ಮಡಿಕೇರಿ, ಮಾ. ೮: ನಗರದ ಮಂಗಳಾದೇವಿ ನಗರ ಹಾಗೂ ಸುದರ್ಶನ್ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯವರು ಮನೆ ಮನೆ ಭೇಟಿ ಮಾಡಿ ಸ್ವಚ್ಚತೆ ಮತ್ತು ಲಾರ್ವಾ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ಬೇಸಿಗೆ ಕಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿ ಎಚ್ಚರ ವಹಿಸುವಂತೆ ತಿಳಿಸಿದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಶ್ರೀನಾಥ್ ಮಾತನಾಡಿ, ಸ್ವಚ್ಛ ಪರಿಸರ ಮತ್ತು ಶುದ್ದ ನೀರು ಕುರಿತು ಅರಿವು ಮೂಡಿಸುತ್ತಾ ಅಶುದ್ದ ನೀರು ಮತ್ತು ಪರಿಸರದಿಂದ ವಾಂತಿ, ಬೇಧಿ, ಕಾಮಾಲೆ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದ್ದು ಎಚ್ಚರ ವಹಿಸುವಂತೆ ಮಾಹಿತಿ ನೀಡಿದರು. ತೆರೆದಿಟ್ಟ ಸಿಹಿತಿಂಡಿಗಳು, ಬೀದಿ ಬದಿಯಲ್ಲಿ ಕತ್ತರಿಸಿ ಮಾರಾಟ ಮಾಡುವ ಹಣ್ಣುಗಳು, ತಿನ್ನದಂತೆ ಮತ್ತು ವೈಯಕ್ತಿಕ ಶುಚಿತ್ವ ಕಾಪಾಡುವಂತೆ ತಿಳಿಸಿ ಸಾಬೂನಿನಿಂದ ಕೈ ತೊಳೆಯುವುದು ಅಭ್ಯಾಸ ಮಾಡಿಕೊಳ್ಳಲು ತಿಳಿಸಿದರು. ಶುದ್ಧವಾದ ಸರಳ ಆಹಾರ ಮತ್ತು ಹೆಚ್ಚು ನೀರು ಕುಡಿಯುವಂತೆ ಮಾಹಿತಿ ನೀಡಿ ಬೇಸಿಗೆಯಲ್ಲಿ ಆರೋಗ್ಯ ಕಾಪಾಡುವ ಕುರಿತು ಆರೋಗ್ಯ ಶಿಕ್ಷಣ ನೀಡಿದರು.

ಈ ವೇಳೆ ಆರೋಗ್ಯ ಅಧಿಕಾರಿಗಳಾದ ದೇವಿ ಪ್ರಸಾದ್, ದರ್ಶನ್, ಶಭನಂ, ನಯನ, ಶೈಲಜ, ಜಯಶ್ರೀ, ಅಶ್ವಿನಿ, ದಿವ್ಯ, ಸ್ವಾತಿ, ಶ್ರೀಮತಿ, ನಾಗರತ್ನ, ಬೇಬಿ, ಝುರಾ, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.