಿಸಿಕೊಂಡು ಯಾಸಿನ್ ಮತ್ತು ಬೈಕ್ ಮಾಲೀಕ ಸೂರ್ಯ ಎಂಬವರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕುಶಾಲನಗರ ಗೌಡ ಸಮಾಜ ರಸ್ತೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಕೆ ಎ ೧೩ ಹೆಚ್‌ಎ೬೫೩೬ ಯಮಹಾ ಬೈಕ್‌ನ್ನು ೧೦ನೇ ತರಗತಿ ವಿದ್ಯಾರ್ಥಿ ಹೆಲ್ಮೆಟ್ ಧರಿಸದೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ಬಾಲಕ ಮತ್ತು ಬೈಕ್ ಚಾಲನೆ ಮಾಡಲು ನೀಡಿದ ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ.