ಕುಶಾಲನಗರ, ಮಾ. ೮: ಟಿಬೆಟಿಯನ್ ನೂತನ ವರ್ಷದ ಆಚರಣೆ ಅಂಗವಾಗಿ ಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಚಿತ್ರಪರದೆ ಎಂಬ ಖ್ಯಾತಿ ಪಡೆದಿರುವ ಬುದ್ಧ ಅಮಿತಾಯುಶ್ ಪರದೆಯನ್ನು ಪ್ರದರ್ಶನ ಮಾಡಲಾಯಿತು.

ಗೋಲ್ಡನ್ ಟೆಂಪಲ್ ಆವರಣದಲ್ಲಿ ಏಳು ಮಹಡಿಗಳ ಕಟ್ಟಡದ ಮೇಲೆ ಅಳವಡಿಸಿರುವ ಬೃಹತ್ ಕಬ್ಬಿಣದ ಗೋಪುರದಲ್ಲಿ ೨೦೦ ಅಡಿ ಎತ್ತರ ೧೮೦ ಅಡಿ ಅಗಲ ವಿಸ್ತೀರ್ಣಉಳ್ಳ ಚಿತ್ರಪರದೆಯನ್ನು ಕೇವಲ ಅರ್ಧ ಗಂಟೆಗಳ ಕಾಲ ಪ್ರದರ್ಶನಕ್ಕೆ ಇಡಲಾಯಿತು.

ಟಿಬೆಟಿಯನ್ ಧರ್ಮಗುರುಗಳು, ಬೌದ್ಧ ಭಿಕ್ಷುಗಳು, ನಾಗರಿಕರು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಚಿತ್ರಪರದೆ ವೀಕ್ಷಣೆ ಜೊತೆಗೆ ಪೂಜೆ ಸಲ್ಲಿಸಿ ಪುನೀತರಾದರು. ನೂತನ ವರ್ಷ ಆಚರಣೆಯ ಸಂದರ್ಭ ಗೋಲ್ಡನ್ ಟೆಂಪಲ್‌ನಲ್ಲಿ ಇರಿಸಿರುವ ಎರಡು ಬೃಹತ್ ಪರದೆಗಳನ್ನು ಒಂದು ತಿಂಗಳ ಕಾಲದ ಆಚರಣೆ ಅವಧಿಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಬುದ್ಧ ಪದ್ಮ ಸಂಭವ ಚಿತ್ರಪರದೆಯನ್ನು ೧೫ ದಿನಗಳ ಹಿಂದೆ ಪ್ರದರ್ಶನಕ್ಕೆ ಇಡಲಾಗಿತ್ತು. ಬೃಹತ್ ಚಿತ್ರಪರದೆಯನ್ನು ಸುಮಾರು ೨೦೦ಕ್ಕೂ ಅಧಿಕ ಬೌದ್ಧ ಭಿಕ್ಷುಗಳು ಸ್ವರ್ಣ ಮಂದಿರ ಆವರಣದಿಂದ ಹೊತ್ತು ಪ್ರದರ್ಶನಕ್ಕೆ ತಂದ ದೃಶ್ಯ ನಿಜಕ್ಕೂ ರೋಚಕವಾಗಿ ಕಾಣುತ್ತಿತ್ತು. ಕಳೆದ ೨೬ ವರ್ಷಗಳಿಂದ ಪ್ರತಿವರ್ಷ ನೂತನ ವರ್ಷ ಆಚರಣೆ ಸಂದರ್ಭದಲ್ಲಿ ಈ ಚಿತ್ರಪರದೆಗಳನ್ನು ಕೇವಲ ಅರ್ಧ ಗಂಟೆಗಳ ಕಾಲ ಬೃಹತ್ ಕಟ್ಟಡದ ಗೋಪುರದಲ್ಲಿ ಅಳವಡಿಸಿ ಪ್ರದರ್ಶನಕ್ಕೆ ಇಟ್ಟು ಪೂಜೆ ಸಲ್ಲಿಸುವುದು ಪದ್ಧತಿಯಾಗಿದೆ.

ಬುದ್ಧ ಪದ್ಮ ಸಂಭವ ಚಿತ್ರಪಟ ವೀಕ್ಷಿಸಿದರೆ ತಮ್ಮೆಲ್ಲರಿಗೆ ನೆಮ್ಮದಿ ಮತ್ತು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಭಗವಂತನು ಅನುಗ್ರಹ ಕಲ್ಪಿಸುತ್ತಾನೆ. ಬುದ್ಧ ಅಮಿತಾಯುಶ್ ಚಿತ್ರಪಟ ವೀಕ್ಷಿಸಿದಲ್ಲಿ ತಮ್ಮ ಆಯುಷ್ಯ ವೃದ್ಧಿಯಾಗುತ್ತದೆ ಎನ್ನುವ ಬಲವಾದ ನಂಬಿಕೆ ಟಿಬೆಟಿಯನ್ ನಾಗರಿಕರದ್ದಾಗಿದೆ.

ಚಿತ್ರಪಟ ಪ್ರದರ್ಶನ ನಂತರ ಗೋಲ್ಡನ್ ಟೆಂಪಲ್ ಆವರಣದಲ್ಲಿ ಟಿಬೆಟಿಯನ್ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಹೊಸ ವರ್ಷ ಆಚರಣೆ ಕಾರ್ಯಕ್ರಮಗಳು ಸಮಾಪ್ತಿಗೊಂಡಿತು.

ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಆವರಿಸಿದ ಹಿನ್ನೆಲೆಯಲ್ಲಿ ವಿಶ್ವದ ಅನೇಕ ದೇಶಗಳಿಂದ ಬೈಲುಕುಪ್ಪೆ ಶಿಬಿರಕ್ಕೆ ಆಗಮಿಸಬೇಕಾಗಿದ್ದ ನೂರಾರು ಸಂಖ್ಯೆಯ ಟಿಬೆಟ್ ಸಮುದಾಯ ಬಾಂಧವರು ಮತ್ತು ವಿದೇಶಿಯರು ಬೈಲುಕೊಪ್ಪೆಯಲ್ಲಿ ಈ ಬಾರಿ ನೂತನ ವರ್ಷಾಚರಣೆಗೆ ಪಾಲ್ಗೊಂಡಿರಲಿಲ್ಲ.