ಕಣಿವೆ, ಮಾ. ೭: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಜನತಾ ನಗರದ ಗ್ರಾಮದೇವತೆ ಪಟ್ಲದಮ್ಮ ದೇವರ ವಾರ್ಷಿಕ ಪೂಜೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನೆರವೇರಿತು. ದೇವತಾ ಮೂರ್ತಿಗೆ ವಿವಿಧ ಅಭಿಷೇಕಗಳು ಜರುಗಿದವು. ಬಳಿಕ ಬಗೆ ಬಗೆಯ ಹೂವುಗಳಿಂದ ದೇವತಾ ಮೂರ್ತಿಯನ್ನು ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ನೆರೆದ ಭಕ್ತರಿಗೆ ಅನ್ನಸಂತರ್ಪಣೆ ಪ್ರಸಾದ ವಿನಿಯೋಗ ಜರುಗಿತು. ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಆರ್. ಮಂಜು, ಉಪಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಲೋಕೇಶ್, ಕಾರ್ಯದರ್ಶಿ ಚಿರಂಜೀವಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.